This is the title of the web page

ಮೂಡಲಗಿ ಹಳ್ಳದಲ್ಲಿ ಏಳು ಭ್ರೂಣಗಳ ಪತ್ತೆ ! ಬೆಚ್ಚಿ ಬಿದ್ದ ಜನತೆ

ಭ್ರೂಣಗಳ ಸಾಗು ಹಾಕಲು ಚಾಕ್ಲೆಟ್ ಮಾರಲು ಬಳಸುವ ಡಬ್ಬಿಗಳ ಬಳಕೆ....

0 1,037

ಮೂಡಲಗಿ ಜೂ.24 : ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಹಳ್ಳದಲ್ಲಿ ಹತ್ಯೆ ಮಾಡಲಾದ ಏಳು ಭ್ರೂಣಗಳು ಪತ್ತೆಯಾಗಿವೆ, ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂಗೆ, ಬೆಚ್ಚಿ ಬಿದ್ದ ಜನ ನೋಡಲು ಸಾಗರದಂತೆ ಹರಿದು ಬಂದ ಘಟನೆ ಪಟ್ಟಣದಲ್ಲಿ ಶುಕ್ರವಾರ ಮಧ್ಯಾನ್ಹ ಜರುಗಿತು.

ಶುಕ್ರವಾರ ಪಟ್ಟಣದಲ್ಲಿ ವಾರ ಇದ್ದಿದ್ದರಿಂದ ಎಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್ ಇದ್ದವು. ಕೇವಲ ಅಲ್ಪ ಸ್ವಲ್ಪ್ ಜನ ರಸ್ತೆಯ ಮೇಲೆ ಓಡಾಡುತ್ತಿದ್ದರು. ಮಹಿಳೆಯರು ಎಂದಿನಂತೆ ಹಳ್ಳದಲ್ಲಿ ಬಟ್ಟೆ ತೊಳೆಯುವಾಗ, ಹರಿಯುವ ನೀರಿನಲ್ಲಿ ಪ್ಲಾಸ್ಟಿಕ್ ಡಬ್ಬಿಗಳು ತೇಲಿ ಬರುವುದು ಕಂಡು ಬಂದಿವೆ. ಸಮೀಪದ ಹೋಗಿ ನೋಡಿದಾಗ ಚಾಕ್ಲೆಟ್ ಮಾರಾಟ ಮಾಡಲು ಬಳಸುವ ಡಬ್ಬಿಗಳಲ್ಲಿ ಮಗುವಿನ ಆಕಾರದ ಭ್ರೂಣಗಳನ್ನು ಹಾಕಿ ಮುಚ್ಚಳ ಮುಚ್ಚಿದ್ದು ಗೊತ್ತಾಗಿ ಭಯ ಭೀತಗೊಂಡು ನೋಡಲು ಪಟ್ಟಣದಲ್ಲಿ ಜನಸ್ತೋಮ ಸೇರಲು ಕಾರಣವಾಯಿತು.


ಈ ಹೃದಯ ವಿದ್ರಾವಕ ದೃಶ್ಯ ನೋಡಲು ಜನರು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದಂಗೆ, ವಿಷಯ ತಿಳಿದು ಸ್ಥಳಕ್ಕೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭ್ರೂಣಗಳಿದ್ದ ಡಬ್ಬಗಳನ್ನು ವಶಕ್ಕೆ ಪಡೆದು, ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಡಲಾಯಿತು. ಚಾಕ್ಲೆಟ್ ಮಾರಾಟ ಮಾಡಲು ಬಳಸುವ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಏಳು ಭ್ರೂಣಗಳನ್ನು ಹಾಕಿ ಮುಚ್ಚಳ ಮುಚ್ಚಲಾಗಿದೆ.ಈ ಭ್ರೂಣಗಳಲ್ಲಿ ಕೆಲವು ಐದು ತಿಂಗಳು ತುಂಬಿವೆ ಮತ್ತೆ ಕೆಲವು ಏಳು ತಿಂಗಳಾಗಿವೆ. ಮೂಡಲಗಿ ಠಾಣೆಯಲ್ಲಿ ಕೇಸ್ ದಾಖಲಿಸುವ ಪ್ರಕ್ರಿಯೆ ಮುಗಿಸಿದ ನಂತರ ಬೆಳಗಾವಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತರಲಾಗುವುದು.ನಂತರ ಪೂರ್ಣ ವಿವರ ಗೊತ್ತಾಗಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಕೋಣಿ ತಿಳಿಸಿದ್ದಾರೆ.

ಘಟನೆ ಬಗ್ಗೆ ಶಾಸಕರ ಪ್ರತಿಕ್ರೀಯೆ

‘ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಬಳಿಯಲ್ಲಿಯ ಹಳ್ಳಕ್ಕೆ ಹತ್ಯೆ ಮಾಡಿರುವ 7 ಭ್ರೂಣಗಳನ್ನು ಎಸೆದಿರುವ ಸಂಗತಿಯು ನನ್ನ ಗಮನಕ್ಕೆ ಬಂದಿದೆ. ಇದು ಹೀನ ಕೃತ್ಯವಾಗಿದ್ದು, ಸಮಾಜ ತಲೆ ತಗ್ಗಿಸುವಂತ ಸಂಗತಿಯಾಗಿದೆ. ಕಾನೂನುಬಾಹಿರವಾಗಿ ಮಾಡಿರುವ ವ್ಯಕ್ತಿಗಳನ್ನು ಗುರುತಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿರುವೆನು. ಈ ತರಹ ಪುನ: ನಡೆಯದಂತೆ ಆರೋಗ್ಯ ಇಲಾಖೆಯವರು ಕಟ್ಟೆಚ್ಚರವಹಿಸಬೇಕು ಎಂದು ಸೂಚಿಸಿರುವೆನು’
ಬಾಲಚಂದ್ರ ಜಾರಕಿಹೊಳಿ,
ಕೆಎಂಎಫ್ ಅಧ್ಯಕ್ಷರು, ಶಾಸಕರು ಅರಭಾವಿ ಕ್ಷೇತ್ರ

Leave a comment