ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ರೈತರ ಉತ್ಪನ್ನಗಳ ಮೇಲೆ ಜಿ.ಎಸ್.ಟಿ ರದ್ದು – ರಕ್ಷಾ ರಾಮಯ್ಯ

Hasiru Kranti
WhatsApp Group Join Now
Telegram Group Join Now

ದೇವನಹಳ್ಳಿ, ಏ, ೧೪; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದರು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಕೆ.ಎಚ್.‌ ಮುನಿಯಪ್ಪ ಅವರ ನೇತೃತ್ವದಲ್ಲಿ ವ್ಯಾಪಕ ಪ್ರಚಾರ ಕೈಗೊಂಡರು.

ವಿಧಾನಪರಿಷತ್ ಸದಸ್ಯರಾದ‌ ಎಸ್. ರವಿ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್‌, ಯುವ ಕಾಂಗ್ರೆಸ್‌ ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್‌ ಬಿ.ವಿ, ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮೊಹಮದ್‌ ಹ್ಯಾರೀಸ್‌ ನಲಪಾಡ್‌, ಎನ್.ಎಸ್.ಯು.ಐ ಮುಖಂಡರು ಜೊತೆಗೂಡಿದರು. ರಕ್ಷಾ ರಾಮಯ್ಯ ಅವರ ಪ್ರಚಾರಕ್ಕೆ ಯುವ ಶಕ್ತಿ ಪುಷ್ಟಿ ನೀಡಿತು. ಯುವ ಕಾಂಗ್ರೆಸ್‌ ನ ತ್ರಿಮೂರ್ತಿಗಳ ಜೋಡಿಗೆ ಪ್ರಚಾರ ಸಭೆಯಲ್ಲಿ ಜೈಕಾರ ಮೊಳಗಿತು. ಅಮಿತೋತ್ಸಾಹದಿಂದ ಪ್ರಚಾರದಲ್ಲಿ ಪಾಲ್ಗೊಂಡ ಯುವ ನಾಯಕರು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು, ಉತ್ಸಾಹ ಮತ್ತು ಹುರುಪು ತುಂಬಿದರು.

ದೇವನಹಳ್ಳಿಯ ಬಟ್ಟರೇನ ಹಳ್ಳಿ, ವಿಜಯಪುರದಲ್ಲಿ ಪ್ರಚಾರ ನಡೆಸಿದರು. ಚನ್ನರಾಯಪಟ್ಟಣದಲ್ಲಿ ಬಹಿರಂಗ ಸಭೆಯಲ್ಲಿ ಅಭೂತಪೂರ್ವ ಜನಬೆಂಬಲ ದೊರೆಯಿತು.

ವಿಶ್ವನಾಥಪುರ ಗ್ರಾಮದ ಕುಂದಾನ ಹೋಬಳಿ, ದೇವನಹಳ್ಳಿ ಟೌನ್‌ ಕಸಬಾ ಹೋಬಳಿ, ವಿಜಿಪುರ ಟೌನ್‌ ನಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಮಹಿಳೆಯರು, ಮಕ್ಕಳು, ಯುವ ಜನಾಂಗ ರಕ್ಷಾ ರಾಮಯ್ಯ ಅವರಿಗೆ ಹೃದಯ ತುಂಬಿದ ಸ್ವಾಗತ ಕೋರಿದರು.

ಚೆನ್ನರಾಯಪಟ್ಟದಣದಲ್ಲಿ ಮಾತನಾಡಿದ ರಕ್ಷಾ ರಾಮಯ್ಯ, ಯುವಕರು, ಮಹಿಳೆಯರು, ರೈತರು, ಜನ ಸಾಮಾನ್ಯರ ಪಕ್ಷ ಕಾಂಗ್ರೆಸ್‌. ಯುವ ಸಮೂಹಕ್ಕೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚಿನ ಅವಕಾಶ ನೀಡಿದೆ. ಜನರ ಸಂಕಷ್ಟಗಳಿಗೆ ಕಾಂಗ್ರೆಸ್‌ ಮಾತ್ರ ಮಿಡಿಯುತ್ತದೆ. ಈ ಬಾರಿ ತಮ್ಮನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಧ್ವನಿಯಾಗಿ ಕೆಲಸ ಮಾಡಲು ತಮಗೆ ಅವಕಾಶ ಕಲ್ಪಿಸಬೇಕು ಎಂದರು.

ಕಾಂಗ್ರೆಸ್‌ ಆಡಳಿತದಲ್ಲಿ ಶಾಸಕರು, ಸಂಸದರು, ಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಅವಕಾಶವಿದೆ. ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಗುಣ ಕಾಂಗ್ರೆಸ್‌ ನಾಯಕರಲ್ಲಿದೆ. ಆದರೆ ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಮತ್ತಿತರರನ್ನು ಭೇಟಿ ಮಾಡಲು ಕೂಡ ಸಾಧ್ಯವಿಲ್ಲ. ಬಿಜೆಪಿಯಿಂದ ಜನರ ಸಮಸ್ಯೆಗಳಿಗೆ ಸೂಕ್ತ ರೀತಿಯ ಸ್ಪಂದನೆ ದೊರೆಯುವುದಿಲ್ಲ. ಜನರಿಗಾಗಿ ಮಿಡಿಯುವ ಪಕ್ಷ ಕಾಂಗ್ರೆಸ್‌ ಎಂದರು.

ತಮ್ಮ ಬೇಡಿಕೆ ಈಡೇರಿಸುವಂತೆ ದೆಹಲಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದಾಗ ಕನಿಷ್ಠ ಪಕ್ಷ ಅವರನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿ ರಚನಾತ್ಮಕ ಮಾತುಕತೆ ನಡೆಸಲು ಸಹ ಬಿಜೆಪಿ ನಾಯಕರಿಂದ ಸಾಧ್ಯವಾಗಲಿಲ್ಲ. ದೆಹಲಿ ಪ್ರತಿಭಟನೆ ಸಂದರ್ಭದಲ್ಲಿ ಸಹಸ್ರಾರು ರೈತರು ಜೀವ ಕಳೆದುಕೊಂಡಿದ್ದು, ಕರ್ನಾಟಕದ ರೈತ ಸಮೂಹ ಕೂಡ ಹುತಾತ್ಮರಾಗಿದ್ದಾರೆ. ನಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ರೈತರ ಉತ್ಪನ್ನಗಳಿಗೆ ಜಿ.ಎಸ್.ಟಿ ರದ್ದುಪಡಿಸಲಿದೆ. ರೈತರ ಮೇಲಿನ ತೆರಿಗೆ ಹೊರೆಯನ್ನು ತಗ್ಗಿಸಿ ರೈತರಿಗೆ ಅನುಕೂಲ ಮಾಡಿಕೊಡಲಿದೆ. ಬ್ರಿಟಿಷರಿಗಿಂತಲೂ ಕ್ರೂರವಾದ ತೆರಿಗೆ ಪದ್ಧತಿಯನ್ನು ಬಿಜೆಪಿ ಆಡಳಿತದಲ್ಲಿ ಜಾರಿಗೆ ತರಲಾಗಿದೆ ಎಂದು ರಕ್ಷಾ ರಾಮಯ್ಯ ಟೀಕಿಸಿದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದಲ್ಲಿ ಕೋವಿಡ್‌ ನಿಂದ ಸಹಸ್ರಾರು ಕೋಟಿ ರೂಪಾಯಿ ಹಗರಣಗಳು ನಡೆದಿದ್ದು, ಜನರ ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ. ಅಧಿಕ ಮೌಲ್ಯದ ನೋಟುಗಳ ಅಮಾನ್ಯದಿಂದ ಭಾರೀ ಪ್ರತಿಕೂಲ ಪರಿಣಾಮ ಬೀರಿದ್ದು, ಬಡವರ ಹೊಟ್ಟೆಗೆ ಬಿಜೆಪಿ ಆಡಳಿತ ಬರೆ ಹಾಕಿತ್ತು. ಬಿಜೆಪಿ ಸರ್ಕಾರ ಶ್ರೀಮತರಿಗಾಗಿ ಇರುವ ಪಕ್ಷ ಎಂದು ಹೇಳಿದರು.

ಸ್ಥಳೀಯ ನಾಯಕರಾದ ಶಾಂತ್ ಕುಮಾರ್, ರಾಮಚಂದ್ರಪ್ಪ, ರಾಜಣ್ಣ, ಜಗ್ಗಣ್ಣ, ವೀರೆಗೌಡರು, ನಾರಾಯಣ್ ಸ್ವಾಮಿ, ಚಿನ್ನಪ್ಪ, ಅಕ್ಕಯಮ್ಮ, ನಾಗೇಗೌಡರು, ಅಲ್ಪಸಂಖ್ಯಾತ ಮುಖಂಡರು, ರೈತ ಮುಖಂಡರು, ಯುವ ಕಾಂಗ್ರೆಸ್, ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article