ರಾಜ್ಯದಲ್ಲಿ ತಗ್ಗಲಿದೆ ತಾಪಮಾನ, ಮೂರು ವಾರ ವರುಣನ ಅಬ್ಬರ!

Ravi Talawar
WhatsApp Group Join Now
Telegram Group Join Now

ಬೆಂಗಳೂರು ಮೇ,04: ಶುಕ್ರವಾರವಷ್ಟೇ ಬೆಂಗಳೂರು, ಮೈಸೂರು ಸೇರಿ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ತೀವ್ರ ಬಿಸಿಲಿನಿಂದ ಕಂಗೆಟ್ಟಿದ್ದ ಜನಕ್ಕೆ ಮಳೆರಾಯ ತಂಪೆರೆದಿದ್ದು, ಜನರ ಮುಖದಲ್ಲಿ ಒಂದಿಷ್ಟು ಸಂತಸ ಮೂಡಿದೆ. ಮತ್ತೊಂದು ಖುಷಿಯ ವಿಚಾರ ಏನಂದ್ರೆ ಮೇ 19ರವರೆಗೂ ಕರ್ನಾಟಕದಲ್ಲಿ ಉತ್ತಮ ಮಳೆ ಸುರಿಯಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಪೂರ್ವ ಮುಂಗಾರು ಅಬ್ಬರಿಸಲಿದೆ.

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಮೇ 11ರವರೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಮೇ 4 ರಿಂದ ಮೇ 6ರವರೆಗೆ ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು – ಸಿಡಿಲು ಸಹಿತ ಮಳೆಯಾಗಲಿದೆ. ಈ ವೇಳೆ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಇನ್ನು, ಮೇ 7 ರಿಂದ ಮೇ 11 ರವರೆಗೆ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಲಿದೆ. ಅದಲ್ಲದೇ ಮೇ 9 ರಿಂದ 11ರವರೆಗೆ ರಾಜ್ಯಾದ್ಯಂತ ಮಳೆ ಸುರಿಯಲಿದೆ ಎಂದು ಐಎಂಡಿ ತಿಳಿಸಿದೆ.

ಮೇಲಿನದ್ದು ಐಎಂಡಿ ಮುನ್ಸೂಚನೆಯಾದರೆ ಜಿಎಫ್‌ಎಸ್‌ ಪ್ರಕಾರ ಮೇ 19ರವರೆಗೆ ಕರ್ನಾಟಕದಲ್ಲಿ ಉತ್ತಮ ಮಳೆ ಸುರಿಯಲಿದೆ ಎಂದು ಹೇಳಲಾಗಿದೆ. ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ರಾಜ್ಯದ ಜನರಿಗೆ ಮುಂದಿನ ಮೂರು ವಾರಗಳ ಕಾಲ ಮಳೆ ತಂಪೆರೆಯಲಿದೆ ಎನ್ನಲಾಗಿದೆ. ಇದರೊಂದಿಗೆ ಪೂರ್ವ ಮುಂಗಾರು ರಾಜ್ಯದಲ್ಲಿ ಅಬ್ಬರಿಸಲಿದ್ದು, ಅನ್ನದಾತರ ಮುಖದಲ್ಲಿ ಸಂತಸ ಮೂಡಲಿದೆ ಎಂದು ಹೇಳಲಾಗಿದೆ.

ಶುಕ್ರವಾರ ಮಧ್ಯಾಹ್ನ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಬೆಂಗಳೂರು ಗ್ರಾಮೀಣದಲ್ಲಿ 79.5 ಮಿಮೀ ಮಳೆಯಾಗಿದ್ದರೆ, ಮೈಸೂರಿನಲ್ಲಿ 71 ಮಿಮೀ ಮಳೆಯಾಗಿದೆ. ಚಾಮರಾಜನಗರದಲ್ಲಿ 66.5 ಮಿಮೀ ಮಳೆಯಾಗಿದ್ದು, ಬೆಂಗಳೂರು ನಗರದಲ್ಲಿ 45 ಮಿಮೀ, ರಾಮನಗರದಲ್ಲಿ 42 ಮಿಮೀ, ಮಂಡ್ಯದಲ್ಲಿ 41 ಮಿಮೀ, ದಕ್ಷಿಣ ಕನ್ನಡದಲ್ಲಿ 34 ಮಿಮೀ, ಬೆಳಗಾವಿಯಲ್ಲಿ 33 ಮಿಮೀ, ಕೊಡಗಲ್ಲಿ 26 ಮಿಮೀ, ತುಮಕೂರಲ್ಲಿ 25 ಮಿಮೀ, ಹಾಸನದಲ್ಲಿ 22 ಮಿಮೀ ಮಳೆಯಾಗಿದೆ.

ಇನ್ನು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಡಿಗೇನಹಳ್ಳಿಯಲ್ಲಿ ಅತಿ ಹೆಚ್ಚು 79.5 ಮಿಮೀ ಮಳೆಯಾಗಿದ್ದು, ಮೈಸೂರಿನ ಸಿಂಗರಾಮನಹಳ್ಳಿಯಲ್ಲಿ 71 ಮಿಮೀ ಮಳೆಯಾಗಿದ್ದು, ಬೆಂಗಳೂರು ಗ್ರಾಮಾಂತರದ ದೊಡ್ಡಹುಲ್ಲೂರು ಗ್ರಾಮದಲ್ಲಿ 69 ಮಿಮೀ ಮಳೆ ದಾಖಲಾಗಿದ್ದು, ಚಾಮರಾಜನಗರದ ಕೊತಲವಾಡಿಯಲ್ಲಿ 66.5 ಮಿಮೀ ಮಳೆ ಬಿದ್ದಿರುವುದು ದಾಖಲಾಗಿದೆ.

ಇನ್ನು, ಮಳೆಯ ಮುನ್ಸೂಚನೆ ನೀಡಿದ್ದರು ಕೂಡ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಸೋಮವಾರದವರೆಗೂ ಯಥಾಸ್ಥಿತಿ ಇರಲಿದೆ. ಉತ್ತರ ಒಳನಾಡಿನ ರಾಯಚೂರು, ಕಲಬುರ್ಗಿ, ಬಾಗಲಕೋಟೆ ಯಾದಗಿರಿ ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸುಮಾರು 40 ರಿಂದ 46 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನವು ಸುಮಾರು 40 ರಿಂದ 44 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆಯಿದೆ. ಮೇ 7 ರಿಂದ ರಾಜ್ಯಾದ್ಯಂತ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ ಇಳಿಯಲಿದೆ.

WhatsApp Group Join Now
Telegram Group Join Now
Share This Article