ಶ್ರೀಗಳು ಯಾರ ಪರವೂ ಅಲ್ಲ, ಒಕ್ಕಲಿಗರು ದಡ್ಡರಲ್ಲ: ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿಗೆ ಟಾಂಗ್

Ravi Talawar
WhatsApp Group Join Now
Telegram Group Join Now

ಬೆಂಗಳೂರು,ಏಪ್ರಿಲ್ 10: ಬೆಂಗಳೂರಿನಲ್ಲಿ NDA ಮೈತ್ರಿ ಅಭ್ಯರ್ಥಿದಗಳು ಒಕ್ಕಲಿಗ ಸಮುದಾಯದ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿಗಳನ್ನು ಭೇಟಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ KPCC ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಶ್ರೀಗಳು ಯಾರ ಪರವೂ ಅಲ್ಲ ಎಂದು ಹೇಳುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಅತ್ತ ಬಿಜೆಪಿ ನಾಯಕರು ಒಕ್ಕಲಿಗ ಸ್ವಾಮೀಜಿಯ ಭೇಟಿ ಮಾಡುತ್ತಲೇ ಇತ್ತ ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, ‘ಶ್ರೀಗಳು ಯಾರ ಪರವೂ ಇಲ್ಲ, ಮಠಕ್ಕೆ ಬಂದ ಪ್ರತೀಯೊಬ್ಬರಿಗೂ ವಿಭೂತಿ ಇಟ್ಟು ಆಶೀರ್ವದಿಸಿ ಕಳುಹಿಸುತ್ತಾರೆ. ಬಿಜೆಪಿಗರ ನಾಟಕವನ್ನು ಜನ ನೋಡುತ್ತಿದ್ದಾರೆ. ನಮ್ಮ ಸಮಾಜದ ಜನರು ಏನ್ ಗಮನಿಸಬೇಕೋ ಅದನ್ನ ಗಮನಿಸ್ತಿದ್ದಾರೆ. ಇದೇ ಕುಮಾರಸ್ವಾಮಿಯವರನ್ನು ಸಿಎಂ ಸ್ಥಾನದಿಂದ ಬಿಜೆಪಿಯವರೇ ಇಳಿಸಿದ್ರು. ಈಗ ಅವರ ಜೊತೆಗೇ ಆಶೀರ್ವಾದ ಪಡೆಯಲು ಹೋಗಿದ್ದಾರೆ ಎಂದರು.

‘ಅವರು ಮಠಕ್ಕೆ ಹೋಗಿ ಸ್ವಾಮೀಜಿಯನ್ನು ಭೇಟಿ ಮಾಡುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಒಕ್ಕಲಿಗರು ಮತ್ತು ಸಮುದಾಯದ ಜನರು ಮೂರ್ಖರಲ್ಲ. ಶ್ರೀಗಳು ಯಾರೇ ಮಠಕ್ಕೆ ಬಂದರೂ ಅವರನ್ನು ಆಶೀರ್ವದಿಸಿ ಕಳುಹಿಸುತ್ತಾರೆ. ಈ ಹಿಂದೆ ನಮ್ಮ ಅಭ್ಯರ್ಥಿಗಳೂ ಕೂಡ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಶ್ರೀಗಳು ಮಠಕ್ಕೆ ಬರುವ ಪ್ರತೀಯೊಬ್ಬರಿಗೂ ಆಶೀರ್ವಾದ ನೀಡುತ್ತಾರೆ. ಒಕ್ಕಲಿಗರು ಮತ್ತು ಸ್ವಾಮೀಜಿಗಳು ದಡ್ಡರಲ್ಲ. ಸ್ವಾಮೀಜಿಗಳ ಬಳಿ ಬರುವವರಿಗೆ ವಿಭೂತಿ, ಹೂವಿನ ಹಾರ ಹಾಕಿ ಕಳಿಸುತ್ತಾರೆ. ಅವರು ನಮ್ಮ ಪರ, ಅವರ ಪರ ಇಬ್ಬರ ಪರವೂ ಮಾಡುವುದಿಲ್ಲ. ಸ್ವಾಮೀಜಿಗಳು ಬುದ್ಧಿವಂತರು ರಾಜಕೀಯದಲ್ಲಿ ಅವರು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.

ಕುಮಾರಸ್ವಾಮಿ ಅವರು ಯಾರನ್ನ ಟೀಕೆ ಮಾಡಿಲ್ಲ ಹೇಳಿ. ಪ್ರಣಾಳಿಕೆ ಬಿಡಿ, ಕುಮಾರಸ್ವಾಮಿ ಅವರು ನಮ್ಮ ಪ್ರತಿ ವಿಚಾರವನ್ನು ಟೀಕೆ ಮಾಡುತ್ತಾರೆ. ಮೇಕೆದಾಟು ಪಾದಯಾತ್ರೆ ಟೀಕೆ ಮಾಡಿದ್ದವರು ಈಗ ಮೇಕೆದಾಟು ಯೋಜನೆ ಜಾರಿಗೆ ಶಪಥ ಮಾಡುವುದಾಗಿ ಹೇಳಿದ್ದಾರೆ. ಅವರು ಮಠದ ಸ್ವಾಮೀಗಳನ್ನೂ ಬಿಟ್ಟಿಲ್ಲ. ಎರಡು ಮಠ ಮಾಡಿದ್ದಾರೆ. ಜನತಾದಳದವರು ಮಠವನ್ನು ಇಬ್ಭಾಗ ಮಾಡಿರುವ ಬಗ್ಗೆ ಸ್ವಾಮೀಜಿಗಳಿಗೆ ಅರಿವಿದೆ. ಈಗ ದಿನಬೆಳಗಾದರೆ ಮಠಕ್ಕೆ ಹೋಗಿ ಭೇಟಿ ಮಾಡುತ್ತಾರೆ. ಅವರು ತಮ್ಮ ಮಾತಿಗೆ ಎಂದಿಗೂ ಬದ್ಧರಾಗಿರುವುದಿಲ್ಲ. ಹೀಗಾಗಿ ಅವರ ಮಾತನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.

WhatsApp Group Join Now
Telegram Group Join Now
Share This Article