ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ಪ್ರಾರ್ಥನೆ: ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿದ ಸುಪ್ರೀಂಕೋರ್ಟ್

Ravi Talawar
WhatsApp Group Join Now
Telegram Group Join Now

ದೆಹಲಿ ಏಪ್ರಿಲ್ 01: ವಾರಣಾಸಿಯ  ಜ್ಞಾನವಾಪಿ ಮಸೀದಿಯ  ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂ ಪ್ರಾರ್ಥನೆ ನಿಲ್ಲಿಸಲು ಸುಪ್ರೀಂಕೋರ್ಟ್  ಸೋಮವಾರ ನಿರಾಕರಿಸಿದೆ. ಆದರೆ, ಮಸೀದಿ ಆವರಣದೊಳಗೆ ಹಿಂದೂಗಳ ಧಾರ್ಮಿಕ ಆಚರಣೆಗಳ ಮೇಲೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.

“ಜ.17 ಮತ್ತು ಜನವರಿ 31ರ ಆದೇಶದ ನಂತರ ಮುಸ್ಲಿಂ ಸಮುದಾಯದಿಂದ ನಮಾಜ್ ಅಡೆತಡೆಯಿಲ್ಲದೆ ಮತ್ತು ಹಿಂದೂ ಅರ್ಚಕರ ಪೂಜೆಯನ್ನು ತೆಹ್ಖಾನಾ ಪ್ರದೇಶಕ್ಕೆ ಸೀಮಿತಗೊಳಿಸಲಾಗಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಯಥಾಸ್ಥಿತಿ ಕಾಯ್ದುಕೊಳ್ಳುವುದು ಸೂಕ್ತ ಎಂದು ಪೀಠ ಹೇಳಿರುವುದಾಗಿ ಲೈವ್‌ಲಾ ವರದಿ ಮಾಡಿದೆ.

ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂ ಪೂಜೆಗೆ ಅನುಮತಿಯನ್ನು ವಿರೋಧಿಸಿ ಜ್ಞಾನವಾಪಿ ಮಸೀದಿ ಸಮಿತಿಯ ಮನವಿಯನ್ನು ಸುಪ್ರೀಂಕೋರ್ಟ್ ಜುಲೈನಲ್ಲಿ ಅಂತಿಮ ನಿರ್ಧಾರಕ್ಕೆ ನಿಗದಿಪಡಿಸಿದೆ.

ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂ ಪ್ರಾರ್ಥನೆಗೆ ಅವಕಾಶ ನೀಡುವ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿಯ ಹೊಸ ಮನವಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಮಸೀದಿ ಸಮಿತಿಯ ಮನವಿಗೆ ಏಪ್ರಿಲ್ 30 ರೊಳಗೆ ಅರ್ಚಕ ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಅವರ ಪ್ರತಿಕ್ರಿಯೆಯನ್ನು ಕೇಳಿದೆ. ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ವಾರಣಾಸಿಯ ಜ್ಞಾನವಾಪಿ ಮಸೀದಿಯ ವ್ಯವಹಾರಗಳನ್ನು ನಿರ್ವಹಿಸುವ ಮಸೀದಿ ಸಮಿತಿಯ ಮನವಿಯನ್ನು ಆಲಿಸಿತು.

ಫೆಬ್ರುವರಿ 26 ರಂದು ಹೈಕೋರ್ಟ್, ಹಿಂದೂಗಳಿಗೆ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ಜಿಲ್ಲಾ ನ್ಯಾಯಾಲಯದ ಜನವರಿ 31 ರ ಆದೇಶವನ್ನು ಪ್ರಶ್ನಿಸಿ ಸಮಿತಿಯ ಮನವಿಯನ್ನು ವಜಾಗೊಳಿಸಿತ್ತು.

ಮಸೀದಿ ಸಮಿತಿಯ ಮನವಿಯನ್ನು ವಜಾಗೊಳಿಸುವಾಗ, ಜ್ಞಾನವಾಪಿಯ ದಕ್ಷಿಣ ನೆಲಮಾಳಿಗೆಯಲ್ಲಿರುವ ವ್ಯಾಸ್ ತೆಹ್ಖಾನಾದಲ್ಲಿ ಪೂಜಾ ವಿಧಿವಿಧಾನಗಳನ್ನು ನಿಲ್ಲಿಸುವ ಉತ್ತರ ಪ್ರದೇಶ ಸರ್ಕಾರದ 1993 ರ ನಿರ್ಧಾರವು “ಕಾನೂನುಬಾಹಿರ” ಎಂದು ಹೈಕೋರ್ಟ್ ಗಮನಿಸಿತ್ತು.

ಜ್ಞಾನವಾಪಿ ಮಸೀದಿಯ ನಿರ್ಮಾಣಕ್ಕೆ ಮೊದಲು ಹಿಂದೂ ದೇವಾಲಯವಿತ್ತು ಎಂದು ತಿಳಿಸಿರುವ ಭಾರತೀಯ ಪುರಾತತ್ವ ಇಲಾಖೆ ವರದಿಯ ಪ್ರತಿಗಳನ್ನು ದಾವೆದಾರರಿಗೆ ನೀಡಿದ ಆರು ದಿನಗಳ ನಂತರ, ವಾರಣಾಸಿ ಜಿಲ್ಲಾ ನ್ಯಾಯಾಲಯವು ಮಸೀದಿ ಸಂಕೀರ್ಣದ ದಕ್ಷಿಣ ನೆಲಮಾಳಿಗೆಯಲ್ಲಿ ಜನವರಿ 31 ರಂದು ಪೂಜಾರಿಯೊಬ್ಬರಿಗೆ ಪೂಜೆ ಮಾಡಲು ಅವಕಾಶ ನೀಡುವಂತೆ ನಿರ್ದೇಶಿಸಿತು.

WhatsApp Group Join Now
Telegram Group Join Now
Share This Article