ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ವಜಾಗೊಳಿಸಿದ ವಿಜಿಲೆನ್ಸ್ ಇಲಾಖೆ

Ravi Talawar
WhatsApp Group Join Now
Telegram Group Join Now

ನವದೆಹಲಿ,ಏಪ್ರಿಲ್ 11: ಇತ್ತೀಚೆಗೆ ರಾಷ್ಟ್ರ ರಾಜಧಾನಿ ರಾಜಕೀಯ ವಲಯದಲ್ಲಿ ಸಾಕಷ್ಟು ಬೆಳವಣಿಗೆ ಕಾಣುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ವಿಜಿಲೆನ್ಸ್ ಇಲಾಖೆ ವಜಾಗೊಳಿಸಿದೆ.

ಬಿಭವ್ ಕುಮಾರ್ ಅವರ ನೇಮಕಾತಿ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ವಿಜಿಲೆನ್ಸ್ ಇಲಾಖೆ ವಜಾಗೊಳಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈಗಾಗಲೇ ದೆಹಲಿ ಮದ್ಯ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ತಿಹಾರ್ ಜೈಲು ಸೇರಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ. ಬುಧವಾರ ತಿಹಾರ್​ ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಭವ್ ಕುಮಾರ್ ಭೇಟಿಯಾಗಿದ್ದರು. ವಿಜಿಲೆನ್ಸ್ ಇಲಾಖೆಯ ವಿಶೇಷ ಕಾರ್ಯದರ್ಶಿ ವೈವಿವಿಜೆ ರಾಜಶೇಖರ್ ಅವರು ಹೊರಡಿಸಿರುವ ಐದು ಪುಟಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ.

ಮದ್ಯದ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಸೋಮವಾರ ಬಿಭವ್ ಕುಮಾರ್ ಅವರನ್ನು ವಿಚಾರಣೆ ನಡೆಸಿತ್ತು. ಪಿಎಂಎಲ್‌ಎ ನಿಬಂಧನೆಗಳ ಅಡಿ ಬಿಭವ್ ಕುಮಾರ್ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಈ ಹಿಂದೆ ಫೆಬ್ರವರಿಯಲ್ಲೂ ಇಡಿ ಅಧಿಕಾರಿಗಳ ತಂಡ ಬಿಭವ್​ ಮನೆ ಮೇಲೆ ದಾಳಿ ನಡೆಸಿ 16 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

ಆಗ ಅರವಿಂದ್ ಕೇಜ್ರಿವಾಲ್ ಇಡಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜಕೀಯ ದುರುದ್ದೇಶದಿಂದ ಇದೆಲ್ಲ ಮಾಡಲಾಗುತ್ತಿದೆ. ಬಿಭವ್ ಕುಮಾರ್ ಅವರ ಮನೆ ಮೇಲೆ 23 ಇಡಿ ಅಧಿಕಾರಿಗಳು ದಾಳಿ ನಡೆಸಿ 16 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಸಮಗ್ರ ತನಿಖೆಯ ನಂತರ ಅವರಿಗೆ ಒಂದೇ ಒಂದು ಪೈಸೆ, ಯಾವುದೇ ಆಭರಣ, ಆಸ್ತಿ, ಕಾಗದಗಳು ಕಂಡು ಬಂದಿಲ್ಲ. ನಮಗೆ ಕಿರುಕುಳ ನೀಡಲು, ಆಮ್ ಆದ್ಮಿ ಪಕ್ಷವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಆರೋಪಿಸಿದ್ದರು.

WhatsApp Group Join Now
Telegram Group Join Now
Share This Article