ಥಲಸ್ಸೆಮಿಯಾ ರೋಗದ ಆರಂಭಿಕ ಪತ್ತೆಗಾಗಿ ವೈದ್ಯರನ್ನು ಭೇಟಿ ಮಾಡಿ: ಡಿಹೆಚ್‍ಓ ಡಾ.ವೈ.ರಮೇಶ್‍ಬಾಬು ಸಲಹೆ

Ravi Talawar
WhatsApp Group Join Now
Telegram Group Join Now

ಬಳ್ಳಾರಿ,ಮೇ 08 ಅನುವಂಶೀಯ ಆಧಾರಿತ ರಕ್ತದ ತೊಂದರೆಯ ಕಾಯಿಲೆಯಾದ ಥಲಸ್ಸೆಮಿಯಾ ರೋಗದ ಆರಂಭಿಕ ಪತ್ತೆಗಾಗಿ ಹತ್ತಿರದ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸಾ ಮಾರ್ಗದರ್ಶನ ಹೊಂದಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಇವರ ಆಶ್ರಯದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕಚೇರಿ ಸಭಾಂಗಣದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಥಲಸ್ಸೆಮಿಯಾ ಜಾಗೃತಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಥಲಸ್ಸೆಮಿಯಾ ಅನುವಂಶೀಯ ಆಧಾರಿತ ರಕ್ತದ ತೊಂದರೆಯ ಕಾಯಿಲೆಯಾಗಿದ್ದು. ದೇಹದಲ್ಲಿ ಸೂಕ್ತ ಸಂಖ್ಯೆಯ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾಗಿ ಉತ್ಪಾದನೆಯಾದ ರಕ್ತಕಣಗಳನ್ನು ಕೂಡ ಬೇಗನೇ ನಾಶವಾಗಿ ಹಿಮೋಗ್ಲೋಬಿನ್ ಮಟ್ಟ ಅತ್ಯಂತ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಸುಸ್ತು, ಅಶಕ್ತತೆ, ದಮ್ಮು, ಕೆಮ್ಮು, ಕಂಡುಬರುತ್ತವೆ. ಅಲ್ಲದೇ ರಕ್ತ ಹೀನತೆ ಉಲ್ಬಣಗೊಂಡಾಗ ಅಂಗಾಂಗಗಳ ವೈಫಲ್ಯ ಉಂಟಾಗಿ ವ್ಯಕ್ತಿಯ ಮರಣಕ್ಕೂ ಕಾರಣವಾಗಬಹುದು ಈ ದಿಶೆಯಲ್ಲಿ ರೋಗವನ್ನು ಆರಂಭದಲ್ಲಿಯೇ ಗುರ್ತಿಸಿ ಸೂಕ್ತ ಚಿಕಿತ್ಸೆ ನೀಡಲು ಸಹಾಯಕವಾಗುತ್ತದೆ ಎಂದರು.
ಪ್ರಪಂಚದ ಒಟ್ಟು ಜನಸಂಖ್ಯೆಯ ಪ್ರತಿಶತ 1.5 ರಷ್ಟು (ಸುಮಾರು 90 ಮಿಲಿಯನ್ ಜನರು) ಜನ ಥಲಸ್ಸೆಮಿಯಾ ವಾಹಕರಾಗಿರುವುರೆಂದು ಅಂದಾಜಿಸಲಾಗಿದೆ. ಈ ರೋಗದಿಂದ ಬಳಲುವ ಸುಮಾರು 60,000 ಮಕ್ಕಳು ಪ್ರತಿ ವರ್ಷ ಹುಟ್ಟುತ್ತಾರೆಂದು ಗುರುತಿಸಲಾಗಿದೆ. ಏಷಿಯಾ, ಚೀನಾ, ಮೆಡಿಟೇರಿಯನ್, ಗ್ರೀಸ್, ಟರ್ಕಿ, ಆಫ್ರಿಕಾ ಮತ್ತು ಅಮೇರಿಕದಲ್ಲಿಯೂ ರೋಗದ ತೀವ್ರತೆ ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿದೆ. ಪ್ರಸ್ತುತ ಬಳ್ಳಾರಿ ಜಿಲ್ಲೆಯಲ್ಲಿ 76 ಜನ ಥಲಸ್ಸೀಮಿಯಾ ರೋಗಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
*ರೋಗಕ್ಕೆ ಕಾರಣಗಳು:*
ಜೀವಕೋಶಗಳಲ್ಲಿ ಹಿಮೋಗ್ಲೋಬಿನ್ ಉತ್ಪತ್ತಿ ಮಾಡುವ ಡಿಎನ್‍ಎಯು ರೂಪಾಂತರದಿಂದ ಥಲಸ್ಸೆಮಿಯಾ ಉಂಟಾಗುವುದು, ಥಲಸ್ಸೇಮಿಯಾಕ್ಕೆ ಸಂಬಂಧಿಸಿದ ರೂಪಾಂತರಿ ಡಿಎನ್‍ಎಗಳು ತಂದೆ ತಾಯಿಗಳಿಂದ ಮಕ್ಕಳಿಗೆ ರವಾನೆಯಾಗುವುವು. ಒಂದು ವೇಳೆ ತಂದೆ ತಾಯಿಗಳಲ್ಲಿ ಒಬ್ಬರು ಥಲಸ್ಸೆಮಿಯಾ ವಾಹಕರಾಗಿದ್ದಲ್ಲಿ ಹುಟ್ಟುವ ಮಗು ಥಲಸ್ಸೆಮಿಯಾ ಮೈನರ್ ರೋಗಕ್ಕೆ ತುತ್ತಾಗಬಹುದು. ಇವರಲ್ಲಿ ಯಾವುದೇ ಲಕ್ಷಣಗಳು ಕಂಡುಬರದಿರಬಹುದು. ಆದರೆ ಅವರು ವಾಹಕರಾಗಿ ಮುಂದುವರೆಯುವರು, ಕೆಲವೊಮ್ಮೆ ಇವರು ಅತ್ಯಂತ ಕನಿಷ್ಟ ಲಕ್ಷಣಗಳನ್ನು ತೋರ್ಪಡಿಸಬಹುದು. ಅಕಸ್ಮಾತ್ ತಂದೆ ತಾಯಿಗಳಿಬ್ಬರೂ ವಾಹಕರಾಗಿದ್ದಲ್ಲಿ ಗಂಭೀರ ಸ್ವರೂಪದ ರೋಗದ ಸಾಧ್ಯತೆಗಳು ಹೆಚ್ಚು ಇರುತ್ತವೆ.
*ರೋಗ ಪತ್ತೆಗೆ ವಿಧಾನ:*
ಥಲಸ್ಸೆಮಿಯಾ ಕಾಯಿಲೆ ಪತ್ತೆಗೆ ರಕ್ತ ಪರೀಕ್ಷೆ ಮಾಡಬೇಕಾಗುತ್ತದೆ. ಅನಿಮಿಯಾ ಪ್ರಮಾಣಕ್ಕಾಗಿ ಹಿಮೋಗ್ಲೋಬಿನ್ ಪರೀಕ್ಷೆ ಮಾಡಲಾಗುತ್ತದೆ. ರಕ್ತಕಣಗಳ ಗಾತ್ರ, ಆಕಾರವನ್ನು ಪತ್ತೆ ಹಚ್ಚಲಾಗುತ್ತದೆ. ಕೆಂಪು ರಕ್ತಕಣಗಳು ಅಸಹಜ ಗಾತ್ರದಲ್ಲಿದ್ದರೆ, ಅದು ಥಲಸ್ಸೆಮಿಯಾ ಕಾಯಿಲೆ ಎಂಬುದು ಪತ್ತೆಯಾಗುತ್ತದೆ. ಮೂಳೆಗಳ ವೈಪರಿತ್ಯ ಖಚಿತಪಡಿಸಲು ಮುಖದ ಮೂಳೆಗಳ ಎಕ್ಸರೆ ಅವಶ್ಯವಾಗಿದೆ ಎಂದು ತಿಳಿಸಿದರು.
*ಉಪಚಾರ:*
ಥಲಸ್ಸೆಮಿಯಾ ಕಾಯಿಲೆಗೆ ತುತ್ತಾದವರು ಅಪೌಷ್ಟಿಕತೆ ಸಹಜವಾಗುವುದರಿಂದ ಸತ್ವಯುತ, ಶಕ್ತಿಯುತ ಸಮತೋಲನ ಆಹಾರ ಸೇವೆನೆ ಅವಶ್ಯವಾಗಿದೆ. ಇವರು ಹಂದಿ ಮಾಂಸ, ಗೋ ಮಾಂಸ, ಬೀನ್ಸ್ ಕಡಲೆಕಾಯಿ, ಎಣ್ಣೆ, ಸೋಯ ಮೊಸರು ಸೇವಿಸಬಾರದು. ಥಲಸ್ಸೆಮಿಯಾದಲ್ಲಿ ಕ್ಯಾಲ್ಸಿಯಮ್ ಕೊರತೆ ಕಾಣಿಸುವುದು ಇದರ ನಿವಾರಣೆಗಾಗಿ ಹಾಲು ಸಾಕಷ್ಟು ಸೇವಿಸಬೇಕು. ಚಿಕಿತ್ಸಾ ವಿಧಾನದಲ್ಲಿ ರಾಸಾಯನಿಕ ವಸ್ತುಗಳನ್ನು ನೀಡಿದಾಗ ಅವು ದೇಹದಲ್ಲಿಯ ಕಬ್ಬಿಣಾಂಶಗಳ ಜೊತೆಗೆ ಕೂಡಿ ಅವನ್ನು ದೇಹದಿಂದ ಹೊರಗೆ ಹಾಕುವವು ಇದರಿಂದ ದೇಹದಲ್ಲಿಯ ಕಬ್ಬಿಣಾಂಶದ ಪ್ರಮಾಣ ಕಡಿಮೆಯಾಗುವುದು. ರಕ್ತ ಪೂರಣೆ, ಐರನ್ ಚೆಲೇಶನ್ ಚಿಕಿತ್ಸೆ ಪಡೆಯುವವರಿಗೆ ಪೋಲಿಕ್ ಆಮ್ಲ ಪೂರೈಕೆ ಅವಶ್ಯ ಇದು ಕೆಂಪು ರಕ್ತಕಣಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ.ವಿ., ಜಿಲ್ಲಾ ಮಲೇರಿಯಾ ನಿಯಂತ್ರಣಾದಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಹಿರಿಯ ವೈದ್ಯರಾದ ಡಾ.ನರಸಿಂಹಮೂರ್ತಿ, ಡಾ.ಭಾರತಿ, ಡಾ.ಚೈತ್ರಾ, ಡಾ.ಕರುಣಾ, ಡಾ.ಕಾಶಿಪ್ರಸಾದ್, ಡಾ.ಪ್ರಲ್ಹಾದ್, ಡಾ.ಜಬೀನ ತಾಜ್, ಡಾ.ಫಮೀದಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ,  ಬಿಪಿಎಮ್ ಮೇಘರಾಜ್ ಸೇರಿದಂತೆ ವೈದ್ಯಾಧಿಕಾರಿಗಳು ಸಿಬ್ಬಂದಿಯವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article