ನಾಳೆ ಏ. 26 ರಿಂದ ಭಾವೈಕ್ಯತೆಯ ಸಂಗಮ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಜಾತ್ರೆ

Ravi Talawar
WhatsApp Group Join Now
Telegram Group Join Now

ಗೋಕಾಕ,25: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ಗೋಕಾಕ ತಾಲ್ಲೂಕಿನ ಸಾವಳಗಿಯ ಸಿದ್ಧ ಸಂಸ್ಥಾನಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಇದೇ ಏ. ೨೬ರಿಂದ ಮೇ ೪ರ ವರೆಗೆ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿಯಲ್ಲಿ ಸಂಭ್ರಮದಿಂದ ಜಾತ್ರೆ ಜರುಗಲಿದೆ. ಜಾತ್ರೆಯ ನಿಮಿತ್ತವಾಗಿ ಪುರಾಣ, ಸಂಗೀತ, ಕಲೆ, ಸಾಹಿತ್ಯ, ಸಾಂಸ್ಕೃತಿಕ, ಕೃಷಿ,ಜಾನುವಾರುಗಳ ಮೇಳ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ.

ಜಾತ್ರೆ ಕಾರ್ಯಕ್ರಮಗಳು: ಏ.೨೬ರಂದು ರಾತ್ರಿ ೮.೩೦ಕ್ಕೆ ಶಿವಲಿಂಗೇಶ್ವರ ಮೂರ್ತಿಗೆ ಪುಷ್ಪಾಂದೋಲನ, ಪಲ್ಲಕ್ಕಿ ಕಟ್ಟೆ ಮುಹುರ್ತ ಮಾಡುವರು. ಏ. ೨೭ರಂದು ಬೆಳಿಗ್ಗೆ ಬೆಳಿಗ್ಗೆ ೧೦.೩೦ರಿಂದ ಮಧ್ಯಾಹ್ನ ೧೨.೩೦ರ ವರೆಗೆ ವೀರಭದ್ರೇಶ್ವರ ದೇವರ ಕೊಂಡವನ್ನು ದಾಟುವುದು. ಸಂಜೆ ೭.೩೦ಕ್ಕೆ ಪ್ರವಚನ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳ ಉದ್ಘಾಟನೆಯಾಗುವುದು. ಪ್ರತಿ ದಿನ ಸಂಜೆ ೮ಕ್ಕೆ ವಿವಿಧ  ವಿಷಯಗಳ ಕುರಿತು ಉಪನ್ಯಾಸ ಇರುವುದು.

ಮೇ ೩ರಂದು ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಅವರ ಪ್ರಾರ್ಥನಾ ಭಕ್ತಿ ಗೀತೆಗೆಳ ಧ್ವನಿಮುದ್ರಿಕೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಬಿಡುಗಡೆ ಮಾಡುವರು.

    

ಮೇ ೪ರಂದು ಸಂಜೆ ೪.೩೦ಕ್ಕೆ ಅಡ್ಡಪಲ್ಲಕ್ಕಿ ಜರುಗುವುದು. ರಾತ್ರಿ ೮ಕ್ಕೆ ಜಗದ್ಗುರುಗಳ ಸನ್ನಿಧಿಯಲ್ಲಿ ಜಾತ್ರೆಯ ಸಮಾರೋಪ ಸಮಾರಂಭ ಜರುಗುವುದು. ಜಾತ್ರೆಯ ಪ್ರತಿ ನಿತ್ಯ ಪ್ರವಚನದ ನಂತರ ಸನ್ನಿಧಿಯವರು ಆಶೀರ್ವಚನ ನೀಡುವರು.

ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಗಮ: ದೈವಾಂಶ ಪುರುಷರು ಆಗಿರುವ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರರು ಕ್ರಿ.ಶ. ೧೬೪೫ರಿಂದ ಕ್ರಿ.ಶ. ೧೭೪೮ರ ಅವಧಿಯಲ್ಲಿ ಹಲವಾರು ಪವಾಡುಗಳ ಮೂಲಕ ಭಕ್ತರ ಹೃದಯದಲ್ಲಿ ನೆಲೆಸಿರುವರು. ಕಲಬುರ್ಗಿಯ ಹಿರೇಸಾವಳಗಿ ಬಳಿಯ ಕೊಳ್ಳೂರು ಗ್ರಾಮದಲ್ಲಿ ಶರಣ ಲಿಂಗಬಸಪ್ಪ ಹಾಗೂ ಸದ್ಗುಣಿ ಮಲ್ಲಮ್ಮ ಇವರ ಉದರದಲ್ಲಿ ಶಿವಲಿಂಗೇಶ್ವರರ ಪಾವನ ಜನನವಾಯಿತು. ಬಾಲ್ಯ ಮತ್ತು ಯೌವ್ವನದಲ್ಲಿ ಅನೇಕ ಪವಾಡಗಳ ಮೂಲಕ ದೈವತ್ವವನ್ನು ಹೊಂದಿದ್ದರು.

ಲೋಕಕಲ್ಯಾಣಕ್ಕಾಗಿ ಸಂಚಾರಗೈಯುತ್ತ ಗೋಕಾಕ ತಾಲ್ಲೂಕಿನ ಸಾವಳಗಿಯ ಘಟಪ್ರಭಾ ನದಿಯ ತಟದಲ್ಲಿ ನೆಲೆಸಿ ತಪಸ್ಸುಗೈದರು. ಶಿವಲಿಂಗೇಶ್ವರರ ತಪಸ್ಸಿನ ಪ್ರಭಾವವು ಕಲಬುರ್ಗಿಯ ಬಾದಷ ಹ ಸುಲ್ತಾನ್ ರೋಜ್ ಬಹದ್ದೂರನ ಗುರು ಬಂದೇನವಾಜ್ ವಲಿಯವರ ಮೇಲೆ ಬೀರಿತ್ತು. ಮುಸಲ್ಮಾನ್ ಗುರು ಖಾಜಾ ಬಂದೇ ನವಾಜ್‌ರು ವೀರಶೈವ ಗುರು ಶಿವಲಿಂಗೇಶ್ವರರ ತಪಸ್ಸಿನ ಮಹಾಮಹಿಮೆಗೆ ಬೆರಗಾಗಿ ಬಂದೇನವಾಜರು ಶಮನ್, ಟೊಪ್ಪಿಗೆ ಮತ್ತು ಹಸಿರು ಶಲ್ಲೆಗಳನ್ನು ಉಡುಗೋರೆಯಾಗಿ ನೀಡಿ ನಮಸ್ಕರಿಸುತ್ತಾರೆ.

ಈ ಬಾಂಧ್ಯವದ ಪ್ರತೀಕವಾಗಿ ಸಾವಳಗಿಯ ಶ್ರೀಪೀಠವು ಇಂದಿಗೂ ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಬಿಂಬಿಸುವ ಜಾಗೃತ ಸ್ಥಳವಾಗಿದೆ. ಇಲ್ಲಿ ಬರುವ ಭಕ್ತರಿಗೆ ಮಠ ಮತ್ತು ಮಸೀದಿಯ ಎರಡೂ ಒಂದೆಡೆ ಕಾಣುವಂತಿದೆ. ಹಿಂದೂ-ಮುಸ್ಲಿಂ ವಾಸ್ತುಶಿಲ್ಪವನ್ನು ಹೊಂದಿರುವ ಸಾವಳಗಿಯ ಶ್ರೀಪೀಠವು ಭಾವೈಕ್ಯತೆಯ ಪ್ರತೀಕವಾಗಿದೆ. ಶ್ರೀಪೀಠವು ಉತ್ಸವಗಳಲ್ಲಿ ಸನ್ನಿಧಿಯವರು ಹಸಿರು ಬಣ್ಣದ ಪೇಟಾ, ಶಲ್ಯ, ಶಮನ ಮುಂತಾದ ರಾಜ ಪೋಷಾಕುಗಳನ್ನು ಧರಿಸುತ್ತಾರೆ.

ಭಕ್ತರು ದೀನ್ ಹರಹರಾ ಎಂಬ ಧರ್ಮ ಸಮನ್ವಯವನ್ನು ಸಾರುವ ಉದ್ಘೋಷ ಮಾಡುತ್ತಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಮತ್ತು ತಮಿಳುನಾಡು, ಕಾಶ್ಮೀರ ಸೇರಿದಂತೆ ದೇಶದ ಉದ್ದಗಲಕ್ಕೂ ೩೬೦ಕ್ಕೂ ಅಧಿಕ ಜಗದ್ಗುರು ಶಿವಲಿಂಗೇಶ್ವರರ ಮಠಗಳಿವೆ. ೧೧೦೦ಕ್ಕೂ ಅಧಿಕ ಗದ್ಗುಗೆಗಳಿವೆ. ಗೋಕಾಕ ತಾಲ್ಲೂಕಿನ ಸಾವಳಗಿಯಲ್ಲಿ ಜಗದ್ಗುರು ಶಿವಲಿಂಗೇಶ್ವರರು ಜೀವಂತ ಐಕ್ಯರಾಗಿರುವುದರಿಂದ ಸಾವಳಗಿಯು ಪುಣ್ಯಕ್ಷೇತ್ರವಾಗಿ ಮಹತ್ವ ಹೊಂದಿದೆ; ಅತ್ಯಂತ ಜಾಗೃತ ಸ್ಥಳವೆನಿಸಿದೆ.  ಭಕ್ತರ ಇಷ್ಟಿತಾರ್ಥವನ್ನು ಈಡೇರಿಸುವ ಕ್ಷೇತ್ರವೆನಿಸಿದೆ.

ಸದ್ಯ ಸಾವಳಗಿಯಲ್ಲಿಯ ಜಗದ್ಗುರು ಶಿವಲಿಂಗೇಶ್ವರರ ಮೂಲ ಮಠದಲ್ಲಿ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ೧೫ನೇ ಪೀಠಾಧಿಪತಿಗಳಾಗಿ ಲಕ್ಷಾಂತರ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕಮರವಾಡಿಯಲ್ಲಿ ಪುಣ್ಯಜನನ, ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಸಂಸ್ಕೃತ ವ್ಯಾಸಾಂಗವನ್ನು ಹೊಂದಿದ್ದಾರೆ. ಶ್ರೀಗಳು ಶ್ರೇಷ್ಠ ವಾಗ್ಮಿಗಳು, ಶ್ರೇಷ್ಠ ವಿಚಾರವಾದಿಗಳು, ಕಟ್ಟಾ ಶಿವಯೋಗಿಗಳು. ಶಿಕ್ಷಣ, ಕೃಷಿ, ಸಾಹಿತ್ಯ, ಸಂಗೀತ ಪ್ರೇಮಿಗಳಾಗಿದ್ದಾರೆ. ಶ್ರೀಮಠದಲ್ಲಿ ಇಂದಿಗೂ ದೇಶಿ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವುದು ಇಲ್ಲಿಯ ವಿಶೇಷವಾಗಿದೆ. ಜಾತ್ರೆಯಲ್ಲಿ ನಿತ್ಯ ಸನ್ನಿಧಿಯವರು ಆಶೀರ್ವಚನ ನೀಡುವರು.

ಜಾತ್ರೆಯ ಅಂಗವಾಗಿ ಸಾವಳಗಿಯು ತಳಿರು ತೋರಣಗಳು, ಜಾತ್ರೆಯ ಕುರಿತಾದ ಬ್ಯಾನರ್‌ಗಳು, ಸ್ವಾಗತಕಮಾನುಗಳು ಕಂಗೋಳಿಸುತ್ತಲಿವೆ. ಮಠದ ಆವರಣವು ರಂಗೋಲಿ ಚಿತ್ತಾರಗಳಿಂದ ಕಣ್ಮನ ಸೆಳೆಯುತ್ತಲಿದೆ. ವಿವಿಧೆಡೆಯಿಂದ ಭಕ್ತರ ಆಗಮನಕ್ಕೆ ಬಸ್‌ಗಳ ಸೌಲಭ್ಯವಿದೆ.

 

WhatsApp Group Join Now
Telegram Group Join Now
Share This Article