ಈ ಬಾರಿಯ ಬೇಸಿಗೆ ದೇಶದ ಬಹುಭಾಗವನ್ನು ಹೈರಾಣವಾಗಿಸಿದೆ! ಈ ಏಪ್ರಿಲ್ ತಿಂಗಳಲ್ಲಿ ಯಾಕಿಷ್ಟು ಬೇಸಿಗೆ ಬಿಸಿ?

Ravi Talawar
WhatsApp Group Join Now
Telegram Group Join Now

ನವದೆಹಲಿ, ಏಪ್ರಿಲ್ 30: ಈ ಬಾರಿಯ ಬೇಸಿಗೆ ದೇಶದ ಬಹುಭಾಗವನ್ನು ಹೈರಾಣವಾಗಿಸಿದೆ. ಬೆಂಗಳೂರಿನಂಥ ಬೆಂಗಳೂರು ನಗರ ಅಕ್ಷರಶಃ ಬೆಂದ ಊರಾಗಿ ಹೋಗಿದೆ. ಹೆಚ್ಚಿನ ಭಾಗದಲ್ಲಿ ಹೀಟ್​ವೇವ್ ಅಥವಾ ಉಷ್ಣಗಾಳಿಯ ಹೊಡೆತ ಬಿದ್ದಿದೆ.

ಭಾರತದಲ್ಲಿ ಸಾಮಾನ್ಯವಾಗಿ ಕೇಂದ್ರ ಮತ್ತು ಉತ್ತರ ಭಾರತದ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಉಷ್ಣ ಅಲೆ ಹೆಚ್ಚಿರುತ್ತದೆ. ಈ ಬಾರಿ ದಕ್ಷಿಣ ಭಾರತ ಹೆಚ್ಚು ಅಸಹಜ ಏಪ್ರಿಲ್ ತಾಪವನ್ನು ಕಂಡಿದೆ. ಸದರ್ನ್ ಪೆನಿನ್ಸುಲಾರ್ ಆಥವಾ ದಕ್ಷಿಣ ದ್ವೀಪ ಮತ್ತು ನೃರುತ್ಯ ಕರಾವಳಿ ಪ್ರದೇಶಗಳನ್ನು (Southeastern coast regions) ಹೆಚ್ಚಾಗಿ ಬಾಧಿಸಿದೆ. ಕರ್ನಾಟಕ, ಆಂಧ್ರ, ಒಡಿಶಾ, ತಮಿಳೂನಾಡು, ಕೇರಳ, ಜಾರ್ಖಂಡ್, ಬಿಹಾರ್, ಸಿಕ್ಕಿಂ ರಾಜ್ಯಗಳ ಜನರು ಬಿರು ಬಿಸಿಲಿಗೆ ಕಂಗೆಟ್ಟಿದ್ದಾರೆ. ಹೆಚ್ಚಿನ ಪ್ರದೇಶಗಳಲ್ಲಿ ಏಪ್ರಿಲ್​ನಲ್ಲಿ ಇರುವ ವಾಡಿಕೆಗಿಂತ ಹೆಚ್ಚು ಬಿಸಿಲು ಈ ಬಾರಿ ಇದೆ.

ಏಪ್ರಿಲ್ ಮತ್ತು ಮೇ ತಿಂಗಳು ಬೇಸಿಗೆಯ ಪ್ರಮುಖ ತಿಂಗಳುಗಳಾಗಿವೆ. ಕೆಲವೆಡೆ ತಾಪಮಾನ 48 ಡಿಗ್ರಿವರೆಗೂ ಹೋಗುತ್ತದೆ. ಬೆಂಗಳೂರಿನಲ್ಲಿ 35-36 ಇರುವ ತಾಪಮಾನ 40ರ ಗಡಿ ದಾಟಿದೆ. ಇದು ಬೆಂಗಳೂರಿಗೆ ಅಸ್ವಾಭಾವಿಕ ಉಷ್ಣಾಂಶ ಎನಿಸುತ್ತದೆ. ಈ ರೀತಿ ಅಸಹಜ ಬಿಸಿಲು ದೇಶದ ಹೆಚ್ಚಿನ ಭಾಗದಲ್ಲಿ ಈ ಏಪ್ರಿಲ್​ನಲ್ಲಿ ಇದೆ. ತಜ್ಞರು ಇದಕ್ಕೆ ಎರಡು ಕಾರಣಗಳನ್ನು ನೀಡುತ್ತಾರೆ. ಒಂದು ಎಲ್ ನಿನೋ ಪರಿಣಾಮ. ಇನ್ನೊಂದು, ಆಂಟಿಸೈಕ್ಲೋನ್ ಸಿಸ್ಟಂ.

ಎಲ್ ನಿನೋ ಎಂಬುದು ಒಂದು ವಿಧದ ಹವಾಮಾನ ಸ್ಥಿತಿ. ಈಕ್ವಟರ್ ಬಳಿಯ, ಅಂದರೆ ಭೂಮಧ್ಯೆ ರೇಖೆಯಲ್ಲಿನ ಪೆಸಿಫೀಕ್ ಮಹಾಸಾಗರದ ಮೇಲ್ಮೈ ನೀರು ಅಸಹಜ ರೀತಿಯಲ್ಲಿ ಬಿಸಿಯಾಗುತ್ತದೆ. ಇದರಿಂದ ವಿಶ್ವದ ಹಲವು ಭಾಗಗಳಲ್ಲಿ ವಾತಾವರಣ ಉಷ್ಣಾಂಶ ಹೆಚ್ಚಳಕ್ಕೆ ಎಡೆ ಮಾಡಿಕೊಡುತ್ತದೆ. ಇದನ್ನೇ ಎಲ್ ನಿನೋ ಪರಿಣಾಮ ಎನ್ನುತ್ತಾರೆ.

ಈ ಎಲ್ ನಿನೋ 2023ರ ಜೂನ್ ತಿಂಗಳಲ್ಲಿ ನಿರ್ಮಾಣವಾಗಿರುವುದು ಗೊತ್ತಾಗಿದೆ. ಐಎಂಡಿ ಸಂಸ್ಥೆಯ ಮಹಾ ನಿರ್ದೇಶಕರಾದ ಮೃತ್ಯುಂಜಯ್ ಮೋಹಪಾತ್ರ ಅವರ ಪ್ರಕಾರ, ಎಲ್ ನಿನೋ ಸ್ಥಿತಿಯಲ್ಲಿ ಆರಂಭವಾಗುವ ವರ್ಷದಲ್ಲಿ ವಿಪರೀತ ಉಷ್ಣಾಂಶ ಮತ್ತು ಬಿಸಿಗಾಳಿ ಪ್ರವಹಿಸುತ್ತದೆ. ಮುಂಗಾರು ಪೂರ್ವ ಮಳೆ ಸಹಜಕ್ಕಿಂತ ಬಹಳ ಕಡಿಮೆ ಇರುತ್ತದೆ. ಹೀಗಾಗಿ, ಏಪ್ರಿಲ್​ನಲ್ಲಿ ಬರಬೇಕಿದ್ದ ವಾಡಿಕೆ ಮಳೆ ಈ ಬಾರಿ ಇಲ್ಲ. ಉಷ್ಣಾಂಶ ಕೂಡ ಅಸಹಜವಾಗಿ ಏರಿದೆ.

ದಕ್ಷಿಣ ದ್ವೀಪೀಯ ಮತ್ತು ನೈರುತ್ಯ ಕರಾವಳಿ ಭಾಗದಲ್ಲಿ ಚಂಡಮಾರುತ ತಡೆ ನಿರ್ಮಾಣವಾಗಿರುವುದು ಏಪ್ರಿಲ್ ಅಸಹಜ ಬಿಸಿಲಿಗೆ ಕಾರಣವಾಗಿದೆ. ಈ ಆ್ಯಂಟಿ ಸೈಕ್ಲೋನ್ ಸಿಸ್ಟಂಗಳು ಭೂಮಿಯಿಂದ 3 ಕಿಮೀ ಎತ್ತರದಲ್ಲಿ ನಿರ್ಮಾಣವಾಗಿರುತ್ತವೆ. ಎರಡು ಸಾವಿರ ಕಿಮೀವರೆಗೂ ಇದರ ವಿಸ್ತಾರ ಇರಬಹುದು. ಈ ಹೈಪ್ರೆಶನ್ ಸಿಸ್ಟಂಗಳು ಗಾಳಿಯನ್ನು ಕೆಳಗೆ ತಳ್ಳುತ್ತವೆ. ಭೂಮಿಯತ್ತ ಬಲವಂತವಾಗಿ ಈ ಗಾಳಿಯನ್ನು ತಳ್ಳಲಾಗುವುದರಿಂದ ಈ ಗಾಳಿ ಹೆಚ್ಚು ಬಿಸಿಯಾಗುತ್ತದೆ.

ಕುತೂಹಲ ಎಂದರೆ, ಈ ಪ್ರಕ್ರಿಯೆಯಲ್ಲಿ ನೆಲದ ಮೇಲಿರುವ ಗಾಳಿ ಸಮುದ್ರದತ್ತ ಹೋಗತೊಡಗುತ್ತದೆ. ಸಮುದ್ರದಿಂದ ಬರಬೇಕಿದ್ದ ತಂಪಾದ ಗಾಳಿ ಅಲ್ಲಿಯೇ ನಿಲ್ಲುತ್ತದೆ. ಈ ತಂಪು ಗಾಳಿ ಬೇಸಿಗೆಯಲ್ಲಿ ಒಂದಷ್ಟು ತಂಪು ತರಲು ಸಹಾಯಕವಾಗುತ್ತಿತ್ತು. ಈಗ ಅದು ತಪ್ಪಿದಂತಾಗಿದೆ. ಹೀಗಾಗಿ, ಎಪ್ರಿಲ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ಇದೆ.

WhatsApp Group Join Now
Telegram Group Join Now
Share This Article