ಇವಿಎಂ ತಿರುಚಲು 2.5 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ: ಸೇನಾ ಜವಾನ ಬಂಧನ

Ravi Talawar
WhatsApp Group Join Now
Telegram Group Join Now

ಮಹಾರಾಷ್ಟ್ರ,08: ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ತಿರುಚಲು 2.5 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಪಟ್ಟಣದಲ್ಲಿ ಸೇನಾ ಜವಾನನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೇನಾ ಜವಾನ ಇವಿಎಂ ತಿರುಚಲು ಶಿವಸೇನೆ (ಯುಬಿಟಿ) ನಾಯಕ ಅಂಬಾದಾಸ್ ದಾನ್ವೆ ಅವರಿಗೆ 2.5 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಲಾಗಿದೆ.

ವಿದ್ಯುನ್ಮಾನ ಮತಯಂತ್ರಗಳನ್ನು ಚಿಪ್ ಮೂಲಕ ತಿರುಚಲು ಸಾಧ್ಯವೆಂದು ಹೇಳಿದ ಆರೋಪಿ ಮಾರುತಿ ಧಾಕ್ನೆ (42) ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಿರುವ ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ದಾನ್ವೆ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ ಎಂದು ಅಧಿಕಾರಿ ಮಂಗಳವಾರ ಮಾಹಿತಿ ನೀಡಿದರು. ಇವಿಎಂ ತಿರುಚುವ ಮೂಲಕ ನಿರ್ದಿಷ್ಟ ಅಭ್ಯರ್ಥಿಯೊಬ್ಬರಿಗೆ ಹೆಚ್ಚು ಮತ ಬರುವಂತೆ ಮಾಡಲು ಸಾಧ್ಯ ಎಂದು ಆರೋಪಿಯು ದಾನ್ವೆ ಅವರಿಗೆ ಮಾಹಿತಿ ನೀಡಿದ್ದ.

ಆರೋಪಿಗೆ ಇವಿಎಂಗಳ ಬಗ್ಗೆ ಏನೂ ಗೊತ್ತಿಲ್ಲ ಮತ್ತು ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಆರೋಪಿಯು ಸೇನಾ (ಯುಬಿಟಿ) ನಾಯಕನ ಕಿರಿಯ ಸಹೋದರ ರಾಜೇಂದ್ರ ದಾನ್ವೆ ಅವರನ್ನು ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಬಳಿಯ ಹೋಟೆಲ್​ನಲ್ಲಿ ಭೇಟಿಯಾಗಿದ್ದ. ಮಾತುಕತೆಯ ನಂತರ 1.5 ಕೋಟಿ ರೂ.ಗೆ ಇವಿಎಂ ತಿರುಚುವ ಒಪ್ಪಂದವನ್ನು ಅಂತಿಮಗೊಳಿಸಲಾಯಿತು ಎಂದು ಅಧಿಕಾರಿ ಹೇಳಿದರು.

ಆದರೆ ಇದಕ್ಕೂ ಮುನ್ನವೇ ಅಂಬಾದಾಸ್ ದಾನ್ವೆ ನೀಡಿದ ಮಾಹಿತಿಯ ಆಧಾರದ ಮೇಲೆ ಸಿವಿಲ್ ಉಡುಪಿನಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ರಾಜೇಂದ್ರ ದಾನ್ವೆ ಅವರಿಂದ ಟೋಕನ್ ಮೊತ್ತವಾಗಿ 1 ಲಕ್ಷ ರೂ.ಗಳನ್ನು ಪಡೆಯುತ್ತಿರುವ ಸಮಯದಲ್ಲಿಯೇ ಪೊಲೀಸರು ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

“ಆರೋಪಿಯು ದೊಡ್ಡ ಮೊತ್ತದ ಸಾಲ ಮಾಡಿಕೊಂಡಿದ್ದಾನೆ. ಆತನಿಗೆ ಇವಿಎಂಗಳ ಬಗ್ಗೆ ಏನೂ ಗೊತ್ತಿಲ್ಲ. ತನ್ನ ಸಾಲ ತೀರಿಸಲು ಈ ತಂತ್ರ ಹೂಡಿದ್ದಾನೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ಇಲ್ಲಿನ ಕ್ರಾಂತಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸ್ ಆಯುಕ್ತ ಮನೋಜ್ ಲೋಹಿಯಾ ಸುದ್ದಿಗಾರರಿಗೆ ತಿಳಿಸಿದರು.

ಆರೋಪಿ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಪಥರ್ಡಿ ನಿವಾಸಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article