ಚುನಾವಣೆ  ಹಿನ್ನೆಲೆ ರಾಮನಗರ, ದಾವಣಗೆರೆಯಲ್ಲಿ 22 ಕೋಟಿ ಮೌಲ್ಯದ ಚಿನ್ನ, ವಜ್ರ ಜಪ್ತಿ

Ravi Talawar
WhatsApp Group Join Now
Telegram Group Join Now

ಬೆಂಗಳೂರು ಏಪ್ರಿಲ್​ 12: ಲೋಕಸಭೆ ಚುನಾವಣೆ  ಹಿನ್ನೆಲೆಯಲ್ಲಿ ಹಣ, ವಸ್ತು, ಮದ್ಯ ಮತ್ತು ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡುವವರ ಮೇಲೆ ಮತ್ತು ಹಂಚುವವರ ಮೇಲೆ ಚುನಾವಣಾ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು  ದಾವಣಗೆರೆಯಲ್ಲಿ 12.50 ಕೋಟಿ ಮೌಲ್ಯದ ಚಿನ್ನ, ವಜ್ರ ಮತ್ತು ರಾಮನಗರದಲ್ಲಿ 10 ಕೋಟಿ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಹಾಗೆ ತುಮಕೂರಿನಲ್ಲಿ 70 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ

ದಾವಣಗೆರೆಯ ಲೋಕಿಕೆರೆ ಚೆಕ್​ಪೋಸ್ಟ್ ಮೂಲಕ ದಾಖಲೆ ಇಲ್ಲದೆ ಸಾಗಿಸಲು ಯತ್ನಿಸಿದ 12.50 ಕೋಟಿ ರೂ. ಮೌಲ್ಯದ ಚಿನ್ನ, ವಜ್ರವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚುನಾವಣಾ ಅಧಿಕಾರಿ ಲೋಕೇಶ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ಈ ಚಿನ್ನ ಮತ್ತು ವಜ್ರವನ್ನು ವಿವಿಧ ಆಭರಣ ಅಂಗಡಿಗಳಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿಬಂದಿದೆ. ಚಿನ್ನ ಮತ್ತು ವಜ್ರ ಸಾಗಣೆಗೆ ಸೂಕ್ತ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ರಾಮನಗರ ತಾಲೂಕಿನ ಬಿಡದಿ ಪೊಲೀಸರು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 10 ಕೋಟಿ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ವಾಹನವನ್ನು ಬಿಡದಿ ಬಳಿಯ ಹೆಜ್ಜಾಲ‌ ಟೋಲ್ ಬಳಿ ಪೊಲೀಸರು ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ.

ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ ಈವರೆಗೆ ತುಮಕೂರು ಜಿಲ್ಲೆಯಲ್ಲಿ 70 ಲಕ್ಷ ಹಣ ಜಪ್ತಿ ಮಾಡಲಾಗಿದೆ ಎಂದು ಎಸ್​​ಪಿ ಅಶೋಕ್ ವೆಂಕಟ್​ ಮಾಹಿತಿ ನೀಡಿದ್ದಾರೆ. ಆಂಧ್ರದಿಂದ ತುಮಕೂರಿಗೆ ಸಾಗಿಸುತ್ತಿದ್ದ 1 ಸಾವಿರಕ್ಕೂ ಹೆಚ್ಚು ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಐದೂವರೆ ಕೆಜಿ ಗಾಂಜಾ, ಗಡಿಯಾರ, ಸೀರೆಗಳು, ಕುಕ್ಕರ್​ ಮತ್ತು ಒಡವೆ ಸೇರಿದಂತೆ 6 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. 54 ಪ್ಲೇಯಿಂಗ್ ಸ್ಕ್ವಾಡ್, 45 ಚೆಕ್ ಪೋಸ್ಟ್​ಗಳಲ್ಲಿ ನಿತ್ಯ ತಪಾಸಣೆ ನಡೆಸಲಾಗುತ್ತದೆ ಎಂದರು.

WhatsApp Group Join Now
Telegram Group Join Now
Share This Article