’ಲೋಕ’ ಅಖಾಡದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಂತಕನ ಪುತ್ರ ಸರಬ್ಜಿತ್ ಸಿಂಗ್

Ravi Talawar
WhatsApp Group Join Now
Telegram Group Join Now

ಚಂಡೀಗಢ,ಏಪ್ರಿಲ್ 12 :  ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಹತ್ಯೆ ಮಾಡಿದ್ದಇಬ್ಬರ ಪೈಕಿ ಒಬ್ಬರ ಪುತ್ರ ಪಂಜಾಬ್‌ನ ಫರೀದ್‌ಕೋಟ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. 45 ವರ್ಷದ ಸರಬ್ಜಿತ್ ಸಿಂಗ್ ಅವರು ಪಂಜಾಬ್‌ನ ಫರೀದ್‌ಕೋಟ್ ಕ್ಷೇತ್ರದಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಗುರುವಾರ ಹೇಳಿದ್ದಾರೆ.

ಫರೀದ್‌ಕೋಟ್‌ನಿಂದ ಚುನಾವಣೆಗೆ ಸ್ಪರ್ಧಿಸಲು ಅನೇಕರು ತನಗೆ ಆಫರ್ ಮಾಡಿದ್ದಾರೆ. ಆದರೆ, ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಸರಬ್ಜಿತ್ ಹೇಳಿದರು. ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಇಬ್ಬರು ಹಂತಕರಲ್ಲಿ ಒಬ್ಬರಾದ ಬಿಯಾಂತ್ ಸಿಂಗ್ ಅವರ ಮಗ. ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಆಗಿನ ಪ್ರಧಾನಿಯ ಅಂಗರಕ್ಷಕರಾಗಿದ್ದರು.

ಅವರು 31 ಅಕ್ಟೋಬರ್ 1984 ರಂದು ಪ್ರಧಾನಿ ನಿವಾಸದಲ್ಲಿ ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದ್ದರು. ಸರಬ್ಜಿತ್ ಸಿಂಗ್ ಅವರು 2004 ರ ಲೋಕಸಭಾ ಚುನಾವಣೆಯಲ್ಲಿ ಬಟಿಂಡಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಆಗ ಅವರು 1.13 ಲಕ್ಷ ಮತಗಳನ್ನು ಪಡೆದುಕೊಂಡಿದ್ದರು ಎಂಬುದು ಗಮನಾರ್ಹ. 2007 ರಲ್ಲಿ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಬರ್ನಾಲಾದ ಭದೌರ್ ಕ್ಷೇತ್ರದಿಂದ ಸ್ಪರ್ಧಿಸಿ ಆಗಲೂ ಸೋಲು ಕಂಡಿದ್ದರು.

2014 ರ ಲೋಕಸಭಾ ಚುನಾವಣೆಯಲ್ಲಿ ಫತೇಘರ್ ಸಾಹಿಬ್ ಕ್ಷೇತ್ರದಿಂದ ಸಿಂಗ್ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಾಗಿ ಕಣಕ್ಕಿಳಿದಿದ್ದರು. ಆದರೆ ಮತ್ತೊಮ್ಮೆ ಸೋಲು ಅನುಭವಿಸಿದರು. ಸಿಂಗ್ ಅವರ ತಾಯಿ ಬಿಮಲ್ ಕೌರ್ 1989 ರಲ್ಲಿ ರೋಪರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಪಂಜಾಬ್‌ನ 13 ಲೋಕಸಭಾ ಸ್ಥಾನಗಳಿಗೆ ಜೂನ್ 1 ರಂದು ಮತದಾನ ನಡೆಯಲಿದ್ದು, ಈಗ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ ಸರಬ್ಜಿತ್​ ಸಿಂಗ್​.

WhatsApp Group Join Now
Telegram Group Join Now
Share This Article