ಮತದಾರರಿಗೆ ಬೆದರಿಕೆ, ಆಮಿಷ ಆರೋಪ: ಡಿ.ಕೆ.ಶಿವಕುಮಾರ್ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್ ತಡೆ

Ravi Talawar
WhatsApp Group Join Now
Telegram Group Join Now

ಬೆಂಗಳೂರು 25: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಬೆದರಿಕೆ ಹಾಕಿದ ಮತ್ತು ಆಮಿಷವೊಡ್ಡಿದ ಆರೋಪದ ಮೇಲೆ ಬೆಂಗಳೂರಿನ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಾಗಿರುವ ಎಫ್‌ಐಆರ್​​ಗೆ ಹೈಕೋರ್ಟ್ ಇಂದು ತಡೆ ನೀಡಿತು.

ತಮ್ಮ ವಿರುದ್ದ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ, ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸೂಚನೆ ನೀಡಿದೆ.

ಇದೇ ಸಂದರ್ಭದಲ್ಲಿ, ಚುನಾವಣೆ ಪ್ರಚಾರದ ಗುಣಮಟ್ಟ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ಚುನಾವಣಾ ಭಾಷಣದ ವೇಳೆ ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದೆ.

ಪ್ರಕರಣದ ಹಿನ್ನೆಲೆ: ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್‌ ನಿವಾಸಿಗಳೊಂದಿಗೆ ಚುನಾವಣಾ ಪ್ರಚಾರ ಸಭೆ ನಡೆಸಿದ್ದ ಡಿ.ಕೆ.ಶಿವಕುಮಾರ್‌, ನಾನು ಬಿಸಿನೆಸ್‌ ಡೀಲ್‌ಗೆ ಬಂದಿದ್ದೇನೆ. ಅಪಾರ್ಟ್‌ಮೆಂಟ್‌ಗೆ ಸಿಎ ನಿವೇಶನ ನೀಡಬೇಕು ಹಾಗೂ ಕಾವೇರಿ ನೀರು ಒದಗಿಸಬೇಕು ಎಂದು ನಿವಾಸಿಗಳು ಬೇಡಿಕೆಯಿಟ್ಟಿದ್ದಾರೆ. ಕಾಂಗ್ರೆಸ್‌ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಗೆ (ಡಿ.ಕೆ.ಸುರೇಶ್‌) ಮತ ನೀಡಿದರೆ, ನಿಮ್ಮ ಬೇಡಿಕೆಯನ್ನು ಎರಡು ಮೂರು ತಿಂಗಳಲ್ಲಿ ಈಡೇರಿಸುತ್ತೇನೆ. ಇಲ್ಲವಾದರೆ ನನ್ನನ್ನು ಏನೂ ಕೇಳಬೇಡಿ ಎಂದು ಹೇಳಿಕೆ ನೀಡಿದ್ದಾರೆಂದು ದೂರಲಾಗಿದೆ.

ಆ ಕುರಿತ ವಿಡಿಯೋ ಬಹಿರಂಗವಾಗಿದ್ದು, ಅದರ ಬೆನ್ನಲ್ಲೇ ಚುನಾವಣಾಧಿಕಾರಿ ದಿನೇಶ್‌ ಕುಮಾರ್‌ ಅವರು ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಏ.19ರಂದು ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು, ಮತದಾರರಿಗೆ ಬೆದರಿಕೆ ಹಾಕಿದ ಮತ್ತು ಆಮಿಷವೊಡ್ಡಿದ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿದ್ದರು.

ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ ಡಿ.ಕೆ.ಶಿವಕುಮಾರ್‌, ಕಾವೇರಿ ನೀರು ಸರಬರಾಜು ಮತ್ತು ಸಿಎ ನಿವೇಶನ ಮಂಜೂರಾತಿಗೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಕೇಳಿದ ಪ್ರಶ್ನೆಗೆ ತಾನು ಉತ್ತರಿಸಿದ್ದೇನೆ. ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿದರೆ, ಅವರು ನಿಮ್ಮ ಬೇಡಿಕೆ ಪರಿಗಣಿಸುತ್ತಾರೆ. ನಿಮ್ಮ ಬೇಡಿಕೆ ಈಡೇರಿಕೆಗೆ ಸಂಸದರ ನಿಧಿಯಿಂದ ಅನುದಾನ ಕೊಡಿಸಿ, ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಾರೆ ಎಂದಷ್ಟೇ ಹೇಳಿದ್ದೇನೆ. ಅದು ಯಾವುದೇ ರೀತಿಯಲ್ಲೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಅಲ್ಲದೆ, ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ/ಮಾಲೀಕರಿಗೆ ತಾನು ಬೆದರಿಕೆ ಹಾಕಿಲ್ಲ, ಆಮಿಷವೊಡ್ಡಿಲ್ಲ. ಕೇವಲ ತನ್ನನ್ನು ಗುರಿಯಾಗಿಸಿಕೊಂಡು ದೂರು ದಾಖಲಿಸಲಾಗಿದೆ. ಅದನ್ನು ಪರಿಶೀಲಿಸದೆ, ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಸೂಚಿಸಿದೆ. ಪ್ರಕರಣ ಸಂಬಂಧ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ನೋಟಿಸ್‌ ನೀಡಿ ವಿವರಣೆ ಕೇಳಿದ್ದರು. ನಾನು ವಿವರಣೆ ನೀಡುವ ಮುನ್ನವೇ ದೂರು ಸಲ್ಲಿಕೆಯಾಗಿ, ಎಫ್‌ಐಆರ್‌ ದಾಖಲಿಸಲಾಗಿದೆ. ಆದ್ದರಿಂದ ಎಫ್‌ಐಆರ್‌ ಹಾಗೂ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶ ರದ್ದುಪಡಿಸಬೇಕು ಎಂದು ಡಿ.ಕೆ.ಶಿವಕುಮಾರ್​ ಕೋರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿ ಕಾನೂನು ಕ್ರಮ ಜರುಗಿಸಲು 2024ರ ಏ.19ರಂದು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಹೊರಡಿಸಿದ ಆದೇಶ ಮತ್ತು ಅದನ್ನು ಆಧರಿಸಿ ಆರ್‌ಎಂಸಿ ಯಾರ್ಡ್‌ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಅವರು ಮನವಿ ಮಾಡಿದ್ದರು.

ಅರ್ಜಿಯಲ್ಲಿ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಮತ್ತು ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಚಾರಿ ವಿಚಕ್ಷಣಾ ತಂಡದ ಮುಖ್ಯಸ್ಥ ಬಿ.ಕೆ. ದಿನೇಶ್‌ ಕುಮಾರ್‌ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

WhatsApp Group Join Now
Telegram Group Join Now
Share This Article