ಕಾಂಗ್ರೆಸ್ ಅಭ್ಯರ್ಥಿಗೆ ಶಾಕ್ ಕೊಟ್ಟ ವೀಣಾ: ಬಂಡಾಯ ಸಾರಿದ ಶಾಸಕ ವಿಜಯಾನಂದ್ ಪತ್ನಿ

Ravi Talawar
WhatsApp Group Join Now
Telegram Group Join Now

ಬೆಂಗಳೂರು/ಬಾಗಲಕೋಟೆ, (ಏಪ್ರಿಲ್ 05): ಶಾಸಕ ವಿಜಯಾನಂದ್​ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಅವರಿಗೆ ಈ ಬಾರಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದೆ. ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್​ಗೆ ಟಿಕೆಟ್​ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ವೀಣಾ ಕಾಶಪ್ಪನವರ್, ಪ್ರಚಾರದಿಂದ ದೂರ ಉಳಿದಿದ್ದಾರೆ.

ಇನ್ನು ಸಚಿವ ಶಿವಾನಂದ ಪಾಟೀಲ್ ಅವರು ಶಾಸಕ ವಿಜಯಾನಂದ ವಿಜಯಾನಂದ್​ ಕಾಶಪ್ಪನವರ್ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಇನ್ನು ವಿಜಯಾನಂದ್​ ಕಾಶಪ್ಪನವರ್ ಸಹ ಪ್ರಚಾರ ಸಭೆಯಲ್ಲೂ ಪಾಲ್ಗೊಂಡಿದ್ದರು. ಹೀಗಾಗಿ ಎಲ್ಲಾ ಸಂಧಾನವಾಗಿದ್ದು, ಅಸಮಾದಾನ ಶಮನವಾಗಿದೆ. ಎಲ್ಲರೂ ಒಂದಾಗಿದ್ದಾರೆ ಎನ್ನಲಾಗಿತ್ತು. ಆದ್ರೆ, ಇದೀಗ ಸ್ವತಃ ವೀಣಾ ಕಾಶಪ್ಪನವರ್ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

ಕ್ಷೇತ್ರದ ಅಭಿಮಾನಿಗಳು, ಬೆಂಬಲಿಗರಿಗೆ ವಿಡಿಯೋ ಸಂದೇಶ ನೀಡಿರುವ ವೀಣಾ ಕಾಶಪ್ಪನವರ್, ನನ್ನ ಪತಿ ಶಾಸಕ ವಿಜಯಾನಂದ ಕಾಶಪ್ಪನವರ್, ಎಲ್ಲ ನಾಯಕರು ಸಂಯುಕ್ತಾ ಪರ ನಾನು ಪ್ರಚಾರಕ್ಕೆ ಹೋಗುತ್ತೇವೆಂದು ಹೇಳಿಕೆ ನೀಡಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ಸಚಿವ ಶಿವಾನಂದ ಪಾಟೀಲ್ ನಮ್ಮ ಇಳಕಲ್ ನಿವಾಸಕ್ಕೆ ಭೇಟಿ ನೀಡಿದ್ರು. ಭೇಟಿ ವೇಳೆ ಸಂಧಾನ ಸಭೆ ಯಶಸ್ವಿಯಾಗಿದೆ ಎಂದು ಸಚಿವರು ಹೇಳಿದ್ದಾರೆ. ನಿವಾಸದಲ್ಲಿ ಸಂಧಾನ ಸಭೆ ನಡೆದಿಲ್ಲ, ಅದು ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ವೀಣಾ ಕಾಶಪ್ಪನವರ್ ಬಂಡಾಯ ಸಾರಿದ್ದಾರೆ.

ನಾನು ಅನಾರೋಗ್ಯದ ಕಾರಣ ಬೆಂಗಳೂರಿನಲ್ಲಿದ್ದೇನೆ. ಇವತ್ತಿಗೂ ನನ್ನದು ಸ್ವಾಭಿಮಾನದ ನಿಲುವು. ಬಾಗಲಕೋಟೆ ಜಿಲ್ಲೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರನ್ನು ಭೇಟಿ ಮಾಡುತ್ತೇನೆ. ಜನರ ಅಭಿಪ್ರಾಯ ಸಂಗ್ರಹಿಸಿ ನಂತರ ನನ್ನ ನಿಲುವು ತಿಳಿಸುತ್ತೇನೆ. ಇನ್ನು ನಾಳೆ(ಏಪ್ರಿಲ್ 06) ಬೆಂಬಲಿಗರ ಸಭೆ ಕರೆದಿದ್ದೇನೆ, ಅವರ ಅಭಿಪ್ರಾಯ ಕೇಳುತ್ತೇನೆ ಎಂದು ಹೇಳಿದ್ದಾರೆ.

ಸಂಯುಕ್ತ ಪಾಟೀಲ್ ಹಾಗೂ ವೀಣಾ ಕಾಶಪ್ಪನವರ್ ಜೊತೆಗೆ ಪ್ರಚಾರಕ್ಕೆ ಬರುತ್ತಾರೆ ಎಂದು ಈಗಾಗಲೇ ಹಲವಾರು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಅವರ ತಂದೆಯವರು ಹೇಳಿದ್ದು ಅದು ಸತ್ಯಕ್ಕೆ ದೂರವಾದದ್ದು. ಇನ್ನೂ ಕೂಡ ನನ್ನ ಅಸಮಾಧಾನ ಹಾಗೆ ಇದೆ. ಸ್ಪಷ್ಟವಾದ ನನ್ನ ಸ್ವಾಭಿಮಾನದ ನಿಲುವು ತಟಸ್ಥಳಾಗಿ ಉಳಿಯುವುದು ಅದು ಅಚಲವಾಗಿದೆ. ನನ್ನ ಮುಂದಿನ ನಿರ್ಧಾರ ತಿಳಿಸುವವರಿಗೆ ಈ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸುತ್ತೇನೆ ಎಂದು ವಿಡಿಯೋದಲ್ಲಿ ಸಂದೇಶದಲ್ಲಿ ಹೇಳಿದ್ದಾರೆ.

ಹಲವಾರು ಅಭಿಮಾನಿಗಳು ಕರೆ ಮಾಡುತ್ತಿದ್ದೀರಿ, ಅಭಿಪ್ರಾಯಗಳನ್ನ ನನ್ನೊಟ್ಟಿಗೆ ಹಂಚಿಕೊಳ್ಳುತ್ತಿದ್ದೀರಿ. ಸಾಕಷ್ಟು ಮಹಿಳೆಯರು ನನ್ನನ್ನ ಸಂಪರ್ಕಿಸಲು ಆಗಿಲ್ಲ ಎಂದು ನೋವು ಮಾಡಿಕೊಂಡಿದ್ದಾರೆ. ಎಲ್ಲರನ್ನು ಭೇಟಿ ಮಾಡುವ ಕೆಲಸವನ್ನ ನಾನು ಮಾಡುತ್ತೇನೆ. ಪಂಚಾಯತಿ ಮಟ್ಟದಲ್ಲಿ ಜನರನ್ನ ಭೇಟಿ ಮಾಡಿ ಅಭಿಪ್ರಾಯಗಳನ್ನು ಸಂಗ್ರಹ ಮಾಡಿ ಅದಾದ ಮೇಲೆ ನನ್ನ ನಿಲುವನ್ನು ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

 

WhatsApp Group Join Now
Telegram Group Join Now
Share This Article