ದೈವಜ್ಞ ಸಮಾಜದ ಮುಖಂಡರು ಕಾಂಗ್ರೆಸ್ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡಿ: ಎಚ್.ಕೆ. ಪಾಟೀಲ

Ravi Talawar
WhatsApp Group Join Now
Telegram Group Join Now

ಗದಗ: ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮನವಿ ಮಾಡಿದರು.

ನಗರದ ಹುಬ್ಬಳ್ಳಿ ರಸ್ತೆಯಲಿರುವ ಗಣಪತಿ ಪಾಲನಕರ ಅವರ ನಿವಾಸದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ನಡೆದ ದೈವಜ್ಞ ಸಮಾಜದವರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ನನಗೆ ಆಶೀರ್ವದಿಸಿ ನೈತಿಕ ಬಲ ತುಂಬಿದ್ದೀರಿ. ದೈವಜ್ಞ ಸಮಾಜ ಸಂಪೂರ್ಣವಾಗಿ ಎಚ್.ಕೆ. ಪಾಟೀಲ ಅವರ  ಹಿಂದೆ ಇದೆ ಎಂಬುದನ್ನು ತೋರ್ಪಡಿಸಿದ್ದೀರಿ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಎಂಪಿಯಾಗಲು ಸಮರ್ಥರಿದ್ದು, ತಾವೆಲ್ಲರೂ ಮತ ನೀಡಿ ಆಶೀರ್ವದಿಸಬೇಕು. ನನ್ನ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದ ಬಡಮಹಿಳೆಯರಿಗೆ ಮಾಸಿಕ 2,000 ರೂ. ನಂತೆ 9 ಕಂತುಗಳ ರೂಪದಲ್ಲಿ ಗೃಹಲಕ್ಷ್ಮೀ ಯೋಜನೆ ಮನೆ-ಮನೆಗೆ ತಲುಪಿದೆ. ನಿಮ್ಮ ಸಮಾಜವೇ ನಮ್ಮ ಸರಕಾರಕ್ಕೆ ಗ್ಯಾರಂಟಿ ಕೊಡುವ ರೀತಿಯಲ್ಲಿದೆ. ಆದ್ದರಿಂದ ಬಡವರ, ಶ್ರಮಿಕರ ಕಲ್ಯಾಣಕ್ಕಾಗಿ ಕಾಂಗ್ರೆಸ್‌ನ್ನು ಬೆಂಬಲಿಸಿ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ನೆಲ ಅಲುಗಾಡತೊಡಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 3 ವರ್ಷದೊಳಗೆ ಶ್ರೀಮಂತರ 14 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. ಆದರೆ, ರಾಜ್ಯದಲ್ಲಿ ವರ್ಷವಿಡಿ ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ಕೋಟಿ ಖರ್ಚು ಮಾಡಿದರೆ, ರಾಜ್ಯ ದಿವಾಳಿಯಾಗುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ಶ್ರೀಮಂತರ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದಾಗ ಆಗದ ದಿವಾಳಿತನ, ರಾಜ್ಯದಲ್ಲಿ ಬಡವರಿಗೆ 58 ಸಾವಿರ ಕೋಟಿ. ವ್ಯಯ ಮಾಡಿದರೆ ಹೇಗೆ ದಿವಾಳಿಯಾಗುತ್ತದೆ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ದೈವಜ್ಞ ಸಮಾಜದ ಮುಖಂಡರಾದ ಅರವಿಂದ ಪಾಲನಕರ, ಗಣಪತಿ ಪಾಲನಕರ, ಪ್ರಮೋದ ರಾಯ್ಕರ್, ಸಂತೋಷ ಕುಡರ‍್ಕರ, ಪ್ರಕಾಶ ರಾಯ್ಕರ್, ಮಹಿಳಾ ಮಂಡಳ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಮಾಜಿ ಅಧ್ಯಕ್ಷ ಪ್ರಭು ಬುರಬುರೆ ಸೇರಿ ಹಲವರಿದ್ದರು.

WhatsApp Group Join Now
Telegram Group Join Now
Share This Article