ಕಾವ್ಯ ಕಮ್ಮಟ ಏರ್ಪಡಿಸಲು ನಿರ್ಧಾರ: ವಿದ್ಯಾಧರ ಮುತಾಲಿಕ್ ದೇಸಾಯಿ

Ravi Talawar
WhatsApp Group Join Now
Telegram Group Join Now

ಬೆಳಗಾವಿ,ಏ.30: ವಿದ್ಯಾಧರ ಕನ್ನಡ ಪ್ರತಿಷ್ಠಾನ ಧಾರವಾಡ, ಮುಂಬೈ, ತೆಲಂಗಾಣ ಮತ್ತು ಹೊಂಬೆಳಕು ಸಾಂಸ್ಕೃತಿಕ ಸಂಘ ಬೆಳಗಾವಿ ಇವರ ಸಹಯೋಗದಲ್ಲಿ ಏರ್ಪಡಿಸಿದ ಕನ್ನಡ ನುಡಿ ತೇರು ೨೦೨೪ರ ನಿಮಿತ್ಯ ಹಮ್ಮಿಕೊಂಡ ಪಾಲಕರಿಗೆ ಸನ್ಮಾನ, ಸಾಧಕರಿಗೆ ಸನ್ಮಾನ, ಪ್ರಶಸ್ತಿ ಗೌರವ ಅರ್ಪಣೆ, ಕವಿಗೋಷ್ಠಿ, ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಧರ ಮುತಾಲಿಕ ದೇಸಾಯಿ ಅವರು, ಇಂದಿನ ಯುವ ಪೀಳಿಗೆಗೆ ಕಾವ್ಯದ ಪರಂಪರೆ ಮತ್ತು ಕಾವ್ಯ ರಚನೆ ತಿಳುವಳಿಕೆ ಮೂಡಿಸುವುದು ಕಾವ್ಯ ಕಮ್ಮಟ ಏರ್ಪಡಿಸುವುದು ಅಗತ್ಯ ಎಂದರು. ಈ ದಿಸೆಯಲ್ಲಿ ನಮ್ಮ ಪ್ರತಿಷ್ಠಾನ ಸದ್ಯದಲ್ಲಿಯೇ ಒಂದು ಕಾವ್ಯ ಕಮ್ಮಟ ಏರ್ಪಡಿಸುವುದನ್ನು ಘೋಷಿಸಿದರು.

ಇದೇ ಸಮಾರಂಭದಲ್ಲಿ ಡಾ. ಶ್ಯಾಮಲಾ ಪ್ರಕಾಶ ಅವರು, ರಚಿಸಿದ ಮಾತಿನೊಳಗಿನ ಧಾತು ದಾಸ ಸಾಹಿತ್ಯ ಮತ್ತು ಸಂಗೀತ ಚಿತ್ರಣಗಳು ಎಂಬ ಕೃತಿಯನ್ನು ಸ.ರಾ.ಸುಳಕುಡೆ ಅವರು ಬಿಡುಗಡೆಗೊಳಿಸಿದರು. ವಿದೂಷಿ ಡಾ. ಶ್ಯಾಮಲಾ ಪ್ರಕಾಶ ಅವರು ಈ ಕೃತಿಯಲ್ಲಿ ದಾಸ ಸಾಹಿತ್ಯದಲ್ಲಿ ಮೂಡಿ ಬಂದಿರುವ ಸಂಗೀತ ಚಿತ್ರಣಗಳನ್ನು ಸಮಗ್ರವಾಗಿ ವಿಶ್ಲೇಷಿಸಿದ್ದನ್ನು ಶ್ಲಾಘಿಸಿದರು.

ಕಥೆ ಹೇಳುವೆ ಮತ್ತು ಆಯ್ದ ಇತರ ಕತೆಗಳು ಕೃತಿಯನ್ನು ಕಸಾಪದ ಅಧ್ಯಕ್ಷರಾದ ಮಂಗಳಾ ಮೆಟಗುಡ್ಡ ಬಿಡುಗಡೆಗೊಳಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಕಸಾಪ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳನ್ನು ವಿವರಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಶಿವಾಜಿ ಕಾಗಣೇಕರ, ಮಂಗಳಾ ಮೆಟಗುಡ್ಡ, ಸ.ರಾ.ಸುಳಕುಡೆ, ಎಂ.ವೈ.ಮೆಣಸಿಣಕಾಯಿ, ಆರ್.ಬಿ.ಬನಶಂಕರಿ, ಶೋಭಾ ಅ ಮೇಟಿ, ಇವರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಈ ಸಮಾರಂಭದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಸರಸ್ವತಿ ಆರ್. ಕಳಸದ ಅವರು ಸಮಕಾಲೀನ ಕಾವ್ಯ ಕುರಿತು ವಿಶ್ಲೇಷಿಸಿದರು. ಸಮಕಾಲೀನ ಕನ್ನಡ ಮತ್ತು ಕಾವ್ಯ ಕುರಿತು ಬೆಂಗಳೂರಿನ ಮುದಲ್ ವಿಜಯ ಇವರು ವಿಶೇಷ ಉಪನ್ಯಾಸ ನೀಡಿ ಇಂದಿನ ಬಹುಪಾಲು ಕವಿಗಳು ವಾಚ್ಯ ಕವಿತೆಗಳನ್ನು ರಚಿಸುತ್ತಿರುವುದು ಕಂಡು ಬರುತ್ತದೆ. ಆದ ಕಾರಣ ಅವರಿಗೆ ಒಂದು ಕಾವ್ಯ ಕಮ್ಮಟ ಏರ್ಪಡಿಸುವುದು ಅಗತ್ಯ ಎಂದರು.

ಕವಿ ಸಮ್ಮೇಳನವನ್ನು ಉದ್ಘಾಟಿಸಿದ ಗಣಪತಿ ಹೆಗಡೆ ಇವರು, ಕನ್ನಡ ಕಾವ್ಯ ನಡೆದುಬಂದ ದಾರಿಯನ್ನು ವಿವರಿಸಿದರು. ಈ ಸಮಾರಂಭದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ೨೦ ಆಯ್ದ ಕವಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸಿದ ಸುರೇಶ ಕೋರಕೊಪ್ಪ ಇವರು ಕನ್ನಡ ಕಾವ್ಯ ಪರಂಪರೆಯಲ್ಲಿ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಕ್ಕೆ ವಿಶೇಷ ಮಹತ್ವವಿದೆ. ಆಧುನಿಕ ಕನ್ನಡ ಕವಿಗಳ ಕಾವ್ಯದಲ್ಲಿಯೂ ಕಾವ್ಯಾಂಶಗಳಿವೆ. ಅವುಗಳನ್ನು ಇಂದಿನ ಕವಿಗಳು ಅಧ್ಯಯನ ಮಾಡುವುದು ಅಗತ್ಯ ಎಂದರು.

ವಿದ್ಯಾಧರ ಪ್ರತಿಷ್ಠಾನದ ಸದಸ್ಯರಾದ ಸುನೀತಾ ಪ್ರಕಾಶ, ಸುರೇಶ ರಾಜಮಾನೆ, ಎನ್.ಆರ್.ಶೋಭಾ, ಜಾನರ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವನ್ನು ಸುನೀತಾ ಪ್ರಕಾಶ ಅವರು ನಿರೂಪಿಸಿದರು. ಸುರೇಶ ರಾಜಮಾನೆ ಅವರು ವಂದಿಸಿದರು.

WhatsApp Group Join Now
Telegram Group Join Now
Share This Article