ಬಸ್ ಪಾಸ್ ವಿಸ್ತರಣೆ: ಪದವಿ ವಿದ್ಯಾರ್ಥಿಗಳ ಪರೀಕ್ಷೆ ಹಿನ್ನೆಲೆ ಕೆಎಸ್‌ಆರ್‌ಟಿಸಿ ನಿರ್ಧಾರ

Ravi Talawar
WhatsApp Group Join Now
Telegram Group Join Now

ಬೆಂಗಳೂರು, ಏಪ್ರಿಲ್05: 2023-24ನೇ ಸಾಲಿನ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗುತ್ತಿದೆ. ಇದೇ ವೇಳೆ ಕೆಎಸ್‌ಆರ್‌ಟಿಸೊ, ಬಿಎಂಟಿಸಿಯ ವಿದ್ಯಾರ್ಥಿಗಳ ಬಸ್‌ಪಾಸ್ ಅವಧಿ ಕಳೆದ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತೆ ಅವಧಿಯನ್ನು ವಿಸ್ತರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಈ ಬಗ್ಗೆ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಹಲವು ಸೂಚನೆಗಳನ್ನು ನೀಡಿದೆ. “ಪದವಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ದಿನಾಂಕ: 31.03.2024ಕ್ಕೆ ಮುಕ್ತಾಯಗೊಂಡಿದ್ದು, ಸದರಿ ಬಸ್ ಪಾಸ್ ಅವಧಿಯನ್ನು ವಿಸ್ತರಿಸುವಂತೆ ವಿಭಾಗಗಳಿಂದ ದೂರವಾಣಿ ಮುಖೇನ ಕೋರುತ್ತಿರುವುದನ್ನು ಪರಿಶೀಲಿಸಲಾಗಿದೆ” ಎಂದು ತಿಳಿಸಿದೆ.

“ಈಗಾಗಲೇ ಉಲ್ಲೇಖ-1 ರ ಸಾಮಾನ್ಯ ಸ್ಥಾಯಿ ಆದೇಶದ ಅನ್ವಯ ವಿದ್ಯಾರ್ಥಿ ಬಸ್ ಪಾಸ್ ಮಾನ್ಯತಾ ಅವಧಿ ಮುಕ್ತಾಯಗೊಂಡ ನಂತರ ಒಂದು ಅಥವಾ ಎರಡು ತಿಂಗಳ ಅವಧಿಗೆ ಬಸ್ ಪಾಸ್ ಅವಧಿ ವಿಸ್ತರಿಸಿ ನೀಡಲು ಅವಕಾಶವಿದೆ. ತಮ್ಮ ಹಂತದಲ್ಲಿಯೇ ಬಸ್ ಪಾಸ್ ವಿತರಿಸಲು ಕ್ರಮ ಕೈಗೊಳ್ಳದೇ, ವಿದ್ಯಾರ್ಥಿಗಳಿಗೆ ಅನಾನುಕೂಲ ಮಾಡುತ್ತಿರುವುದು ಸಮಂಜಸವಿರುವುದಿಲ್ಲ. ಆದಾಗ್ಯೂ ಈ ನಿಟ್ಟಿನಲ್ಲಿ ಕೆಳಕಂಡಂತೆ ಕ್ರಮವಹಿಸುವಂತೆ ತಿಳಿಸಲಾಗಿದೆ” ಎಂದು ಹೇಳಿದೆ.

1. ದಿನಾಂಕ 31.03.2024 ರಂದು ಮುಕ್ತಾಯವಾಗುವ ವಿದ್ಯಾರ್ಥಿ ಬಸ್ ಪಾಸುಗಳನ್ನು, ಪರೀಕ್ಷೆ ವೇಳಾಪಟ್ಟಿಗೆ ಅನುಗುಣವಾಗಿ ಮಾನ್ಯತಾ ಅವಧಿಯನ್ನು ಒಂದು ತಿಂಗಳು ಅಥವಾ ಗರಿಷ್ಠ ಎರಡು ತಿಂಗಳ ಅವಧಿಗೆ ವಿಸ್ತರಣೆ ಮಾಡುವುದು. 2. ಪಾಸ್‌ಗಳ ವಿಸ್ತರಣೆಗಾಗಿ ನಿಯಮಾವಳಿಯಂತೆ ಒಂದು / ಎರಡು ತಿಂಗಳ ಶುಲ್ಕ ಹಾಗೂ ಸಂಸ್ಕರಣ ಶುಲ್ಕವನ್ನು ಪಾವತಿಸಿಕೊಂಡು, ಸದರಿ ರಶೀದಿಯಲ್ಲಿ ವಿದ್ಯಾರ್ಥಿಯ ಹೆಸರು ಹಾಗೂ ಬಸ್ ಪಾಸಿನ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು. 3. 2023-24ನೇ ಸಾಲಿನ ಬಸ್‌ಪಾಸ್ ಮತ್ತು ಶುಲ್ಕ ಪಾವತಿ ರಶೀದಿ ಎರಡನ್ನೂ ತೋರಿಸಿ, ಪಾಸಿನಲ್ಲಿರುವ ಮಾರ್ಗದಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಲು ಅವಕಾಶ ಕಲ್ಪಿಸುವುದು.

4. ಮೇಲ್ಕಂಡ ಅಂಶಗಳನ್ವಯ ಮಾನ್ಯತಾ ಅವಧಿ ವಿಸ್ತರಿಸಿರುವ ಬಸ್ ಪಾಸ್‌ಗಳ ಸಂಖ್ಯೆಯ ವಿವರಗಳನ್ನು ಈ ಕಚೇರಿಗೆ ಒದಗಿಸಬೇಕು ಎಂದಿದೆ. ಈ ವಿವರಗಳನ್ನು ಚಾಲಕ ಮತ್ತು ನಿರ್ವಾಹಕರುಗಳಿಗೆ ಅಗತ್ಯ ಮಾಹಿತಿ ನೀಡಿ ಸೂಕ್ತ ಕ್ರಮವಹಿಸಲು ತಿಳಿಸಲಾಗಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

 

WhatsApp Group Join Now
Telegram Group Join Now
Share This Article