ಚಿಕ್ಕೋಡಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಗೆ ಎನ್‌ಸಿಪಿ ಬೆಂಬಲ

Ravi Talawar
WhatsApp Group Join Now
Telegram Group Join Now
ಚಿಕ್ಕೋಡಿ-,25: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ  ಶರದ ಪವಾರ ಅವರ ನ್ಯಾಷನಲ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಬೆಂಬಲ ಸೂಚಿಸಿದೆ. ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಎನ್‌ಸಿಪಿ ತನ್ನ ಬೆಂಬಲ ವ್ಯಕ್ತಪಡಿಸಿದೆ.
ಗಡಿಭಾಗದಲ್ಲಿ ಎನ್‌ಸಿಪಿ ತನ್ನ ಪ್ರಾಬಲ್ಯ ಹೊಂದಿದ್ದು, ಮಹಾರಾಷ್ಟ್ರ ನಾಯಕರ ಪ್ರಭಾವವೂ ಇಲ್ಲಿ ಕೆಲಸ ಮಾಡುತ್ತ ಬಂದಿದೆ. ಹಾಗಾಗಿ, ಕಾಂಗ್ರೆಸ್‌ಗೆ ಎನ್‌ಸಿಪಿ ಬೆಂಬಲ ನೀಡಿರುವುದು ಆನೆ ಬಲಬಂದಂತಾಗಿದೆ. ಸ್ಥಳೀಯ ಎನ್‌ಸಿಪಿ ನಾಯಕ ಉತ್ತಮ ಪಾಟೀಲ ಅವರು ತಮ್ಮ ಬೆಂಬಲಿಗರು,ಕಾರ್ಯಕರ್ತರ ಜೊತೆಗೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ಪರವಾಗಿ ಪ್ರಚಾರ ಕಾರ್ಯಕ್ಕಿಳಿದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಜೊತೆಗೆ ಎನ್‌ಸಿಪಿ ನಾಯಕರು ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ,ಅಥಣಿ, ಯಮಕನಮರಡಿ ಸೇರಿದಂತೆ ಕ್ಷೇತ್ರದ ಎಲ್ಲೆಡೆ  ಕಾಂಗ್ರೆಸ್‌ ಪರವಾಗಿ ಪ್ರಚಾರ ಕಾರ್ಯದಲ್ಲಿತೊಡಗಿದ್ದಾರೆ.
ಎನ್‌ಸಿಪಿ ಮುಖಂಡ ಉತ್ತಮ ಪಾಟೀಲ ಮಾತನಾಡಿ, ಪಕ್ಷದವರಿಷ್ಠ ಶರದ ಪವಾರ ಅವರ ಸೂಚನೆ ಮೇರೆಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೇವೆ. ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಪಾಯ. ಈ ಹಿನ್ನೆಲೆಯಲ್ಲಿ ಎನ್‌ಸಿಪಿ ಪಕ್ಷ ಚಿಕ್ಕೋಡಿಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಅನ್ನ ಭಾಗ್ಯ, ಕ್ಷೀರ ಭಾಗ್ಯಸೇರಿ ಜನಪರ ಯೋಜನೆಗಳನ್ನು ಜಾರಿಗೆ ತಂದು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆ ನಂತರ ಕರ್ನಾಟಕ ಕಂಡ ಅತ್ಯುತ್ತಮ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷ ಬಡವರ ಪಕ್ಷವಾಗಿದೆ. ಚುನಾವಣೆಯಲ್ಲಿ ಮತದಾರ ಪ್ರಭುಗಳು ಕಾಂಗ್ರೆಸ್‌ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತವನ್ನು ಹಾಕಿ, ಆರ್ಶೀವದಿಸಬೇಕು ಎಂದು ಮನವಿ ಮಾಡಿದರು.
ಲೋಕೋಪಯೋಗಿ  ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಮತ್ತು ಪಂಚ ಗ್ಯಾರಂಟಿ ಯೋಜನೆಗಳನ್ನು ನೋಡಿ ಮತದಾರರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು. ಹಿಂದಿನ ಸಂಸದರು ಚಿಕ್ಕೋಡಿ ಕ್ಷೇತ್ರದ ಅಭಿವೃದ್ಧಿಗೆ ಕಾಳಜಿ ವಹಿಸದೇ ನಿರ್ಲಕ್ಷವಹಿಸಿದ್ದಾರೆ. ಹಾಗಾಗಿ, ಅಭಿವೃದ್ಧಿ ಎನ್ನುವುದು ಶೂನ್ಯವಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‌ ಬೆಂಬಲಿಸಬೇಕು. ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಉತ್ತಮ ಪಾಟೀಲ ಮನವಿ ಮಾಡಿದರು. ಸಚಿವ ಸತೀಶ ಜಾರಕಿಹೊಳಿ ಅವರ ಜೊತೆಗೆ ಸಭೆ ನಡೆಸಿ, ಕಾಂಗ್ರೆಸ್‌ ಗೆಲುವಿನ ಸಂಬಂಧ ಚರ್ಚೆ ನಡೆಸಿದರು.
WhatsApp Group Join Now
Telegram Group Join Now
Share This Article