2 ಕೋಟಿ ಮೌಲ್ಯದ ಅಕ್ರಮ ಮಾದಕ ವಸ್ತು ವಶ: ಐವರಿ ಕೋಸ್ಟ್ ಪ್ರಜೆ ಬಂಧನ

Ravi Talawar
WhatsApp Group Join Now
Telegram Group Join Now

ಬೆಂಗಳೂರು,ಏಪ್ರಿಲ್ 05: ಬೆಂಗಳೂರು ಪೊಲೀಸರು ಐವರಿ ಕೋಸ್ಟ್ ಪ್ರಜೆಯೊಬ್ಬನನ್ನು ಬಂಧಿಸಿದ್ದು ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳಕ್ಕೆ ಸಿಕ್ಕ ಮಾಹಿತಿ ಮೇರೆಗೆ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ತಂಡವು ಮಾದಕ ದ್ರವ್ಯ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ 33 ವರ್ಷದ ಸೆಕಾ ಘಿಸ್ಲೇನ್ ತಾನೊ ಎಂಬಾತನನ್ನು ಬೊಮ್ಮನಹಳ್ಳಿಯಲ್ಲಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದ್ದಾರೆ.

ಸೆಕಾ ಘಿಸ್ಲೇನ್ ಬಳಿಯಿದ್ದ ಮೊಬೈಲ್ ಫೋನ್ ಮತ್ತು ತೂಕದ ಯಂತ್ರದೊಂದಿಗೆ ಬಿಳಿ, ಕಂದು, ಹಳದಿ ಮತ್ತು ಗುಲಾಬಿ ಸೇರಿದಂತೆ ಎರಡು ಕೆಜಿ ಎಂಡಿಎಂಎ (ಮೆಥಿಲೀನ್ ಡಿಯೋಕ್ಸಿ ಮೆಥಾಂಫೆಟಮೈನ್) ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

2022ರಲ್ಲಿ ವ್ಯಾಪಾರ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದ ಸೆಕಾ ಘಿಸ್ಲೇನ್ ನಂತರ ಮುಂಬೈ ಮತ್ತು ದೆಹಲಿಯಲ್ಲಿ ಗಾರ್ಮೆಂಟ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದಾಗಿ ಸುಳ್ಳು ಹೇಳಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎಂದು ದಯಾನಂದ ತಿಳಿಸಿದರು.

ಸೆಕಾ ಘಿಸ್ಲೇನ್ ವಿರುದ್ಧ 2022ರಲ್ಲಿ ಶಂಕರಪುರ ಪೊಲೀಸ್ ಠಾಣೆಯಲ್ಲಿ ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಕಳೆದ ಅಕ್ಟೋಬರ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದನು. ಆದರೆ ಬಿಡುಗಡೆ ಆದ ನಂತರವೂ ಅದೇ ಅಕ್ರಮ ದಂಧೆ ಮುಂದುವರಿಸಿದ್ದನು. ಸದ್ಯ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ದಯಾನಂದ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article