ಹೆತ್ತ ಕರುಳಿನ ಮೊರೆಗೆ ದೇವರ ಮನಸ್ಸು ಕರಗಿ ಕಂದಮ್ಮ ಸಾವನ್ನೇ ಗೆದ್ದು ಬಂದ ಕಥೆ ಇದು ಸಾವನ್ನೇ ಗೆದ್ದು ಬಂದ ಸಾತ್ವಿಕ್ ಇನ್ಮುಂದೆ ಸಿದ್ದಲಿಂಗ

Ravi Talawar
WhatsApp Group Join Now
Telegram Group Join Now

ಎಲ್ಲರ ಪ್ರಾರ್ಥನೆ ಫಲಿಸಿ, ಅಪಾಯಕಾರಿ ತೆರೆದ ವಿಫಲ ಕೊಳವೆ ಬಾವಿಗೆ ಬಿದ್ದಿದ್ದ ಕಂದಮ್ಮ ಸಾತ್ವಿಕ್ ಕೊನೆಗೂ ಪವಾಡ ಸದೃಶ್ಯ ರೀತಿಯಲ್ಲಿಯೇ ಸಾವನ್ನು ಗೆದ್ದು ಬಂದಿದ್ದಾನೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣದ ಪವಾಡ ಪುರುಷ ಸಿದ್ದಲಿಂಗ ಮಹರಾಜರ ಪವಾಡದಿಂದಲೇ ಕಂದಮ್ಮ ಸಾತ್ವಿಕ್‌ನ ಪ್ರಾಣ ಉಳಿದಿದೆ ಎಂದು ಬಣ್ಣಿಸಲಾಗುತ್ತಿದೆ.
ದೇಶದಲ್ಲಿ ಅದೆಷ್ಟೋ ಕೊಳವೆ ಬಾವಿ ಪ್ರಕರಣಗಳು ನಡೆದಿವೆ. ಆದರೆ ಇಂತಹ ಅಪಾಯಕಾರಿಯಾದ ಬಾವಿಗೆ ಬಿದ್ದ ಕಂದಮ್ಮಗಳು ಬದುಕಿ ಬಂದ ಪ್ರಕರಣಗಳು ಬಹಳ ಕಡಿಮೆ. ಇದೊಂದು ಅಚ್ಚರಿಯೋ ಪವಾಡವೋ ಅಥವಾ ಕೋಟ್ಯಾಂತರ ಜನರ ಪ್ರಾರ್ಥನೆಯ ಫಲವೋ ಸಾತ್ವಿಕ್ ಪ್ರಕರಣದಲ್ಲಿ ಪವಾಡವೇ ನಡೆದು ಹೋಗಿದೆ.

ನೂರಾರು ಅಡಿ ಆಳದ ಬಾವಿಗೆ ಬಿದ್ದಿದ್ದ ಪುಟ್ಟ ಕಂದಮ್ಮ ಸಾವು ಬದುಕಿನ ಹೋರಾಟ ನಡೆಸಿ ಪುನರ್ಜನ್ಮ ಪಡೆದು ಬಂದಿದ್ದಾನೆ. ಆದ್ದರಿಂದಲೇ ಇದು ಇಂಡಿ ತಾಲ್ಲೂಕಿನ ಲಚ್ಯಾಣದ ಸಿದ್ದಲಿಂಗ ಮಹರಾಜರ ಪವಾಡವೇ ಸರಿ ಎಂದು ಅನೇಕರು ಬಣ್ಣಿಸುತ್ತಿದ್ದಾರೆ. ಒಂದೆಡೆ ಜಿಲ್ಲಾಡಳಿತ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ಫಲ ಸಿಕ್ಕಿದ್ದರೆ, ಇನ್ನೊಂದೆಡೆ ಇದೇ ಲಚ್ಯಾಣ ಗ್ರಾಮದ ಸಿದ್ದಲಿಂಗ ಮಹಾರಾಜ ಪವಾಡದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ನೂರಾರು ಅಡಿ ಆಳದಲ್ಲಿ ಸತತ 20 ಗಂಟೆಗಳ ಕಾಲ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಸಾತ್ವಿಕ್ ಬದುಕಿ ಬರ್ತಾನೋ ಇಲ್ವೋ ಎನ್ನುವ ಆತಂಕ ಸಾತ್ವಿಕ್‌ನ ತಾಯಿಗೆ ಕಾಡ್ತಿತ್ತು. ತನ್ನ ಪುಟ್ಟ ಕಂದಮ್ಮ ಬಾವಿಗೆ ಬಿದ್ದಾಗಿನಿಂದ ಸಾತ್ವಿಕ್ ತಾಯಿ ಪೂಜಾ ಕಣ್ಣೀರಿನಲ್ಲೇ ಕಾಲ ಕಳೆದಿದ್ದರು. ಆಗ ನನ್ನ ಮಗನನ್ನು ಬದುಕಿಸಪ್ಪ ಅಂತಾ ದೇವರಿಗೆ ಮೊರೆ ಇಟ್ಟಿದ್ದರು. ಹೆತ್ತ ಕರುಳಿನ ಮೊರೆಗೆ ದೇವರ ಮನಸ್ಸು ಕರಗಿ ಕಂದ ಸಾತ್ವಿಕ್ ಸಾವನ್ನೇ ಗೆದ್ದು ಬಂದಿದ್ದಾನೆ.

ತನ್ನ ಮಗು ಕೊಳವೆ ಬಾವಿಗೆ ಬಿದ್ದಾಗ ಸಾತ್ವಿಕ್ ತಾಯಿ ಲಚ್ಯಾಣದ ಪವಾಡ ಪುರುಷ ಸಿದ್ಧಲಿಂಗ ಮಹಾರಾಜರಿಗೆ ಹರಕೆ ಕಟ್ಟಿಕೊಂಡಿದ್ದರು. ಹೀಗಾಗಿ ರಕ್ಷಣಾ ಸಿಬ್ಬಂದಿಯ ಶ್ಲಾಘನೀಯ ಶ್ರಮದ ಜೊತೆಗೆ ಸಿದ್ದಲಿಂಗ ಮಹಾರಾಜರ ಆಶೀರ್ವಾದವೂ ಸಾತ್ವಿಕ್‌ನಿಗೆ ಲಭಿಸಿದ್ದು, ಇದರಿಂದಲೇ ಕಂದಮ್ಮನಿಗೆ ಪುನರ್ಜನ್ಮ ಸಿಕ್ಕಿದೆ ಎಂಬುದು ಇಲ್ಲಿನ ಬಹುತೇಕ ಗ್ರಾಮಸ್ಥರ ನಂಬಿಕೆಯಾಗಿದೆ.

ಆದ್ದರಿAದಲೇ ಕೊಳವೆಬಾವಿಗೆ ಬಿದ್ದು ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದ ಮಗು ಸಾತ್ವಿಕ್‌ನ ಹೆಸರನ್ನು ಸಿದ್ದಲಿಂಗ ಎಂದು ಆತನ ಪೋಷಕರು ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ. ಕೊಳವೆ ಬಾವಿಯಲ್ಲಿ ಬಿದ್ದಿದ್ದ ತನ್ನ ಮಗುವನ್ನು ಬದುಕಿಸಿಕೊಡುವಂತೆ ದೇವರಲ್ಲಿ ಹರಕೆ ಹೊತ್ತಿದ್ದ ತಾಯಿ ಪೂಜಾ, ಮನೆಯಿಂದ ಮಠದವರೆಗೆ ದೀಡ ನಮಸ್ಕಾರ ಹಾಕಿ, ಮಗುವಿಗೆ ಮರು ನಾಮಕರಣ ಮಾಡುವುದಾಗಿಯೂ ಹೇಳಿಕೊಂಡಿದ್ದರು. ಅದರಂತೆ ಇದೀಗ ಸಾತ್ವಿಕ್ ಮಗುವಿನ ಹೆಸರನ್ನು ಸಿದ್ದಲಿಂಗ ಎಂದು ಬದಲಾಯಿಸಲು ಪೋಷಕರು ನಿರ್ಧರಿಸಿದ್ದಾರೆ.

ಮುಂಬರುವ 28ರಂದು ಪೂಜಾ ತಮ್ಮ ಮನೆಯಿಂದ ಲಚ್ಯಾಣ ಸಿದ್ದಲಿಂಗ ಮಹಾರಾಜರ ಮಠದವರೆಗೆ ದೀಡ ನಮಸ್ಕಾರ ಹಾಕಿ ಮಠದಲ್ಲಿ ತೊಟ್ಟಿಲು ಕಟ್ಟಿ ಸಾತ್ವಿಕ್‌ನಿಗೆ ಸಿದ್ದಲಿಂಗ ಎಂದು ಮರುನಾಮಕರಣ ಮಾಡಲಿದ್ದಾರೆ.

“ಸಿದ್ದಲಿಂಗ ಮಹಾರಾಜರ ಪವಾಡದಿಂದ ನನ್ನ ಮಗ ಬದುಕಿ ಬಂದಿದ್ದಾನೆ. ಹೀಗಾಗಿ ಸಾತ್ವಿಕ್ ಹೆಸರು ಬದಲಿಗೆ ಸಿದ್ದಲಿಂಗ ಎಂಬ ಹೆಸರನ್ನು ನಾಮಕರಣ ಮಾಡುತ್ತೇವೆ. ಅಂತೆಯೇ ರಕ್ಷಣೆ ಮಾಡಿದ ಎಲ್ಲ ಸಿಬ್ಬಂದಿಗೆ ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳುತ್ತೇನೆ,” ಎಂದು ಮಗುವಿನ ತಾಯಿ ಹಾಗೂ ತಂದೆ ಹೇಳಿದ್ದಾರೆ. ಅಲ್ಲದೇ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗೂ ಅವರು ಧನ್ಯವಾದ ತಿಳಿಸಿದ್ದಾರೆ.

ಇನ್ನು, ವಿಜಯಪುರ ಜಿಲ್ಲೆಯ ಇಂಡಿನ ತಾಲ್ಲೂಕಿನ ಲಚ್ಯಾಣ ಗ್ರಾಮದ ಸಿದ್ದಲಿಂಗ ಮಹಾರಾಜರು ಈ ಭಾಗದ ಅಪ್ರತಿಮ ಪವಾಡ ಪುರುಷರಲ್ಲೊಬ್ಬರಾಗಿದ್ದಾರೆ. ಸಿದ್ಧಲಿಂಗ ಮಹಾರಾಜರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲಿ ಎಂಬ ಗ್ರಾಮದಲ್ಲಿ ಲಚ್ಚಪ್ಪ ಹಾಗೂ ನಾಗಮ್ಮ ಎಂಬ ಶರಣ ದಂಪತಿಗಳ ಮಗನಾಗಿ ಜನಿಸಿದರು. ಅಂತರ್ ಜ್ಞಾನಿಗಳಾಗಿದ್ದ ಸಿದ್ದಲಿಂಗ ಮಹಾರಾಜರು 1848 ರಲ್ಲಿ ಜನಿಸಿ, 1927ರಲ್ಲಿ ಲಿಂಗೈಕ್ಯರಾದರು.

ಬಾಲ್ಯದಿAದಲೇ ಹತ್ತು ಹಲವು ಲೀಲೆಗಳ ಮೂಲಕ, ತಮ್ಮ ಪವಾಡ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದ ಸಿದ್ದಲಿಂಗ ಮಹಾರಾಜರು ಇದೇ ಲಚ್ಯಾಣದಲ್ಲಿ ಅಗ್ನಿ ಪ್ರವೇಶ ಮಾಡಿದರು ಎಂಬ ನಂಬಿಕೆಯೂ ಇದೆ. ಈ ಹಿಂದೆ ರುದ್ರಭೂಮಿಯಾಗಿದ್ದ ಲಚ್ಯಾಣದಲ್ಲಿನ ಕಮರಿಮಠದ ಸ್ಥಳವು ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ಪಾದ ಸ್ಪರ್ಶದಿಂದ ಕಾಲಾಂತರದಲ್ಲಿ ಪುಣ್ಯ ಕ್ಷೇತ್ರವಾಗಿ ಬದಲಾಯಿತೆಂದು ಇಲ್ಲಿನ ಭಕ್ತಜನರು ನುಡಿಯುತ್ತಾರೆ. ಇಂತಹ ಪವಾಡ ಪುರುಷ ಸಿದ್ದಲಿಂಗ ಮಹರಾಜರ ಆಶೀರ್ವಾದ ನಮ್ಮ ಮಗನಿಗೆ ಲಭಿಸಿದೆ ಎಂಬುದು ಕೊಳವೆ ಬಾವಿಯಿಂದ ಬದುಕಿ ಬಂದ ಸಾತ್ವಿಕ್ ಪೋಷಕರ ನಂಬಿಕೆಯಾಗಿದೆ.

ಸಾತ್ವಿಕ್‌ನ ತಾಯಿಯಂತೆ ಇಲ್ಲಿನ ಹಲವರು ಸಿದ್ಧಲಿಂಗ ಮಹಾರಾಜರ ಬಳಿ ಕಂದ ಸಾತ್ವಿಕ್‌ನನ್ನು ಬದುಕಿಸಪ್ಪ ಎಂದು ಮೊರೆ ಇಟ್ಟಿದ್ದರು. ಇವರೆಲ್ಲರ ಪ್ರಾರ್ಥನೆಯೂ ಫಲಿಸಿ, ಪುಟ್ಟ ಕಂದ ಸಾತ್ವಿಕ್ ಬದುಕಿ ಬಂದಿಕ್ಕಾಗಿ ಇಡೀ ಗ್ರಾಮಸ್ಥರೆಲ್ಲರೂ ಸಿದ್ದಲಿಂಗ ಮಹರಾಜರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಿದ್ದಲಿಂಗ ಅಜ್ಜನವರ ಕೃಪೆಯಿಂದ ಕಂದನಿಗೆ ಮತ್ತೆ ಬದುಕಿನ ಭರವಸೆ ಸಿಕ್ಕಿದೆ ಅಂತಾ ಸಿದ್ದಲಿಂಗ ಮಹಾರಾಜರಿಗೆ ಜಯಘೋಷ ಹಾಕಿದರು. ಸಿದ್ದಲಿಂಗ ಮಹಾರಾಜರಿಗೆ ದೀರ್ಘದಂಡ ನಮಸ್ಕಾರ ಹಾಕಿ ಸಾತ್ವಿಕ್‌ನ ಆಯುಷ್ಯ ಇನ್ನು ಹೆಚ್ಚಾಗಲಿ ಎಂದು ಗ್ರಾಮಸ್ಥರೆಲ್ಲರೂ ಹಾರೈಸಿದರು.

ಒಟ್ಟಿನಲ್ಲಿ ಇದೆಲ್ಲ ಏನೇ ಇದ್ದರೂ ಸತತ 20 ಗಂಟೆಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಕಂದ ಸಾತ್ವಿಕ್ ಸಾವನ್ನೇ ಗೆದ್ದು ಬಂದಿದ್ದಾನೆ. ರಕ್ಷಣಾ ಸಿಬ್ಬಂದಿಯ ಸತತ ಪರಿಶ್ರಮ, ತಾಯಿ, ತಂದೆ ಹಾಗೂ ಜನರ ಪ್ರಾರ್ಥನೆ ಸಾತ್ವಿಕ್‌ಗೆ ಪುನರ್ಜನ್ಮ ನೀಡಿದೆ.

ಇನ್ನು ವಿಜಯಪುರ ಜಿಲ್ಲೆಯಲ್ಲಿ ಇದೇ ಮೊದಲ ಪ್ರಕರಣವೇನಲ್ಲ. ಇದಕ್ಕೂ ಮೊದಲು ಈ ರೀತಿಯ ಎರಡು ಪ್ರಕರಣಗಳು ಸಂಭವಿಸಿವೆ. 2008ರಲ್ಲಿ ಇದೇ ಇಂಡಿ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಕೊಳವೆ ಬಾವಿಗೆ ಕಾಂಚನಾ ಎಂಬ ಬಾಲಕಿ ಬಿದ್ದಿದ್ದಳು. ಇದು ಕರ್ನಾಟಕದಲ್ಲಿ ಮಗು ಕೊಳವೆ ಬಾವಿಗೆ ಬಿದ್ದ ಎರಡನೇ ಪ್ರಕರಣವಾಗಿತ್ತು. ಕಾಂಚನಾ ಎಂಬ ಬಾಲೆಯನ್ನು ರಕ್ಷಿಸುವುದಕ್ಕೆ ರಕ್ಷಣಾ ತಂಡಗಳು ಬಹಳ ಹೊತ್ತು ಕಾರ್ಯಾಚರಣೆ ನಡೆಸಿದ್ದವು. ಮಗುವನ್ನು ಕೊಳವೆ ಬಾವಿಯಿಂದ ಮೇಲೆತ್ತಲು ಹಿಟಾಚಿ, ಜೆಸಿಬಿ ಬಳಸಿ ನಿರಂತರ ಕಾರ್ಯಾರಣೆ ನಡೆಸಲಾಗಿತ್ತಾದರೂ, ಕಾಂಚನಾಳ ಜೀವ ಮಾತ್ರ ಉಳಿಸಲು ಸಾಧ್ಯವಾಗಿರಲಿಲ್ಲ.

2014ರಲ್ಲಿ ದ್ಯಾಬೇರಿ ಗ್ರಾಮದ ಜಮೀನೊಂದರಲ್ಲಿ ಯಾದಗಿರಿ ಜಿಲ್ಲೆಯಿಂದ ಕೂಲಿಗಾಗಿ ಬಂದಿದ್ದ ಹನುಮಂತ ಪಾಟೀಲ ಅವರ ಮಗಳು ಮೂರು ವರ್ಷದ ಅಕ್ಷತಾ ಆಟವಾಡುತ್ತಾ ಕೊಳವೆ ಬಾವಿಯಲ್ಲಿ ಸಿಲುಕಿದ ಮತ್ತೊಂದು ಪ್ರಕರಣ ನಡೆದಿತ್ತು. ಆಗ ಬಾಲಕಿ ಅಕ್ಷತಾಳ ರಕ್ಷಣೆಗಾಗಿ ಹೈದಾರಾಬಾದ್‌ನಿಂದ ಎನ್‌ಡಿಆರ್‌ಎಫ್ ಬೆಳಗಾವಿಯಿಂದ ಎಸ್‌ಡಿಆರ್‌ಎಫ್ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಆಗಮಿಸಿದ್ದ ರಕ್ಷಣಾ ತಂಡಗಳು ವಾರ ಪೂರ್ತಿ ಕಾರ್ಯಾಚರಣೆ ನಡೆಸಿದ್ದವು. ಕಾರ್ಯಾಚರಣೆ ಸಫಲವಾಯಿತಾದರೂ, ಅಕ್ಷತಾ ಜೀವ ಉಳಿಸುವುದು ಸಾಧ್ಯವಾಗಿರಲಿಲ್ಲ.

ಆದರೆ ಸಾತ್ವಿಕ್‌ನ ವಿಷಯದಲ್ಲಿ ಮಾತ್ರ ಹಾಗಾಗಲಿಲ್ಲ. ರಕ್ಷಣಾ ಸಿಬ್ಬಂದಿಯ ಸತತ ಪರಿಶ್ರಮ, ತಾಯಿ, ತಂದೆ ಹಾಗೂ ಜನರ ಪ್ರಾರ್ಥನೆ ಇದೆಲ್ಲ ಏನೇ ಇದ್ದರೂ ಸತತ 20 ಗಂಟೆಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಕಂದ ಸಾತ್ವಿಕ್ ಸಾವನ್ನೇ ಗೆದ್ದು ಮೃತ್ಯುಂಜಯನಾಗಿ ಹೊರ ಬಂದಿದ್ದಾನೆ. ರಕ್ಷಣಾ ಸಿಬ್ಬಂದಿಯ ಸತತ ಪರಿಶ್ರಮ, ತಾಯಿ, ತಂದೆ ಹಾಗೂ ಜನರ ಪ್ರಾರ್ಥನೆ ಸಾತ್ವಿಕ್‌ಗೆ ಪುನರ್ಜನ್ಮ ನೀಡಿದೆ ಎಂದೇ ಬಣ್ಣಿಸಲಾಗುತ್ತಿದೆ. ಇರಲಿ, ಎಲ್ಲವೂ ಅವರವರ ಭಾವಕ್ಕೆ, ಭಕುತಿಗೆ ಬಿಟ್ಟಿದ್ದು.

ಇನ್ಮುಂದೆಯಾದರೂ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಅಧಿಕಾರಿಗಳು ಹಾಗೂ ಜನರು ಕೂಡ ಕಾಳಜಿ ಹಾಗೂ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಸಿದ್ಧಲಿಂಗನಾಗಲಿರುವ ಸಾವನ್ನೇ ಗೆದ್ದ ಸಾತ್ವಿಕ್‌ನಿಗೆ ಶುಭವಾಗಲಿ.

-ಮಂಜುನಾಥ.ಎಸ್. ಕಟ್ಟಿಮನಿ
ಹವ್ಯಾಸಿ ಪತ್ರರ‍್ತ ಹಾಗೂ ಲೇಖಕ
ವಿಜಯಪುರ

WhatsApp Group Join Now
Telegram Group Join Now
Share This Article