ಪರಿಷತ್ ​ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ: ಫೈರ್‌ಬ್ರ್ಯಾಂಡ್‌ ಮತ್ತೆ ಕಾಂಗ್ರೆಸ್‌ ಸೇರ್ತಾರಾ?

Ravi Talawar
WhatsApp Group Join Now
Telegram Group Join Now

ಬೆಂಗಳೂರು ಮಾರ್ಚ್ 27: ವಿಧಾನ​ ಪರಿಷತ್ ​ಸದಸ್ಯ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ ನೀಡಿದ್ದಾರೆ. ಇದರಿಂದ ಅವರು ಮತ್ತೆ ಕಾಂಗ್ರೆಸ್‌ ಸೇರ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ರಾಜಕಾರಣದಲ್ಲಿ ಅನೇಕ ಬದಲಾವಣೆ ಕಾಣಿಸುತ್ತಿವೆ.

ಇದರ ನಡುವೆ ರಾಜೀನಾಮೆ ನೀಡಿ ಪಕ್ಷ ಬದಲಾವಣೆ ಮಾಡುವವ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸಾಲಿನಲ್ಲಿಂದು ಬಿಜೆಪಿ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಕೂಡ ಸೇರಿದ್ದಾರೆ. ತೇಜಸ್ವಿನಿ ಗೌಡ ಅವರು ಇಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ತೇಜಸ್ವಿನಿ ಅವರ ಪರಿಷತ್ ಸದಸ್ಯ ಸ್ಥಾನದ ಅವಧಿ ಜೂನ್ 24ರ ವರೆಗೆ ಇತ್ತು. ಆದರೆ ಅವರು ಅವಧಿಗೂ ಮುನ್ನವೇ ತಾವು ಸ್ವ ಇಚ್ಚೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ತೇಜಸ್ವಿನಿ ಗೌಡ ರಾಜೀನಾಮೆ ನೀಡಿದ್ದರ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ಆರ್ ಅಶೋಕ್,’ ತೇಜಸ್ವಿನಿ ಗೌಡ ನಮ್ಮ ಪಕ್ಷಕ್ಕೆ ಬಂದು ಎಮ್‌ಎಲ್‌ಸಿ ಆಗಿದ್ದರು. ಅವರ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಇನ್ನೊಂದು ತಿಂಗಳಲ್ಲಿ ಮುಕ್ತಾಯಗೊಳ್ಳುತ್ತಿತ್ತು. ಎಲ್ಲಾ ಸ್ಥಾನ ಕೊಟ್ಟರೆ ಬಿಜೆಪಿ ತುಂಬಾ ಒಳ್ಳಯ ಪಕ್ಷ. ಸ್ಥಾನಮಾನ ಕೊಡದಿದ್ದರೆ ಕೆಟ್ಟದ್ದು ಅನ್ನೋ ಮನಸ್ಥಿತಿ ಸರಿಯಲ್ಲ. ಇದಕ್ಕೆಲ್ಲ ಬಿಜೆಪಿ ಸೊಪ್ಪು ಹಾಕುವುದಿಲ್ಲ’ ಎಂದು ವಾಗ್ದಾಳಿ ಮಾಡಿದರು.

ಇನ್ನೂ ರಾಜೀನಾಮೆ ನೀಡಿದ ಬಳಿಕ ತೇಜಸ್ವಿನಿ ಗೌಡ ಅವರ ಮುಂದಿನ ನಡೆ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ. ಕಳೆದ ಇಪ್ಪತ್ತು ವರ್ಷದಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು 2004ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಕನಕಪುರ(ಈಗಿನ ಬೆಂಗಳೂರು ಗ್ರಾಮಾಂತರ) ಲೋಕಸಭಾ ಕ್ಷೇತ್ರದಲ್ಲಿ ಹೆಚ್ಡಿ ದೇವೇಗೌಡ ಅವರನ್ನೇ ಸೋಲಿಸಿದ್ದರು. ಬಳಿಕ ಇವರು ಬಿಜೆಪಿ ಸೇರಿದರು.

ಈ ಬಾರಿ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಇಂಗಿತ ಹೊಂದಿದ್ದರು. ಆದರೆ ಇವರಿಗೆ ಟಿಕೆಟ್ ನಿರಾಕರಿಸಿ ಬದಲಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದಾದ ಬಳಿಕ ತೇಜಸ್ವಿನಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಇದೇ ಬೇಸರದಲ್ಲಿ ರಾಜೀನಾಮೆ ನೀಡಿದ್ರಾ ಎನ್ನುವ ಅನುಮಾನಗಳು ಮೂಡಿವೆ. ಜೊತೆಗೆ ಪುನ: ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

WhatsApp Group Join Now
Telegram Group Join Now
Share This Article