ಮೋದಿ ಹತ್ತು ವರ್ಷ ಸಂವಿಧಾನ ವಿರೋಧಿ ಆಡಳಿತ: ಪ್ರಧಾನಿ ವಿರುದ್ದ ಹರಿಹಾಯ್ದ ಸಿಎಂ ಸಿದ್ಧರಾಮಯ್ಯ

Ravi Talawar
WhatsApp Group Join Now
Telegram Group Join Now

ಕೊಪ್ಪಳ30: ”ಕೇಂದ್ರದಲ್ಲಿ ನರೇಂದ್ರ ಮೋದಿ ಹತ್ತು ವರ್ಷ ಪ್ರಧಾನಿ ಆಗಿ ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತ ಮಾಡಿದ್ದಾರೆ. ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿದ್ದಾರೆ. ದಲಿತರು, ಬಡವರು, ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ” ಎಂದು ಸಿಎಂ ಸಿದ್ಧರಾಮಯ್ಯ ಪ್ರಧಾನಿ ಮೋದಿ ವಿರುದ್ದ ಹರಿಹಾಯ್ದರು.

ಕೊಪ್ಪಳದ ಕುಷ್ಟಗಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿ, ”ಬೆಲೆ ಏರಿಕೆ ಪರಿಣಾಮ ಸಾಮಾನ್ಯರ ಬದುಕನ್ನು ಬೀದಿಗೆ ತಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನ ನಮಗೆ ಆಶೀರ್ವಾದ ಮಾಡಿದರು. ಬಿಜೆಪಿ ರಾಜ್ಯದಲ್ಲಿ ಗೆಲ್ಲುವ ಆಸೆ ಇಟ್ಟುಕೊಂಡಿದ್ದರು. ಅವರ ಆಸೆ ಹುಸಿ ಮಾಡಿ ನೀವು ನಮಗೆ ಆಶೀರ್ವಾದ ಮಾಡಿದ್ದೀರಿ. ನಾವು ಐದು ಗ್ಯಾರಂಟಿ ಘೋಷಣೆ ಮಾಡಿ ಗ್ಯಾರಂಟಿ ಚೆಕ್​ಗೆ ಸಹಿ ಮಾಡಿ ಮನೆ ಮನೆಗೆ ಹಂಚಿಕೆ ಮಾಡಿದ್ದೆವು. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಜಾರಿ ಮಾಡಿ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ” ಎಂದರು.

ಕಳೆದ ಹತ್ತು ವರ್ಷದಲ್ಲಿ ಮೋದಿ ಏನೂ ಮಾಡಿಲ್ಲ- ಸಿದ್ದರಾಮಯ್ಯ: ಕಳೆದ ಹತ್ತು ವರ್ಷದಲ್ಲಿ ಸಮುದಾಯಗಳ ಮಧ್ಯೆ ದ್ವೇಷ ಬೆಳೆಸುವ ಕೆಲಸವನ್ನು ಬಿಟ್ಟು ನರೇಂದ್ರ ಮೋದಿ ಮತ್ತೇನನ್ನೂ ಮಾಡಿಲ್ಲ. ಮೋದಿ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದರು. ಆದರೆ, ಕೊಡಲಿಲ್ಲ. ಬದಲಿಗೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ನಿಲ್ಲಿಸುವುದಾಗಿ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ನಾಲ್ಕು ವರ್ಷ ಇರಲಿದ್ದು, ಪ್ರತಿ ತಿಂಗಳು ಬರುತ್ತವೆ. ನಾವು ನುಡಿದಂತೆ ನಡೆದಿದ್ದೇವೆ. ಮೋದಿ‌ ಸುಳ್ಳುಗಾರ. ಎಲ್ಲಿದೆ ಅಚ್ಛೇ ದಿನ್, ರೈತರ ಆದಾಯ ದ್ವಿಗುಣವಾಗಲಿಲ್ಲ, ಅಗತ್ಯ ವಸ್ತುಗಳ ಬೆಲೆ ಇಳಿಯಲಿಲ್ಲ. ಜನರ ಖಾತಗೆ ಹಣ ಬರಲಿಲ್ಲ. ಹತ್ತು ವರ್ಷ ಸುಳ್ಳು ಹೇಳುವುದರಲ್ಲೇ ಕಳೆದರು” ಎಂದು ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ನುಡಿದಂತೆ ನಡೆಯುತ್ತಿದ್ದೇವೆ: ”ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಮೊದಲ ವರ್ಷ 36 ಸಾವಿರ ಕೋಟಿ ರೂ. ವ್ಯಯ ಆಯ್ತು. ಶಕ್ತಿ ಯೋಜನೆಯಡಿ 200 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿತು. ಇದು ಬಿಜೆಪಿ ಜನರಿಗೆ ಮಾಡಿದ ದೊಡ್ಡ ದ್ರೋಹ. ಆದರೂ ನಾವು ಐದು ಕೆಜಿ ಅಕ್ಕಿ ಮೊತ್ತವನ್ನು ನಿಮ್ಮ ಖಾತೆಗೆ ಹಾಕುತ್ತಿದ್ದೇವೆ. 1.5 ಕೋಟಿ ಕುಟುಂಬಗಳು ಯೋಜನೆ ಲಾಭ ಪಡೆಯುತ್ತಿವೆ. ಗೃಹ ಲಕ್ಷ್ಮೀ ಯೋಜನೆಯಡಿ 1.20 ಕೋಟಿ ಕುಟುಂಬಗಳಿಗೆ ತಿಂಗಳಿಗೆ 2 ಸಾವಿರ ರೂ. ಹಾಕಲಾಗುತ್ತಿದೆ. ಯುವನಿಧಿಯಡಿ ಯುವಕರಿಗೆ ಸಹಾಯಧನ, ಗೃಹ ಜ್ಯೋತಿ ಅಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ನಾವು ನುಡಿದಂತೆ ನಡೆಯುತ್ತೇವೆ” ಎಂದು ತಿಳಿಸಿದರು.

”ರಾಜ್ಯದಲ್ಲಿ ಬಿಜೆಪಿ ಈ ಹಿಂದೆ ಮೂರು ವರ್ಷ ಹತ್ತು ತಿಂಗಳು ಅಧಿಕಾರ ನಡೆಸಿದರೂ ರಾಜ್ಯದ ಅಭಿವೃದ್ಧಿ ಮಾಡಲಿಲ್ಲ. ಬಡವರು, ರೈತರು, ದಲಿತರು, ಅಲ್ಪಸಂಖ್ಯಾತ, ಹಿಂದುಳಿದವರು, ರೈತರು, ಮಹಿಳೆಯರಿಗೆ ಏನೂ ಮಾಡಿಲ್ಲ. ಬದಲಿಗೆ ರಾಜ್ಯ ಲೂಟಿ ಹೊಡೆಯುತ್ತಿದ್ದರು. ಗುತ್ತಿಗೆದಾರರು ತನಿಖೆಗೆ ಆಗ್ರಹಿಸಿದರು. ಬೊಮ್ಮಾಯಿ ತನಿಖೆ ನಡೆಸಲಿಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ಆಯೋಗ ರಚಿಸಿ ತನಿಖೆಗೆ ಸೂಚಿಸಿದ್ದೇವೆ. ತಪ್ಪಿತಸ್ಥರು ಎಂದು ಗೊತ್ತಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ರಾಜ್ಯ ರಕ್ಷಿಸುತ್ತೇವೆ” ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಪಿಎಂ ಅಭ್ಯರ್ಥಿ ಯಾರೆಂದು ಕೇಳುವ ನೈತಿಕತೆ ನಿಮಗಿಲ್ಲ: ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಸೇರಿ ಇತರ ನಾಯಕರು ಮೋದಿಗೆ ಯಾವುದರಲ್ಲಿ ಕಡಿಮೆ ಇದ್ದಾರೆ? ಕಾಂಗ್ರೆಸ್​ನಲ್ಲಿ ಪಿಎಂ‌ ನಾಯಕರಿಲ್ಲ ಎಂದು ಸುಳ್ಳು ಹೇಳುತ್ತಾರೆ. ರಾಜ್ಯದಲ್ಲಿ‌ ಬಿಜೆಪಿ ಅಧಿಕಾರದಲ್ಲಿದ್ದಾಗ ಮೂರು ಜನ ಸಿಎಂ ಬದಲಿಸಿದರು. 2013- 2018 ವರೆಗೆ ನಾನೊಬ್ಬನೇ ಸಿಎಂ ಆಗಿ ಆಡಳಿತ ಮಾಡಿರುವೆ. ಇದರಿಂದ ಯಾರಲ್ಲಿ ನಾಯಕರ ಕೊರತೆ ಇದೆ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್​ನಲ್ಲಿ ಪಿಎಂ ಅಭ್ಯರ್ಥಿ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ಗರಂ ಆದರು.

”ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ, ಯುವಕರಿಗೆ ವರ್ಷಕ್ಕೆ ಒಂದು ಲಕ್ಷ‌ರೂ ಕೊಡುತ್ತೇವೆ. ರೈತರ ಎಲ್ಲ ಸಾಲ ಮನ್ನಾ ಮಾಡುತ್ತೇವೆ. ಪ್ರವಾಹ, ಬರ ಬಂದಾಗ ರಾಜ್ಯಕ್ಕೆ ಬರದವರು ಚುನಾವಣೆ ಬಂದಾಗಲಷ್ಟೇ ರಾಜ್ಯಕ್ಕೆ ಬರುತ್ತಾರೆ. ಸುಳ್ಳು ಹೇಳಿ ಮತ ಪಡೆಯುತ್ತಾರೆ. ಇದಕ್ಕೆ ನೀವು ಅವಕಾಶ ನೀಡಬೇಡಿ. ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿಸಿ ಕೇಂದ್ರದಲ್ಲಿ ನಮಗೆ ಅಧಿಕಾರ ಮಾಡಲು ಅವಕಾಶ ಕೊಡಿ” ಎಂದರು.

WhatsApp Group Join Now
Telegram Group Join Now
Share This Article