ಬೆಳಗಾವಿ ಅಖಾಡಕ್ಕೆ ಏಕಕಾಲಕ್ಕೆ ಮೋದಿ ಮತ್ತು ಸಿದ್ದರಾಮಯ್ಯ ಎಂಟ್ರಿ

Ravi Talawar
WhatsApp Group Join Now
Telegram Group Join Now

ಬೆಳಗಾವಿ, ಏಪ್ರಿಲ್​ 27: ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆಯಿತು. ಇನ್ನುಳಿದ 14 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ. ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳು ಸೇರಿವೆ. ಈ ಹಿನ್ನೆಲೆಯಲ್ಲಿ ಪ್ರಚಾರ ಇನ್ನೂ ನಡೆದಿದೆ. ರಾಜಕೀಯ ಪವರ್​ ಸೆಂಟರ್ ಎನಿಸಿಕೊಂಡಿರುವ ಬೆಳಗಾವಿ ಅಖಾಡಕ್ಕೆ ಏಕಕಾಲಕ್ಕೆ ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಧುಮುಕಲಿದ್ದಾರೆ.

ಏಪ್ರಿಲ್ 28ರ ಬೆಳಿಗ್ಗೆ 11ಕ್ಕೆ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ ನಡೆಸಲಿದ್ದು, ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಇದೇ ದಿನದಂದು ಬೆಳಗಾವಿ ಮತ್ತು ಚಿಕ್ಕೋಡಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಚಿಕ್ಕೋಡಿ ಕ್ಷೇತ್ರ ವ್ಯಾಪ್ತಿಯ ಉಗಾರ್ ಖುರ್ದ್, ಬೆಳಗಾವಿ ಕ್ಷೇತ್ರದ ಯರಗಟ್ಟಿಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಒಂದೇ ದಿನ ಎರಡೂ ಕ್ಷೇತ್ರಗಳಲ್ಲಿ ತಲಾ ಒಂದೊಂದು ಸಮಾವೇಶ ನಡೆಸಲಿದ್ದಾರೆ.

ಬೆಳಗಾವಿ ಕಳೆದ ಎರಡು ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿದೆ. ಇನ್ನು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲೂ ಬಿಜೆಪಿ ತನ್ನದೆಯಾದ ಪ್ರಭಾವ ಹೊಂದಿದೆ. ಹೀಗಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಈ ಬಾರಿ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಈ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಲ್​ ಹೆಬ್ಬಾಳ್ಕರ್​​ ಅವರನ್ನು ಕಣಕ್ಕಿಳಿಸಿ, ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಅವರನ್ನು ಮಣಿಸಲು ರಣತಂತ್ರ ರೂಪಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಏ.27) ರಾತ್ರಿ 8.50ಕ್ಕೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ನಗರದ ಐಟಿಸಿ ಹೋಟೆಲ್​​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ (ಏ.28) ಬೆಳಿಗ್ಗೆ 10.55ಕ್ಕೆ ಹೋಟೆಲ್​ನಿಂದ ಹೊರಡುವ ಪ್ರಧಾನಿ ಮೋದಿ, 11 ಗಂಟೆಗೆ ಮಾಲಿನಿ ಸಿಟಿ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ 11.55 ಬೆಳಗಾವಿಯಿಂದ ಶಿರಸಿಗೆ ಪ್ರಯಾಣ ಬೆಳಸಲಿದ್ದಾರೆ.

ಮಧ್ಯಾಹ್ನ 12.55ಕ್ಕೆ ಉತ್ತರ ಕನ್ನಡ ಜಿಲ್ಲೆ ಶಿರಸಿಗೆ ಆಗಮಿಸುವ ಮೋದಿ, 1 ಗಂಟೆಗೆ ಶಿರಸಿ ಸಮಾವೇಶದಲ್ಲಿ ಭಾಗಿಯಾಗುತ್ತಾರೆ. 2 ಗಂಟೆಗೆ ಶಿರಸಿಯಿಂದ ಹೊರಟು 2.50ಕ್ಕೆ ದಾವಣಗೆರೆಗೆ ತಲುಪಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ದಾವಣಗೆರೆ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ. ನಂತರ 4.05ಕ್ಕೆ ದಾವಣಗೆರೆಯಿಂದ ಹೊಸಪೇಟೆ ಕಡೆಗೆ ಹೊರಡುವ ಪ್ರಧಾನಿ ಮೋದಿ, ಸಂಜೆ 4.50ಕ್ಕೆ ಹೊಸಪೇಟೆ ತಲುಪಲಿದ್ದಾರೆ. 5 ಗಂಟೆಗೆ ಹೊಸಪೇಟೆ ಸಮಾವೇಶದಲ್ಲಿ ಭಾಗಿಯಾಗಿ, 6 ಗಂಟೆಗೆ ಹೊಸಪೇಟೆ ಹೋಟೆಲ್​ಗೆ ಆಗಮಿಸಿ, ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಏಪ್ರಿಲ್ 29ರ ಬೆಳಗ್ಗೆ 11 ಗಂಟೆಗೆ ಹೊಸಪೇಟೆಯಿಂದ ಮೋದಿ ನಿರ್ಗಮಿಸಿ, ಮಧ್ಯಾಹ್ನ 12.15ಕ್ಕೆ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆಯಲಿರುವ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗುತ್ತಾರೆ. ಮಧ್ಯಾಹ್ನ 1.05ಕ್ಕೆ ಬಾಗಲಕೋಟೆಯಿಂದ ಸೊಲ್ಲಾಪುರಕ್ಕೆ ಪ್ರಯಾಣ ಬೆಳಸಲಿದ್ದಾರೆ.

ಬೆಳಗಾವಿಗೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಇಂದು (ಏ.27) ರ ಮುಂಜಾನೆ 6 ಗಂಟೆಯಿಂದ ನಾಳೆ (28)ರ ಸಂಜೆ 6 ಗಂಟೆಯವರಗೆ ಡ್ರೋನ್ ಹಾರಾಟಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ತಾಲೂಕಿನ ವ್ಯಾಪ್ತಿಯನ್ನು ರೆಡ್ ಜೋನ್ ಎಂದು ಘೋಷಿಸಿದೆ.

WhatsApp Group Join Now
Telegram Group Join Now
Share This Article