ಬೆಳಗಾವಿಯಲ್ಲಿ ಮೋದಿ ರ‍್ಯಾಲಿ ಬಗ್ಗೆ ದೆಹಲಿ ನಾಯಕರ ಜೊತೆ ಚರ್ಚೆ: ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್

Ravi Talawar
WhatsApp Group Join Now
Telegram Group Join Now

ಬೆಳಗಾವಿಪ್ರಧಾನಿ ನರೇಂದ್ರ ಮೋದಿ ರ‍್ಯಾಲಿ ನಡೆಸುವ ಬಗ್ಗೆ ದೆಹಲಿ ನಾಯಕರ ಜತೆಗೆ ಚರ್ಚೆ ನಡೆಯುತ್ತಿದೆ. ಸ್ಥಳ ಮತ್ತು ದಿನಾಂಕ ನಿಗದಿಯಾಗಬೇಕಿದೆ ಎಂದು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್ ಹೇಳಿದರು.

ಬೆಳಗಾವಿಯ ಸದಾಶಿವ ನಗರದ ಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿ ಇಂದು ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ನಡೆಯುತ್ತಿದೆ. ಮೊದಲ ಸುತ್ತು‌ ಮುಗಿಸಿದ್ದೇನೆ. ಜಿಲ್ಲೆಯ ಎಲ್ಲ ಕ್ಷೇತ್ರದಲ್ಲೂ ಪ್ರಚಾರ ಮಾಡುತ್ತಿದ್ದೇನೆ. ಬೆಳಗ್ಗೆ ಚಾಯ್ ಪೆ ಚರ್ಚಾ ಕಾರ್ಯಕ್ರಮ ಬಹಳ ಪರಿಣಾಮಕಾರಿಯಾಗಿ ನಡೆಯುತ್ತಿದೆ. ನಾವು ಏನು ಮಾಡುತ್ತೇವೋ ಅದನ್ನು ತಲುಪಿಸಲು ಮಾಧ್ಯಮ ಕೇಂದ್ರ ತೆರೆದಿದ್ದೇವೆ. ಈ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತದೆ. ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ 17ರಂದು ನಾಮಪತ್ರ ಸಲ್ಲಿಸುತ್ತೇನೆ. ಅಂದು ದೊಡ್ಡ ಪ್ರಮಾಣದಲ್ಲಿ ಜನರು ಸೇರುತ್ತಾರೆ. ಯಡಿಯೂರಪ್ಪ ಸೇರಿ ಹಲವು ನಾಯಕರು ಬರ್ತಾರೆ. ಪ್ರಚಾರಕ್ಕೆ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್, ಯೋಗಿ ಆದಿತ್ಯನಾಥ್​, ಗೋವಾ ಸಿಎಂ ಪ್ರಮೋದ್ ಸಾವಂತ್​ ಸೇರಿ ಹಲವು ನಾಯಕರನ್ನು ಕರೆಸಲು ಪ್ರಯತ್ನಿಸುತ್ತಿದ್ದೇವೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಕೂಡ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.

ಬೆಳಗಾವಿ ಅಭಿವೃದ್ಧಿಗೆ ಶೆಟ್ಟರ್ ಅಡ್ಡಗಾಲು ಹಾಕಿದ್ದಾರೆ ಎನ್ನುವ ಆರೋಪಕ್ಕೆ, ಚುನಾವಣೆ ಬಂದಾಗ ಈ ರೀತಿಯ ಅಪಾದನೆ ಬರುವುದು ಸಹಜ. ಬೆಳಗಾವಿಗೂ ನನಗೂ 30 ವರ್ಷಗಳ ಸಂಬಂಧ ಇದೆ. ಕಾಂಗ್ರೆಸ್‌ನವರ ಹೇಳಿಕೆಗೆ ಬಹಳಷ್ಟು ಕಡೆ ಉತ್ತರ ಕೊಟ್ಟಿದ್ದೇನೆ. ರಾಹುಲ್ ಗಾಂಧಿ ಅವರು ಕೇರಳದ ವಯನಾಡ್‌ಗೆ ಹೋಗಿ ಸ್ಪರ್ಧೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಬಿಟ್ಟು ಬಾದಾಮಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್‌ನವರು ಉತ್ತರ ಕೊಡಬೇಕು ಎಂದು ತಿರುಗೇಟು ನೀಡಿದರು.

ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ, ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮೇಯರ್‌ ಸವಿತಾ ಕಾಂಬಳೆ ಸೇರಿ ಮತ್ತಿತರರು ಇದ್ದರು.

WhatsApp Group Join Now
Telegram Group Join Now
Share This Article