ಹೊಸ ವೇತನ ಕ್ರಮಕ್ಕೆ ಸರ್ಕಾರ ಆಲೋಚನೆ: ಉದ್ಯೋಗಿಗಳ ಸಂಬಳ ಗಣನೀಯವಾಗಿ ಹೆಚ್ಚಲಿದೆ?

Ravi Talawar
WhatsApp Group Join Now
Telegram Group Join Now

ನವದೆಹಲಿ, ಮಾರ್ಚ್ 26: ಭಾರತದಲ್ಲಿ ಕನಿಷ್ಠ ವೇತನವಾಗಿ ದಿನಕ್ಕೆ 176 ರೂ ಇದೆ. ಸರ್ಕಾರ ಈಗ ವೇತನ ಮಾನದಂಡ ಬದಲಿಸಲು ಮನಸು ಮಾಡಿದೆ. ಕನಿಷ್ಠ ವೇತನ ಎಂಬ ಕ್ರಮದ ಬದಲು ವಾಸ ವೇತನ ಅಥವಾ ಲಿವಿಂಗ್ ವೇಜ್ ಸಿಸ್ಟಂ ಅನ್ನು ಜಾರಿಗೆ ತರುವ ಆಲೋಚನೆ ಸರ್ಕಾರದ್ದಾಗಿದೆ. ಈ ಯೋಚನೆ ಕಾರ್ಯರೂಪಕ್ಕೆ ಬಂದರೆ ಕಾರ್ಮಿಕರು ಅಥವಾ ಉದ್ಯೋಗಿಗಳ ಸಂಬಳ ಗಣನೀಯವಾಗಿ ಹೆಚ್ಚಲಿದೆ.

ಮುಂದಿನ ವರ್ಷ ಅಂದರೆ 2025ರೊಳಗೆ ವಾಸ ವೇತನ ಪದ್ಧತಿಯನ್ನು  ಅಳವಡಿಸುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಜೊತೆ ಸರ್ಕಾರ ಮಾತುಕತೆ ನಡೆಸುತ್ತಿದ್ದು, ಲಿವಿಂಗ್ ವೇಜ್ ಅಳವಡಿಕೆಗೆ ರೂಪುರೇಖೆ ಹಾಕಲು ತಾಂತ್ರಿಕ ನೆರವು ಯಾಚಿಸಿದೆ ಎಂದು ಸಿಎನ್​ಬಿಸಿ ಟಿವಿ18 ವೆಬ್​ಸೈಟ್​ನಲ್ಲಿ ವರದಿಯಾಗಿದೆ.

ಐಎಲ್​ಒದ ಸಂಸ್ಥಾಪಕ ಸದಸ್ಯ ದೇಶಗಳಲ್ಲಿ ಭಾರತವೂ ಒಂದು. 1922ರಿಂದಲೂ ಇದರ ಆಡಳಿತ ಮಂಡಳಿಯಲ್ಲಿ ಭಾರತ ಖಾಯಂ ಸದಸ್ಯತ್ವ ಹೊಂದಿದೆ. ಕಳೆದ ತಿಂಗಳು (ಫೆಬ್ರುವರಿ) ವೇತನ ನೀತಿ ಬಗ್ಗೆ ತಜ್ಞರ ಸಭೆ ನಡೆದು ವಾಸ ವೇತನ ಕ್ರಮವನ್ನು ಜಾರಿ ತರಲು ಒಮ್ಮತಕ್ಕೆ ಬರಲಾಯಿತು. ಐಎಲ್​ಒ ಕೂಡ ಮಾರ್ಚ್ 13ರಂದು ಈ ಹೊಸ ಕ್ರಮಕ್ಕೆ ಶಿಫಾರಸು ಮಾಡಿದೆ.

ಕನಿಷ್ಠ ವೇತನ ಎಂಬುದು ಎಲ್ಲಾ ಪ್ರದೇಶಗಳಿಗೂ ಸಮಾನವಾಗಿರುತ್ತದೆ. ಸದ್ಯ ಭಾರತದಲ್ಲಿ ದಿನದ ಕನಿಷ್ಠ ವೇತನ 176 ರೂ ಇದೆ. ಆದರೆ, ಕೆಲವೊಂದು ಪ್ರದೇಶಗಳಲ್ಲಿ ವಾಸ ವೆಚ್ಚ ಅಧಿಕ ಇರುತ್ತದೆ. ಆಗ ಈ ವೇತನ ಯಾತಕ್ಕೂ ಸಾಲದು ಎನಿಸಬಹುದು. ಉದಾಹರಣೆಗೆ, ಉತ್ತರ ಕರ್ನಾಟದ ಹಳ್ಳಿಯಿಂದ ಬೆಂಗಳೂರಿಗೆ ಕೆಲಸಕ್ಕೆ ಬರುವ ಕಾರ್ಮಿಕರೊಬ್ಬರು ದಿನಕ್ಕೆ 176 ರೂ ಕೂಲಿ ಪಡೆಯುತ್ತಾರೆ ಎಂದಿಟ್ಟುಕೊಳ್ಳಿ. ಬೆಂಗಳೂರಿನಲ್ಲಿ ಬಾಡಿಗೆ, ಆಹಾರ, ಬಟ್ಟೆಬರೆ, ಮಕ್ಕಳಿಗೆ ಶಿಕ್ಷಣ ಇತ್ಯಾದಿ ಖರ್ಚುಗಳನ್ನು ಪರಿಗಣಿಸಿದರೆ ಈ ವೇತನ ಸರಿಯಾಗದು.

ಈ ಸಂದರ್ಭದಲ್ಲಿ ಮೇಲೆ ತಿಳಿಸಿದ ಕೊರತೆಯನ್ನು ನೀಗಿಸುತ್ತದೆ ವಾಸ ವೇತನ ಅಥವಾ ಲಿವಿಂಗ್ ವೇಜ್ ವ್ಯವಸ್ಥೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಈ ಲಿವಿಂಗ್ ವೇಜ್ ಹೇಗಿರಬೇಕು ಎಂದು ಒಂದಿಷ್ಟು ಮೂಲಭೂತ ಅಂಶಗಳನ್ನು ನಿರ್ದಿಷ್ಟಪಡಿಸಿದೆ.

ಒಂದು ಪ್ರದೇಶದಲ್ಲಿ ಆಹಾರ, ಬಟ್ಟೆ, ವಸತಿ, ಆರೋಗ್ಯ, ಶಿಕ್ಷಣ ಇತ್ಯಾದಿ ಖರ್ಚುವೆಚ್ಚಗಳನ್ನು ಪರಿಗಣಿಸಲಾಗುತ್ತದೆ. ವ್ಯಕ್ತಿಗೆ ಮದುವೆ ಆಗಿದೆಯಾ, ಮಕ್ಕಳು ಎಷ್ಟಿದ್ದಾರೆ, ಮನೆಯಲ್ಲಿ ಅವಲಂಬಿತರೆಷ್ಟಿದ್ದಾರೆ ಎಂಬೆಲ್ಲಾ ಅಂಶಗಳನ್ನು ಗಣಿಸಿ, ಆ ವ್ಯಕ್ತಿಗೆ ಆ ಪ್ರದೇಶದಲ್ಲಿ ಮಾನವಂತವಾಗಿ ಬದುಕಲು ಕನಿಷ್ಠ ಎಷ್ಟು ಸಂಪಾದನೆ ಬೇಕಾಗುತ್ತದೆ ಎಂದು ಸೂತ್ರ ಇಟ್ಟು ಅದರ ಆಧಾರದ ಮೇಲೆ ವೇತನ ನಿರ್ಧರಿಸಬಹುದು. ಒಂದೊಂದು ಪ್ರದೇಶದಲ್ಲಿ ಜೀವನ ವೆಚ್ಚ ಬದಲಾಗಬಹುದು. ಅಂತೆಯೇ ವಾಸ ವೇತನವೂ ಕೂಡ ಪ್ರದೇಶದಿಂದ ಪ್ರದೇಶಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ಅವಿವಾಹಿರಾದವರಿಗಿಂತ ಮಕ್ಕಳನ್ನು ಹೊಂದಿರುವ ಸಂಸಾರಸ್ಥರಿಗೆ ಹೆಚ್ಚು ವೇತನ ಸಿಗುವ ಸಾಧ್ಯತೆ ಇರುತ್ತದೆ. ಇದು ಸಮರ್ಪಕವಾಗಿ ಜಾರಿಯಾದರೆ ಭಾರತದಲ್ಲಿ ಬಹಳ ಬೇಗ ಬಡತನ ನಿವಾರಣೆ ಆಗುವ ನಿರೀಕ್ಷೆ ಇದೆ.

WhatsApp Group Join Now
Telegram Group Join Now
Share This Article