ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಮೃತ! ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥ

Ravi Talawar
WhatsApp Group Join Now
Telegram Group Join Now

ಮಂಡ್ಯ,ಏಪ್ರಿಲ್​ 18: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಗ್ರಾಮದ ಪ್ರಸನ್ನ ಮತ್ತು ಪೂಜಾ ದಂಪತಿಯ ಒಂದೂವರೆ ವರ್ಷದ ಮಕ್ಕಳಾದ ತ್ರಿಶೂಲ್‌ ಮತ್ತು ತ್ರಿಶಾ ಎಂಬವರು ಮೃತರಾದ ಮಕ್ಕಳು ಎಂದು ಗುರುತಿಸಾಗಿದೆ. ಅವರೊಂದಿಗೆ ಐಸ್ ಕ್ರೀಂ ತಿಂದಿದ್ದ ಪೂಜಾ ಕೂಡ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದ್ದು. ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಾಹನದಲ್ಲಿ ಬೆಟ್ಟಹಳ್ಳಿಗೆ ತಂದಿದ್ದ ಐಸ್‌ ಕ್ರೀಂ ಖರೀದಿಸಿ ತಿಂದ ಕೆಲ ಹೊತ್ತಿನ ಬಳಿಕ ಮಕ್ಕಳು ಅಸ್ವಸ್ಥಗೊಂಡಿವೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತರಾದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಆದರೆ ಇದೇ ವಾಹನದಲ್ಲಿ ಗ್ರಾಮದ ಇನ್ನೂ ಹಲವರು ಐಸ್‌ಕ್ರೀಂ ಖರೀದಿಸಿ ತಿಂದಿದ್ದರು. ಬೇರೆಯವರಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎಂದು ಹೇಳಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ. ಮಿಮ್ಸ್ ಆಸ್ಪತ್ರೆಗೆ ಶವಗಳನ್ನು ರವಾನಿಸಲಾಗಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದಾವಣಗೆರೆ ನಗರದ ಅರುಣ್ ಸರ್ಕಲ್ ಬಳಿಯ ಎಕ್ಸಿಬಿಷನ್ ವೊಂದರಲ್ಲಿ ಸ್ಮೋಕ್ ಬಿಸ್ಕೆಟ್ ತಿಂದು ಬಾಲಕನೊರ್ವ ಅಸ್ವಸ್ಥನಾದ ಘಟನೆ ನಡೆದಿದೆ. ದಾವಣಗೆರೆಯ ಅರುಣಾ ಸರ್ಕಲ್ ಬಳಿ ಪ್ರತಿ‌ ಬೇಸಿಗೆ ಕಾಲದಲ್ಲಿ ಮಕ್ಕಳ ಮನರಂಜನೆಗಾಗಿ ಖಾಸಗಿ ಕಂಪನಿಯಿಂದ ಎಕ್ಸಿಬಿಷನ್ ನಡೆಯುತ್ತದೆ. ಈ ಎಕ್ಸಿಬಿಷನ್​ನಲ್ಲಿ ಸ್ಮೋಕ್ ಬಿಸ್ಕೆಟ್ ದೊಡ್ಡವರಿಂದ ಚಿಕ್ಕ‌ ಮಕ್ಕಳವರೆಗೂ ಗಮನ ಸೆಳೆದಿತ್ತು. ಒಂದು ಕಪ್‌ನಲ್ಲಿ 80 ರೂಪಾಯಿಗೆ ಐದು ಚಿಕ್ಕ‌ ಚಿಕ್ಕ ಬಿಸ್ಕೆಟ್​ನ್ನು ಕೊಡಲಾಗುತ್ತದೆ. ಹೀಗೆ ಕೊಟ್ಟ ಬಿಸ್ಕೆಟ್​ನ್ನು ಮಗುವೊಂದು ಒಂದೇ ಸಲ ಬಾಯಿಗೆ ಹಾಕಿಕೊಂಡು ಉಗಿಯಲು ಆಗದೇ ನುಂಗಲು ಆಗದೇ ಕಷ್ಟಪಟ್ಟು ಅಸ್ವಸ್ಥವಾಗಿದೆ.

ಇನ್ನು ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗುವಿಗೆ ಚಿಕಿತ್ಸೆ ನೀಡಿದ ನಂತರ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡು ಪೋಷಕರು, ಎಕ್ಸಿಬಿಷನ್​ನಲ್ಲಿ ಹಾಕಲಾಗಿದ್ದ ಸ್ಟಾಲ್ ನ್ನು ಕಿತ್ತುಬಿಸಾಕಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ಇಂತಹ ಸ್ಮೋಕ್ ಬಿಸ್ಕೆಟ್​ನ್ನು ಮಕ್ಕಳಿಗೆ ಕೊಡಬೇಡಿ ಎಂದು ಎಚ್ಚರಿಸುವ ಆಡಿಯೋ ವೈರಲ್ ಆಗಿದೆ. ಇನ್ನು ಘಟನೆ ಕುರಿತು ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಗೆ ಪಾಲಕರು ದೂರು ನೀಡಿದ್ದಾರೆ.

WhatsApp Group Join Now
Telegram Group Join Now
Share This Article