ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರ| ಅಖಾಡಕ್ಕೆ ಇನ್ನೂ ಇಳಿಯದ ಸುಮಲತಾ

Ravi Talawar
WhatsApp Group Join Now
Telegram Group Join Now

ಬೆಂಗಳೂರು ಏಪ್ರಿಲ್ 18: ಇತ್ತೀಚೆಗೆ ಬಿಜೆಪಿ ಸೇರಿರುವ ಸಂಸದೆ ಸುಮಲತಾರನ್ನು ‘ಅಮ್ಮಾ’ ಎಂದೇ ಕರೆಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್  ಇದೀಗ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು  ಪರ ಪ್ರಚಾರಕ್ಕೆ ಮುಂದಾಗಿದ್ದು ಕುತೂಹಲ ಸೃಷ್ಟಿಸಿದೆ.

ಈ ಮಧ್ಯೆ, ಮೈತ್ರಿ ಅಭ್ಯರ್ಥಿ ಜೆಡಿಎಸ್ ಪಕ್ಷದ ಹೆಚ್​ಡಿ ಕುಮಾರಸ್ವಾಮಿ ಪರ ಸುಮಲತಾ  ಇನ್ನೂ ಪ್ರಚಾರದ ಅಖಾಡಕ್ಕಿಲ್ಲ. ಬಿಜೆಪಿಯ ರಾಜ್ಯ, ಕೇಂದ್ರ ನಾಯಕರು ಹೇಳಿದರೆ ಕುಮಾರಸ್ವಾಮಿ ಪರ ಪ್ರಚಾರ ಮಾಡುವುದಾಗಿ ಸುಮಲತಾ ಹೇಳಿದ್ದರು. ಆದರೆ ಈವರೆಗೆ ಪ್ರಚಾರ ಮಾಡದೆ ಮೌನವಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರಕ್ಕೆ ಮುಂದಾಗಿದ್ದಾರೆ.

ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಕೊನೆಯ ವರೆಗೂ ಶ್ರಮಿಸಿದ್ದ ಸುಮಲತಾ ಕೊನೆಗೂ ಕಣದಿಂದ ಹಿಂದೆ ಸರಿದಿದ್ದರು. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಬಿಜೆಪಿ ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಜತೆ ಭಾಗವಹಿಸಿ ಮತಯಾಚನೆ ಮಾಡಿದ್ದರು. ಆದರೆ, ಇದೀಗ ಸುಮಲತಾರ ಮಾನಸ ಪುತ್ರ ದರ್ಶನ್ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಬೇಟೆಗೆ ಸಜ್ಜಾಗಿದ್ದಾರೆ.

ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ದರ್ಶನ್ ಪ್ರಚಾರ ನಡೆಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಯಶ್ ಜತೆ ಜೋಡೆತ್ತಿನಂತೆ ನಿಂತಿದ್ದ ದರ್ಶನ್ ಸುಮಲತಾ ಪರ ಬೆವರು ಸುರಿಸಿ ಮಂಡ್ಯದಲ್ಲಿ ಪ್ರಚಾರ ಮಾಡಿದ್ದರು. ಆದರೆ, ಈಗ ಸುಮಲತಾ ಬಿಜೆಪಿಯಲ್ಲಿದ್ದರೂ ದರ್ಶನ್ ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗುತ್ತಿರುವುದು ಸಾಕಷ್ಟು ಅಚ್ಚರಿ ಮತ್ತು ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗಷ್ಟೇ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಖುದ್ದು ಸುಮಲತಾರ ಮನೆಗೆ ಹೋಗಿ ಬೆಂಬಲ ಕೋರಿದ್ದರು. ಇದಾದ ನಂತರ ಸುಮಲತಾ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಪರ ಪ್ರಚಾರ ಮಾಡುವ ನಿರೀಕ್ಷೆ ಇತ್ತು. ಆದರೆ ಅವರು ಮೌನವಾಗಿದ್ದಾರೆ.

ಸುಮಲತಾ ಏನು ಹೇಳಿದರೂ ಮಾಡುತ್ತೇನೆ ಎಂದು ಇತ್ತೀಚೆಗೆ ದರ್ಶನ್ ಹೇಳಿದ್ದರು. ಮಂಡ್ಯದಲ್ಲಿ ನಡೆದ ಸುಮಲತಾ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ್ದ ದರ್ಶನ್, ‘ಸುಮಲತಾ ಏನು ಹೇಳಿದರೂ ಮಾಡುತ್ತೇನೆ. ಅವರು ಬಾವಿಗೆ ಬೀಳು ಅಂದರೂ ಬೀಳುತ್ತೇನೆ’ ಎಂದಿದ್ದರು.

WhatsApp Group Join Now
Telegram Group Join Now
Share This Article