ಚುನಾವಣೆ ಮುನ್ನ 25,000 ಪೆನ್ ಡ್ರೈವ್ ಹಂಚಿಕೆ ಹಿಂದೆ ಡಿಕೆಶಿ ಪಿತೂರಿ: ಕುಮಾರಸ್ವಾಮಿ ಆರೋಪ

Ravi Talawar
WhatsApp Group Join Now
Telegram Group Join Now

ಬೆಂಗಳೂರು,07: ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳಿರುವ 25 ಸಾವಿರ ಪೆನ್‌ಡ್ರೈವ್‌ಗಳನ್ನು ಲೋಕಸಭೆ ಚುನಾವಣೆಗೂ ಮುನ್ನ ಹಂಚಲಾಗಿದೆ. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪಿತೂರಿಯಿದೆ ಎಂದು ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಮಂಗಳವಾರ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪ ಕುರಿತ ತನಿಖೆಗಾಗಿ ಏಪ್ರಿಲ್ 28 ರಂದು ಕಾಂಗ್ರೆಸ್ ಸರ್ಕಾರ ರಚಿಸಿದ ಎಸ್ ಐಟಿ, ಇದು ವಿಶೇಷ ತನಿಖಾ ತಂಡವಲ್ಲ “ಸಿದ್ದರಾಮಯ್ಯ ತನಿಖಾ ತಂಡ” ಮತ್ತು “ಶಿವಕುಮಾರ್ ತನಿಖಾ ತಂಡ” ಎಂದು ಲೇವಡಿ ಮಾಡಿದರು. ಬೆದರಿಕೆ ಹಾಕಿ ಪೊಲೀಸ್ ಅಧಿಕಾರಿಗಳಿಂದ ಪೆನ್ ಡ್ರೈವ್ ಹಂಚಿಕೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲೂ ಅವುಗಳ ಹಂಚಿಕೆಯಾಗಿದೆ. ಇದು ಏಪ್ರಿಲ್ 21 ರಂದೇ ನಡೆದಿದೆ. ಏಪ್ರಿಲ್ 22 ರಂದು ಈ ಸಂಬಂಧ ನಮ್ಮ ಚುನಾವಣಾ ಏಜೆಂಟ್, ಪೂರ್ಣಚಂದ್ರ ಅವರು ಜಿಲ್ಲಾಧಿಕಾರಿಗೆ ದೂರು ನೀಡಿರುವುದಾಗಿ ತಿಳಿಸಿದರು.

ಪ್ರಜ್ವಲ್ ರೇವಣ್ಣ ಅವರ ವಿಡಿಯೋ ನೋಡಲು ವಾಟ್ಸಾಪ್ ಚಾನೆಲ್ ಫಾಲೋ ಮಾಡಲು ಜನರಿಗೆ ಹೇಳಿ ಎಂದು ಏಪ್ರಿಲ್ 21 ರಂದು ರಾತ್ರಿ 8 ಗಂಟೆಗೆ ಪೂರ್ಣಚಂದ್ರ ಅವರಿಗೆ ಸಂದೇಶ ಬಂದಿತ್ತು. ಈ ವಾಟ್ಸಾಪ್ ನಲ್ಲಿ ‘ಪ್ರಜ್ವಲ್ ಅವರ ವಿಡಿಯೋ ಬಿಡುಗಡೆಗೆ ಕೌಂಟ್‌ಡೌನ್’ ಎಂಬ ಸಂದೇಶವಿತ್ತು. ಇದನ್ನು ನವೀನ್ ಗೌಡ ಕಳುಹಿಸಿದ್ದ. ಪೂರ್ಣಚಂದ್ರ ಹಾಸನ ಜಿಲ್ಲಾಧಿಕಾರಿ, ಎಸ್ ಪಿಗೆ ನೀಡಿದ ದೂರಿನಲ್ಲಿ ನವೀನ್ ಗೌಡ, ಕಾರ್ತಿಕ್ ಗೌಡ, ಚೇತನ್, ಪುಟ್ಟರಾಜ್ ಸೇರಿದಂತೆ ಐವರ ಹೆಸರನ್ನು ಉಲ್ಲೇಖಿಸಿದ್ದರು ಎಂದು ಕುಮಾರಸ್ವಾಮಿ ಹೇಳಿದರು.

ಏಪ್ರಿಲ್ 21 ರಂದು ದೂರು ನೀಡಿ ಹದಿನೈದು ದಿನ ಕಳೆದರೂ ಈ ಐದು ಜನರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ವಿಡಿಯೋಗಳಲ್ಲಿದ್ದ ಮಹಿಳೆಯರ ಮಾನ ಹರಾಜು ಮಾಡುವ ಮುನ್ನಾ ಈ ಐವರನ್ನು ಬಂಧಿಸಬೇಕಾಗಿತ್ತು. ಇಡೀ ರಾಜ್ಯದಲ್ಲಿ 25,000 ಪೆನ್‌ಡ್ರೈವ್‌ಗಳನ್ನು ವಿತರಿಸಲಾಗಿದೆ ಎಂದು ಆರೋಪಿಸಿದರು. ಈ ಕುರಿತು ವರದಿಯೊಂದನ್ನು ಉಲ್ಲೇಖಿಸಿದರು. ಯಾರಾದರೂ ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಪೋಸ್ಟ್ ಮಾಡಿದರೆ, ತಕ್ಷಣವೇ ಮನೆಗಳನ್ನು ಹುಡುಕಲಾಗುತ್ತದೆ ಮತ್ತು ವ್ಯಕ್ತಿಯನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಲಾಗುತ್ತದೆ.ದೂರು ನೀಡಿದರೂ ಈ ಐದು ಜನರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ?’ ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆಯಲ್ಲಿ ಮೂವರೂ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸದಿಂದ ಹೇಳಿದ್ದರು. ಇದರಲ್ಲಿ ‘ಹಲವರ ಕೈವಾಡದ ಬಗ್ಗೆ ಅನುಮಾನ ಮೂಡಿದೆ. “ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳ ಬಗ್ಗೆ ಎಸ್‌ಐಟಿ ತನಿಖೆಗೆ ಒತ್ತಾಯಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಏಪ್ರಿಲ್ 25 ರಂದು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಅದೇ ರಾತ್ರಿ ಸಿಎಂ ಒಪ್ಪಿಗೆ ನೀಡಿ ಎಸ್‌ಐಟಿ ರಚನೆಗೆ ಆದೇಶಿಸಿದರು ಎಂದು ಕುಮಾರಸ್ವಾಮಿ ಹೇಳಿದರು.

ತಮ್ಮ ಸಹೋದರ ಹೆಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧದ ಮೊದಲ ದೂರನ್ನು ಬೆಂಗಳೂರಿನಲ್ಲಿ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ ಹೊಳೆನರಸೀಪುರಕ್ಕೆ ಏಪ್ರಿಲ್ 28 ರಂದು ಕಳುಹಿಸಲಾಗಿದೆ. ಇದು ವಿಶೇಷ ತನಿಖಾ ತಂಡವಲ್ಲ ಆದರೆ ಅದರೊಳಗೆ ಎರಡು ತಂಡಗಳಿವೆ ಒಂದು ಸಿದ್ದರಾಮಯ್ಯ ತನಿಖಾ ತಂಡ’ ಮತ್ತು ಇನ್ನೊಂದು ಶಿವಕುಮಾರ್ ತನಿಖಾ ತಂಡ’ ಎಂದು ಆರೋಪಿಸಿದ ಕುಮಾರಸ್ವಾಮಿ, ಪೆನ್ ಡ್ರೈವ್ ಕಥೆಯ ಸೂತ್ರದಾರ ಕಾರ್ತಿಕ್ ಗೌಡ ಅವರನ್ನು ಮೊದಲು ಪತ್ತೆ ಹಚ್ಚಿ ಜನರ ಮುಂದೆ ತರಬೇಕು ಎಂದು ಒತ್ತಾಯಿಸಿದರು.

WhatsApp Group Join Now
Telegram Group Join Now
Share This Article