ಪ್ರಜಾತಂತ್ರದ ದೊಡ್ಡ ಹಬ್ಬ ಚುನಾವಣೆ: ಪ್ರಜೆಗಳೇ ಪ್ರಭುಗಳಾಗೋ ಹೊತ್ತು ಬಂದಿದೆ!

Ravi Talawar
WhatsApp Group Join Now
Telegram Group Join Now

ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವುಳ್ಳ ರಾಷ್ಟ್ರ. ವಿನ್ ಸ್ಟನ್ ಚರ್ಚಿಲ್ ಹೇಳಿರುವಂತೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವಂತಹ ಸರ್ಕಾರವನ್ನು ಹೊಂದಿದೆ. ಲೋಕ ತಂತ್ರದ ಹಾಗೂ ಪ್ರಜಾತಂತ್ರದ ದೊಡ್ಡ ಹಬ್ಬ ಎನಿಸಿಕೊಂಡಿದ್ದು ಚುನಾವಣೆ. ಇದೇ ಪ್ರಜೆಗಳು ಪ್ರಭುಗಳಾಗೋ ಹೊತ್ತು ಬಂದಿದೆ.

ನಮ್ಮ ದೇಹದ ಸೌಂದರ್ಯವನ್ನು ನೋಡಿಕೊಳ್ಳಲು ಹೇಗೆ ಕನ್ನಡಿಯನ್ನ ಬಳಸಿಕೊಳ್ಳುತ್ತೇವೆಯೋ ಹಾಗೆ, ಪ್ರಜೆಗಳ ಮನಸ್ಸುಗಳ ಪ್ರತಿಬಿಂಬವನ್ನು ನೋಡುವುದು ಚುನಾವಣೆಯ ಸಂದರ್ಭಗಳಲ್ಲಿ. ನಾವು ನಮ್ಮ ಸಂವಿಧಾನದಲ್ಲಿನ ಹಕ್ಕುಗಳು ಉಲ್ಲಂಘನೆಯಾದಾಗ ಅದನ್ನು ಹೇಗೆ ಪ್ರತಿಭಟಿಸಿ ಪಡೆಯುತ್ತೇವೆಯೋ ಹಾಗೆಯೇ ನಮ್ಮ ಸಂವಿಧಾನದ ಮೂಲಭೂತ ಕರ್ತವ್ಯವಾದ ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಮಹತ್ವದ್ದಾಗಿದೆ. ಉತ್ತಮ ಚಾರಿತ್ರೆ ಉಳ್ಳ ರಾಷ್ಟ್ರದ ಬಗ್ಗೆ ನಿಜವಾಗಿಯೂ ಕಳಕಳಿಯುಳ್ಳ ಸೇವೆಗೆಂದು ಸಿದ್ದರಾಗಿರುವ ವ್ಯಕ್ತಿಯನ್ನು ಹುಡುಕಿ ಆಯ್ಕೆ ಮಾಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ನಮ್ಮ ಹಕ್ಕುಗಳಿಗೆ ಧಕ್ಕೆಯಾದಾಗ ಥಟ್ಟಂತ ಪ್ರಶ್ನಿಸುವ ನಾವು ಕರ್ತವ್ಯ ಅಂತ ಬಂದಾಗ ಹಿಂಜರಿಯ ಸ್ವಭಾವವೇಕೆ? ಮತದಾನದಿಂದ ಹಿಂಜರಿದರೆ ಪ್ರತಿನಿಧಿಗಳನ್ನು ಅಥವಾ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆಯ ಹಕ್ಕನ್ನು ನಾವು ಕಳೆದುಕೊಳ್ಳುತ್ತೇವೆ.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದೆನಿಸಿಕೊಳ್ಳುವ ನಾವು ಮತದಾನದ ಪ್ರಮಾಣ 2019 ರ ಲೋಕಸಭಾ ಚುನಾವಣೆಯಲ್ಲಿ67.40%ರಷ್ಟು ಮಾತ್ರ ಮತದಾನವಾಗಿದೆ. ಉಳಿದ 32.60% ರಷ್ಟು ಜನರು ಯಾರು ಎಂದು ಸಮೀಕ್ಷೆಗಳು ನಡೆಸಿದಾಗ ಅತ್ಯಂತ ಪ್ರಜ್ಞಾವಂತ ಮತದಾರರು ತಿಳುವಳಿಕೆಯುಳ್ಳವರೆ ಮತದಾನವನ್ನು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಯಾಕೆಂದರೆ ಅವರ ಮನಸ್ಸಿನಲ್ಲಿ ಚುನಾವಣೆಯಲ್ಲಿ ಪ್ರತಿನಿಧಿಸುವ ಎಲ್ಲರೂ ಭ್ರಷ್ಟರೇ, ಎಲ್ಲರೂ ಹೊಂದಾಣಿಕೆಯಿಂದ ಇರುವ ಕಳ್ಳರೇ,ಎಲ್ಲರೂ ದೇಶ ಲೂಟಿ ಹೊಡೆಯುವರೆಂದುಕೊಂಡಿದ್ದಾರೆ. ಹೀಗೆ ಬೇರೆ ಬೇರೆ ಕಾರಣಗಳನ್ನು ಹೇಳಿ ಅವರು ಮತದಾನದಿಂದ ದೂರ ಉಳಿಯುತ್ತಿದ್ದಾರೆ. ಆದರೆ ಉಳಿದ 67.40%ರಷ್ಟು ಮತದಾರರು ಅನಕ್ಷರಸ್ಥರು ಹಾಗೂ ಹಳ್ಳಿಯಲ್ಲಿನ ಜನರೇ ಆಗಿದ್ದು ಮತದಾನದಲ್ಲಿ ಪಾಲ್ಗೊಳ್ಳುವುದು ನಿಜಕ್ಕೂ ಖುಷಿ ಕೊಡುವಂಥ ವಿಚಾರವಾಗಿದೆ.

ಆದರೆ ಪ್ರಜ್ಞಾವಂತ ಮತದಾರರು ಮತದಾನದಿಂದ ಹಿಂದೆಸರಿಯುತ್ತಿರುವುದು ಮುಜುಗರ ಪಡುವಂತಹ ವಿಷಯ. ಅವರು ಮತದಾನ ಮಾಡುವ ಅವಶ್ಯಕತೆ ಇದೆ. ಚುನಾವಣೆಯಲ್ಲಿ ಎಲ್ಲರೂ ಭ್ರಷ್ಟರೇ ಹಾಗಂತ ಕೈಕಟ್ಟಿ ಕುಳಿತುಕೊಂಡರೆ,ಮತದಾನದಿಂದ ದೂರ ಉಳಿದರೆ ಸಮಸ್ಯೆ ಬಗೆಹರಿಯುವುದೇ? ನಾವು ಮತದಾನದಲ್ಲಿ ಪಾಲ್ಗೊಂಡು ಅಲ್ಲಿನ ಭ್ರಷ್ಟ ಮನಸ್ಸುಗಳನ್ನು ಸೋಲಿಸುವುದೇ ನಮ್ಮ ಪ್ರತಿಜ್ಞೆ ಆಗಬೇಕು. ಪ್ರಜ್ಞಾವಂತ ಮತದಾರರು NOTA ಬಳಸುವ ಪದ್ಧತಿ ಇತ್ತೀಚಿಗೆ ಹೆಚ್ಚುತ್ತಿದೆ ಮತ್ತು ಅದನ್ನು ಬಳಸುವಂತೆ ಕೆಲವು ಕಾಣದ ಕೈಗಳು ಕೆಲಸ ಮಾಡುತ್ತಿವೆ.

ನಿಜವಾಗಿಯೂ ಅದು ತಪ್ಪು, ಸಂವಿಧಾನಿಕ ವ್ಯವಸ್ಥೆ ನಮಗೆ ನೋಟ ಬಳಸಲಾವಕಾಶ ಕೊಟ್ಟಿರಬಹುದು. ಆದರೆ ನಾವು ಅದನ್ನು ಬಳಸಿದರೆ ಪ್ರಜಾಪ್ರಭುತ್ವಕ್ಕೆ ಕೊಟ್ಟ ಕೊಡಲೇ ಪೆಟ್ಟಾಗುತ್ತದೆ ಅದು ನಮ್ಮ ವ್ಯವಸ್ಥೆಗೆ ಸವಾಲು ಉಂಟಾಗುತ್ತದೆ. ಸ್ಪರ್ಧಿಸಿರುವ ಅವರಲ್ಲಿ ಉತ್ತಮರನ್ನು ಹುಡುಕಿ ಮತದಾನ ಮಾಡಬೇಕಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಯುವಕರನ್ನ ಹೊಂದಿದ ರಾಷ್ಟ್ರ ನಮ್ಮದು ಇಲ್ಲಿನ ಯುವಕರು ಮನಸ್ಸು ಮಾಡಿದರೆ ಇಡೀ ರಾಜಕೀಯ ವ್ಯವಸ್ಥೆಯನ್ನು ಅಲುಗಾಡಿಸುವ ಶಕ್ತಿಯನ್ನು ಹೊಂದಿದ್ದಾರೆ ಆದರೆ ಅವರು ಮತದಾನದಲ್ಲಿ ಪಾಲ್ಗೊಳ್ಳದೆ ಇರುವುದು ಅಥವಾ ಚುನಾವಣೆಯನ್ನು ಅಸಡ್ಯತನ ಅಥವಾ ನಿರ್ಲಕ್ಷ ವಹಿಸುತ್ತಿರುವುದು ನಿಜವಾಗಿಯೂ ದುರಾದೃಷ್ಟಕರವಾದ ಸಂಗತಿ. ಅದನ್ನು ರಜಾ ದಿನ ಎನ್ನುವಂತೆ ಆಚರಿಸಿಕೊಳ್ಳುತ್ತಿದ್ದಾರೆ.

ಇದಕ್ಕೆ ಪೂರಕ ಎನ್ನುವಂತೆ ವಿದೇಶಿಯ ಕಾಣದ ಕೈಗಳು ಸಹ ನಮ್ಮ ಯುವಕ ಯುವತಿಯರ ದಾರಿಯನ್ನು ತಪ್ಪಿಸುತ್ತಿದ್ದಾರೆ. ಭಾರತದ ಯುವಕರು ಜಗತ್ತಿಗೆ ಸಂದೇಶ ಕೊಡಬೇಕು ಯುವಕರಿಂದ ಪ್ರಜಾಪ್ರಭುತ್ವ ಬಲಗೊಳ್ಳಲಿದೆ, ಯುವಕರಿಂದ ರಾಷ್ಟ್ರ ನಿರ್ಮಾಣಗೊಳ್ಳಲಿದೆ, ಭಾರತದ ಯುವಕ ಯುವತಿಯರು ನಮ್ಮ ಸಂಸ್ಕೃತಿಯನ್ನು ನಾವು ಕಾಪಾಡಿಕೊಳ್ಳುತ್ತೇವೆ ಎಂದು ತಿಳಿಸಬೇಕು.

ನಮ್ಮ ಮತವನ್ನು ಯಾವುದೇ ಹಣ ಹೆಂಡಕ್ಕೆ ಮಾರಿಕೊಳ್ಳದೆ ಯಾವುದೇ ಆಮಿಷಗಳಿಗೆ ಒಳಗಾಗದೆ ಉತ್ತಮ ವ್ಯಕ್ತಿತ್ವವುಳ್ಳ ವ್ಯಕ್ತಿಗೆ ಚಲಾಯಿಸುತ್ತೇವೆ, ನಮ್ಮ ಮತ ಭಾರತದ ಸಂಸ್ಕೃತಿಯ ಪರಂಪರೆಯ ಉಳಿವಿಗಾಗಿ, ನಮ್ಮ ಮತ ಭಾರತದ ಪರಂ ವೈಭವ್ಕವಕ್ಕಾಗಿ, ನಮ್ಮ ಮತ ಸಧೃಡ ಸಶಕ್ತ ಭಾರತಕ್ಕಾಗಿ, ನಮ್ಮ ಮತ ಸರ್ವರ ಏಳಿಗೆಗಾಗಿ, ನಮ್ಮ ಮತ ಭಾರತ ವಿಶ್ವಕ್ಕೆ ಮಾದರಿ ಆಗಬೇಕಾಗಿ, ಈ ಮೇಲಿನ ಎಲ್ಲಾ ಧ್ಯೇಯ ಈಡೇರುವುದಕ್ಕಾಗಿ ನಾವು ಮತಚಲಾಯಿಸಬೇಕಾಗಿದೆ. ನಾನಂತೂ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ನೀವು?


•ಕೋಟೆಪ್ಪ ಮರಡಿ
ಯುವ ವಾಗ್ಮಿಗಳು, ಸಾಹಿತಿ, ಹಾಗೂ ಎಲ್ ಎಲ್ ಬಿ(ಕಾನೂನು) ವಿಧ್ಯಾರ್ಥಿ, ಬೆಂಗಳೂರು.

WhatsApp Group Join Now
Telegram Group Join Now
Share This Article