ಇಂಡಿ: ಜ್ಞಾನದ ಹಸಿವು ಎಲ್ಲರಲ್ಲಿರಬೇಕು. ಅಧ್ಯಾತ್ಮಿಕ ಸಂಸ್ಕೃತಿಯೊಂದಿಗೆ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು. ಎಲ್ಲರೂ ತಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು. ನಿತ್ಯ ಯೋಗ,ಧ್ಯಾನ ಮಾಡುತ್ತಾ,ಸಾತ್ವಿಕತೆಯ ಬದುಕನ್ನು ರೂಢಿಸಿಕೊಳ್ಳಬೇಕು ಎಂದು ಅಥರ್ಗಾ ಗುರುದೇವಾಶ್ರಮದ ಈಶಪ್ರಸಾದ ಸ್ವಾಮಿಗಳು ಹೇಳಿದರು.

ರವಿವಾರ ಸಂಜೆ ತಾಲೂಕಿನ ಅಥರ್ಗಾ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲ್ಪಟ್ಟ ನವಗ್ರಹ ಮೂರ್ತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಇಂದಿನ ಮಕ್ಕಳು ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅಧ್ಯಾತ್ಮಿಕ ಪ್ರವಚನಗಳನ್ನು ಆಲಿಸಬೇಕು. ಗುರು ಹಿರಿಯರನ್ನು ಗೌರವಿಸುತ್ತಾ, ಪ್ರೀತಿ, ವಿಶ್ವಾಸ, ಸಹಕಾರದಿಂದಲೇ ಸಮಾಜದ ಒಳಿತಿಗೆ ದುಡಿಯಬೇಕು ಎಂದು ಹೇಳುತ್ತಾ ನವಗ್ರಹ ಪೂಜೆಯ ಮಹತ್ವವನ್ನು ತಿಳಿಸಿದರು.

ನಿವೃತ್ತ ಶಿಕ್ಷಕ ಆರ್ ವ್ಹಿ ಪುರೋಹಿತ ಮಾತನಾಡಿ,
ಯುವಕರೇ ಸಮಾಜದ ನಿಜವಾದ ಸಂಪತ್ತು. ಯುವ ಸಮೂಹಕ್ಕೆ ಸಾಂಸ್ಕೃತಿಕ, ಧಾರ್ಮಿಕ ಚಿಂತನೆಗಳ ಮೌಲ್ಯಗಳು ಅಗತ್ಯ. ಅಧ್ಯಾತ್ಮಿಕ ಶಿಕ್ಷಣವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಆಗಲೇ ಮನುಷ್ಯ ಮನುಷ್ಯನಾಗಿ ಬಾಳಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವು ನಿಂಬಾಳ ಮಾತನಾಡಿ, ದೈವಭಕ್ತಿ ಇರುವ ಕಡೆ ಮನುಷ್ಯ ತನ್ನ ಜೀವನದ ಗುರಿಯನ್ನು ಸಾಧಿಸಬಲ್ಲ. ಪ್ರತಿಯೊಬ್ಬರು ಆಧ್ಯಾತ್ಮಿಕತೆಗಾಗಿ ಸಮಯ ಮೀಸಲಿಡಬೇಕು ಎಂದು ಹೇಳಿದರು.
ಶಿಕ್ಷಕ ಸಿ ಎಸ್ ಮೇತ್ರಿ ಕಾರ್ಯಕ್ರಮ ನಿರ್ವಹಿಸಿದರು.
ರೇವಪ್ಪ ಕನ್ನೂರ, ಬಾಬು ಶಿವಣಗಿ, ಪರಶುರಾಮ ಶಿವಣಗಿ, ಡಾ.ಪರಶುರಾಮ ಕನ್ನೂರ, ಸಿದ್ದಪ್ಪ ಶೇಟಗಾರ, ಸಂತೋಷ ಮೊಸಲಗಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
