ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಕಾಣ್ತಾರೆ: ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಮತ್ತೊಂದು ವಿವಾದ

Ravi Talawar
WhatsApp Group Join Now
Telegram Group Join Now

ಹೊಸದಿಲ್ಲಿ: ಇತ್ತೀಚೆಗಷ್ಟೇ, ಅಮೆರಿಕದಲ್ಲಿರುವಂತೆ ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ಹಾಕುವ ಪದ್ಧತಿಯನ್ನು ಭಾರತದಲ್ಲೂ ಜಾರಿಗೆ ತರಬೇಕು ಎಂದು ಹೇಳಿ ವಿವಾದ ಭುಗಿಲೆಬ್ಬಿಸಿದ್ದ ಸಾಗರೋತ್ತರ ಕಾಂಗ್ರೆಸ್ ಪಕ್ಷದ ನಾಯಕ ಸ್ಯಾಮ್ ಪಿತ್ರೋಡಾ, ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ಬಾರಿ ಅವರು ಮಾಡಿರುವುದು ಜನಾಂಗೀಯ ನಿಂದನೆಯಾಗಿದೆ.

‘ದ ಸ್ಟೇಟ್ಸ್ ಮನ್’ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಭಾರತವು ಅತ್ಯುತ್ತಮ ಪ್ರಜಾಪ್ರಭುತ್ವ ಆಧಾರಿತ ರಾಷ್ಟ್ರವೆಂಬ ಹೆಗ್ಗಳಿಕೆ ಗಳಿಸಿರುವುದರ ಹಿಂದಿನ ಕಾರಣಗಳ ಬಗ್ಗೆ ಮಾತನಾಡಿದ್ದಾರೆ. ಆ ಸಂದರ್ಭದಲ್ಲಿ, ಭಾರತೀಯರು ಕಳೆದ 75 ವರ್ಷಗಳಿಂದಲೂ ತಮ್ಮೆಲ್ಲಾ ವೈವಿಧ್ಯತೆಗಳ ನಡುವೆಯೇ ಸಂತೋಷದಿಂದ ಜೀವನ ನಡೆಸಿಕೊಂಡು ಬಂದಿದ್ದಾರೆ. ಅಲ್ಲಿ ಇಲ್ಲಿ ಕೆಲವಾರು ಗಲಭೆಗಳಾಗಿರಬಹುದು. ಆದರೆ, ಬಹುಬೇಗನೇ ಅದೆಲ್ಲವನ್ನೂ ಮರೆತು ಒಟ್ಟಿಗೇ ಜೀವನ ನಡೆಸುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ.

“ಭಾರತದ ಪೂರ್ವ ಭಾಗದವರು ಚೀನಾದವರಂತೆ ಕಾಣುತ್ತಾರೆ, ದಕ್ಷಿಣ ಭಾರತೀಯರು ಆಫ್ರಿಕರನ್ನರಂತೆ ಕಾಣುತ್ತಾರೆ. ಇನ್ನು, ಭಾರತದ ಪಶ್ಚಿಮ ಭಾಗದವರು ಅರಬ್ಬರಂತೆ ಕಂಡರೆ, ಉತ್ತರ ಭಾರತೀಯರು ಬಿಳಿ ಚರ್ಮವುಳ್ಳವರಾಗಿದ್ದಾರೆ. ತಮ್ಮ ಬಣ್ಣ, ಸಂಸ್ಕೃತಿಗಳಲ್ಲಿ ಇಂಥ ಹಲವಾರು ವ್ಯತ್ಯಾಸಗಳಿದ್ದರೂ ಭಾರತೀಯರೆಲ್ಲರೂ ಉತ್ತಮವಾಗಿ,ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ವೈವಿಧ್ಯತೆಗಳ ನಡುವೆಯೂ ಒಗ್ಗಟ್ಟಿನಿಂದ, ಸಹಮತದಿಂದ ಜೀವನ ಸಾಗಿಸುತ್ತಿರುವುದೇ ಭಾರತೀಯರ ಹೆಗ್ಗಳಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದ ಸಂಸ್ಕೃತಿ, ಜನಜೀವನದ ವೈಶಿಷ್ಟ್ಯಗಳ ಬಗ್ಗೆ ಅವರು ಮಾತನಾಡಿರುವುದು ಸರಿಯಷ್ಟೇ. ಆದರೆ, ಅವರು ಪೂರ್ವಭಾಗದವರು ಚೀನಾದವರಂತೆ, ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಕಾಣುತ್ತಿದ್ದಾರೆಂದು ಹೇಳಿರುವುದು ಜನಾಂಗೀಯ ನಿಂದನೆಯ ಆರೋಪಗಳ ಬಿರುಗಾಳಿಯನ್ನು ಎಬ್ಬಿಸಿದೆ. ಅಲ್ಲದೆ, ಅನ್ಯದೇಶಗಳ ಜನರಿಗೆ ಹೋಲಿಸುವ ಮೂಲಕ ಭಾರತೀಯರಿಗೆ ಅವರು ಅಪಮಾನ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳೂ ಎದ್ದಿವೆ.

ಪಿತ್ರೋಡಾ ಅವರ ಈ ಮಾತುಗಳಿಗೆ ಕಿಡಿಕಾರಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, “ಸ್ಯಾಮ್ ಅಣ್ಣನವರೇ, ನಾವು ಭಾರತೀಯರು. ಬಣ್ಣ ಭಾಷೆಗಳಲ್ಲಿ ವೈವಿಧ್ಯತೆ ಹೊಂದಿದ್ದರೂ ನಾವೆಲ್ಲರೂ ಭಾರತೀಯರೇ ಆಗಿದ್ದೇವೆ, ಭಾರತೀಯರಂತೆಯೇ ಕಾಣುತ್ತೇವೆ. ಉದಾಹರಣೆಗೆ, ನಾನು ಈಶಾನ್ಯ ರಾಜ್ಯದವನಾಗಿದ್ದರೂ ನಾನು ಭಾರತೀಯನಂತೆಯೇ ಕಾಣುತ್ತೇನೆಯೇ ಹೊರತು ಅನ್ಯದೇಶವನಂತೆ ಕಾಣುವುದಿಲ್ಲ. ಇಲ್ಲಿ ಎಲ್ಲರೂ ಅಷ್ಟೇ. ನಮ್ಮ ದೇಶದ ಯಾವುದೇ ಭಾಗದ ಜನರು ಭಾರತೀಯರೇ ಆಗಿರುತ್ತಾರೆ. ಸ್ವಲ್ಪ ನಮ್ಮ ದೇಶದ ವೈವಿಧ್ಯತೆ ಬಗ್ಗೆ ಹಾಗೂ ಅದರ ವಿಶೇಷತೆಯ ಬಗ್ಗೆ ತಿಳಿದುಕೊಳ್ಳಿ’’ ಎಂದು ಹೇಳಿದ್ದಾರೆ.

ಅತ್ತ, ಬಾಲಿವುಡ್ ನಟಿ ಹಾಗೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿ, “ಸ್ಯಾಮ್ ಪಿತ್ರೋಡಾ ಅವರ ಈ ಹೇಳಿಕೆಯು ಜನಾಂಗೀಯ ನಿಂದನೆ ಮಾತ್ರವಲ್ಲ, ಇದು ಭಾರತೀಯರನ್ನು ಒಡೆಯುವಂಥ ಹೇಳಿಕೆ. ಅವರು ರಾಹುಲ್ ಗಾಂಧಿಯವರ ಗುರು. ಈ ಗುರು – ಶಿಷ್ಯರದ್ದು ದೇಶ ಒಡೆದು ಆಳುವ ನೀತಿಯನ್ನು ಹೊಂದಿದ್ದಾರೆ. ಭಾರತೀಯರನ್ನು ಚೀನೀಯರು, ಆಫ್ರಿಕನ್ನರು ಎಂದು ಹೇಳಿರುವುದು ಕಾಂಗ್ರೆಸ್ಸಿಗರು ರೋಗಗ್ರಸ್ಥ ಮನಸ್ಥಿತಿಯುಳ್ಳುವರು ಎಂಬುದನ್ನು ಮತ್ತು ಸಾಬೀತುಪಡಿಸಿದೆ’’ ಎಂದು ಗುಡುಗಿದ್ದಾರೆ.

WhatsApp Group Join Now
Telegram Group Join Now
Share This Article