ಮೋದಿಗೆ ಮಾಂಗಲ್ಯದ ಬೆಲೆ ಗೊತ್ತಿಲ್ಲ, ನನ್ನ ತಾಯಿಯ ಮಂಗಳಸೂತ್ರ ದೇಶಕ್ಕಾಗಿ ಬಲಿದಾನ: ಪ್ರಿಯಾಂಕಾ ಗಾಂಧಿ

Ravi Talawar
WhatsApp Group Join Now
Telegram Group Join Now

ಬೆಂಗಳೂರು,24: ಪ್ರಧಾನಿ ಮೋದಿ ಅವರಿಗೆ ಮಾಂಗಲ್ಯದ ಬೆಲೆ ಗೊತ್ತಿಲ್ಲ. ಮಂಗಳಸೂತ್ರದ ಬಗ್ಗೆ ಮಾತನಾಡಿದ ಅವರಿಗೆ ನಾಚಿಕೆ ಆಗಬೇಕು ಎಂದು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

ನಗರದ ಹೆಚ್​ಎಸ್​ಆರ್ ಬಡವಾಣೆಯಲ್ಲಿಂದು ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ”ಕಾಂಗ್ರೆಸ್ ಮಂಗಳಸೂತ್ರ ಕಿತ್ತುಕೊಳ್ಳುತ್ತದೆ ಎಂದು ಮೋದಿ ಹೇಳಿದ್ದಾರೆ. ನನ್ನ ತಾಯಿಯ (ಸೋನಿಯಾ ಗಾಂಧಿ) ಮಂಗಳ ಸೂತ್ರ ದೇಶಕ್ಕಾಗಿ ಬಲಿದಾನವಾಗಿದೆ. ಮಹಿಳೆಯರ ಮನಸ್ಸಲ್ಲಿ ಇರುವ ಸೇವೆಯ ಭಾವನೆ ಬಿಜೆಪಿಗೆ ಅರ್ಥವಾಗುವುದಿಲ್ಲ” ಎಂದು ತಿರುಗೇಟು ನೀಡಿದರು.

”ಇವತ್ತು ಚುನಾವಣೆ ನಡೀತಾ ಇದೆ. ಆದರೆ, ಯಾರೊಬ್ಬರೂ ಸಹ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಪ್ರಧಾನಿ ಅವರ ಫೋಟೋ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ. ಇವರು ಭಾವನಾತ್ಮಕ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಗೆ ಹೆಣ್ಣು ಮಕ್ಕಳ ಕಷ್ಟ ಅರ್ಥ ಆಗಲ್ಲ.‌ ರೈತರ ಸಾಲ ಹೆಚ್ಚಾದಾಗ ಆ ಮಹಿಳೆ ಮಾಂಗಲ್ಯ ಅಡ ಇಡುತ್ತಾರೆ. ಮನೆಯಲ್ಲಿ ಯಾರಿಗಾದರೂ ಕಷ್ಟ ಎದುರಾದರೆ ಮಾಂಗಲ್ಯ ಅಡ ಇಡುತ್ತಾಳೆ. ದೇಶದಲ್ಲಿ ಲಾಕ್ ಡೌನ್ ಆದಾಗ ಬಡವರಿಗೆ ಊಟ ಸಿಗಲಿಲ್ಲ. ಎಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ರೈತರು ಪ್ರತಿಭಟನೆ ಮಾಡಿ 609 ಜನ ರೈತರು ಮೃತಪಟ್ಟಿದ್ದಾರೆ. ಆಗ ಮೋದಿ ಅವರಿಗೆ ಮಾಂಗಲ್ಯ ನೆನಪಾಗಲಿಲ್ವ?, ಮಣಿಪುರದಲ್ಲಿ ಹೆಣ್ಣು ಮಕ್ಕಳನ್ನು ಬೆತ್ತಲೆ ಮಾಡಿದಾಗ ಮೋದಿ ಎಲ್ಲಿದ್ರು?” ಎಂದು ಟೀಕಾ ಪ್ರಹಾರ ಮಾಡಿದರು.

”ನಿಮ್ಮೆಲ್ಲರ ಮುಂದೆ ಸೂಪರ್ ಮ್ಯಾನ್ ಥರ ಮೋದಿ ಬಂದು ನಿಂತಿದ್ದರು. ಆದರೆ, ನಿಮ್ಮ ಜೀವನದಲ್ಲಿ ಬದಲಾವಣೆ ಆಗಿದ್ಯಾ ಅನ್ನೋ ಪ್ರಶ್ನೆ ಮಾಡಬೇಕಿದೆ. ನಿರುದ್ಯೋಗ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಪ್ರಧಾನಿ ಮೋದಿಯವರ 10 ವರ್ಷ ಆಡಳಿತ ನೋಡಿದ್ದೀರಿ. ಆದರೆ, ನಿಮ್ಮ ಜೀವನದಲ್ಲಿ ಬದಲಾವಣೆ ಆಗಿದ್ಯಾ?. ಪ್ರಧಾನಿ ಅವರಿಗೆ ಮುಖ್ಯವಾದ ಸ್ನೇಹಿತರಿದ್ದಾರೆ. ಅವರಿಗೋಸ್ಕರ ನೀತಿ ನಿಯಮವನ್ನೇ ಬದಲಾಯಿಸುತ್ತಿದ್ದಾರೆ. ದೇಶದ ವಿಮಾನ ನಿಲ್ದಾಣ ಸೇರಿದಂತೆ ಪ್ರತಿಯೊಂದು ಯೋಜನೆ ಅವರಿಗೆ ಮೀಸಲಿಡುತ್ತಿದ್ದಾರೆ. ಸಣ್ಣ-ಪುಟ್ಟ ಉದ್ಯಮಿಗಳಿಗೆ ಏನು ಸಹಾಯ ಆಗುತ್ತಿಲ್ಲ. ರೈತರಿಗೆ ಬಡವರಿಗೆ ಯಾರಿಗೂ ಏನೂ ಸಹಾಯ ಇಲ್ಲ. ಇವತ್ತು ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸಲು ಮತ್ತು ಸಂವಿಧಾನ ಬದಲಾಯಿಸಲು ಹೊರಟಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

”ನಾವು ಕೆಲವು ತಿಂಗಳ ಹಿಂದೆ ಬಂದು ಮಾತನಾಡಿದ್ದೆ. ಆ ನಂತರ ರಾಜ್ಯದಲ್ಲಿ ಸರ್ಕಾರ ಅಧಿಕಾರಿಕ್ಕೆ ಬಂದಿದೆ. ಸರ್ಕಾರದಿಂದ ಬಹಳ ಖುಷಿಯಾಗಿದೆ. ಗೃಹ ಲಕ್ಷ್ಮಿ ಯೋಜನೆಯಿಂದ 2 ಸಾವಿರ ರೂಪಾಯಿ ಸಿಗುತ್ತಿರುವುದು ನನಗೆ ಖುಷಿಯಾಗಿದೆ. 200 ಯುನಿಟ್ ವಿದ್ಯುತ್ ಉಚಿತ ಸಿಗುತ್ತಿದೆ. ಅನ್ನಭಾಗ್ಯ ಯೋಜನೆಯಿಂದ ನಾಲ್ಕು ಕೋಟಿ ಜನಕ್ಕೆ ಅನುಕೂಲ ಆಗುತ್ತಿದೆ. ಶಕ್ತಿ ಯೊಜನೆಯಿಂದ ಬಸ್​ನಲ್ಲಿ ಉಚಿತ ಪ್ರಯಾಣ ಸಿಕ್ಕಿದೆ. ಯುವನಿಧಿಯಿಂದ ಯುವಕರಿಗೆ ಹಣ ಸಿಗುತ್ತಿದೆ. ದೇಶಾದ್ಯಂತ ನುಡಿದಂತೆ ನಡೆಯುವ ಸರ್ಕಾರ ಇದ್ದರೆ, ಅದು ಕಾಂಗ್ರೆಸ್ ಮಾತ್ರ. ಅದರಂತೆ ಕರ್ನಾಟದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ” ಎಂದು ಪ್ರಿಯಾಂಕಾ ಹೇಳಿದರು.

ಮುಂದುವರೆದು, ”ಬೆಲೆ ಏರಿಕೆ, ನಿರುದ್ಯೋಗ ಎರಡು ಕಷ್ಟಗಳು ನಿಮ್ಮ ದೇಶದ ಮುಂದಿವೆ. ಮಹಿಳೆಯರಿಗೆ ಮನೆ ನಡೆಸುವ ಕಷ್ಟ ಗೊತ್ತಿದೆ. ಸಮಾಜದಲ್ಲಿ ಎಲ್ಲ ವರ್ಗದವರು ಬೆಲೆ ಏರಿಕೆ ಎದುರಿಸುತ್ತಿದ್ದಾರೆ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳಿಗೆ ಒಂದು ಲಕ್ಷ ಕೊಡುವ ನಿರ್ಧಾರವನ್ನು ಕಾಂಗ್ರೆಸ್ ಮಾಡಿದೆ.‌ ಯುವಕರಿಗೆ ಉದ್ಯೋಗ ನೀಡಲು ಅಪ್ರೆಂಟಿಷಿಪ್ ಕಾರ್ಯಕ್ರಮ ರೂಪಿಸಿದ್ದೇವೆ. ಶ್ರಮಿಕ್ ನ್ಯಾಯದಡಿ ಕೂಲಿ ಕೆಲಸ ಮಾಡುವವರಿಗೆ ವಿಮೆ ಕೊಡುತ್ತೇವೆ” ಎಂದು ಪ್ರಿಯಾಂಕಾ ತಿಳಿಸಿದರು. ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದರು.

WhatsApp Group Join Now
Telegram Group Join Now
Share This Article