ಮೂಡಲಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳ ಜಾರಿ ಮಾಡುವಲ್ಲಿ ಕಾಲ ಕಳೆಯುತ್ತಾ ರೈತರ ಹಿತವನ್ನು ಕಡೆಗಣಿಸುತ್ತಿದ್ದು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅರಭಾವಿ ಬಿಜೆಪಿ ಮಂಡಲ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣಾ ದೇವರ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿ ಮಾತನಾಡಿ, ಕಾಂಗ್ರೆಸ್ ರೈತರಿಗೆ ಹಾಗೂ ರೈತ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದು, ಸಿಎಂ ಸಿದ್ದರಾಮಯ್ಯ ರೈತ ವಿರೋಧಿಯಾಗಿದ್ದಾರೆ. ಆದರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ನೇತೃತ್ವದಲ್ಲಿ 500 ಬಿಜೆಪಿ ಕಾರ್ಯಕರ್ತರೊಂದಿಗೆ ಸೆ.5ರಂದು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ಕೆಲ ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮತ್ತು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಮಾತನಾಡಿ, ಮಳೆ ಕೊರತೆಯಾಗಿದ್ದು ಬಿತ್ತಿದ ಬೆಳೆ ಉಳಿಸಿಕೊಳ್ಳಲು ಗ್ರಾಮೀಣ ಭಾಗದ ರೈತರು ಕೆರೆ, ಬಾವಿಗಳಿಂದ ನೀರು ಹಾಯಿಸಬೇಕೆಂದರೆ ಕಳೆದ ಒಂದು ತಿಂಗಳಿಂದ ವಿದ್ಯುತ್ ಕೊರತೆ ಸಾಕಷ್ಟು ಎದುರಾಗಿದೆ. ಇದರಿಂದ ನೀರು ಹಾಯಿಸದಿರುವುದರಿಂದ ಬೆಳೆಗಳು ನಾಶವಾಗುತ್ತಿವೆ. ದಿನಕ್ಕೆ ಕನಿಷ್ಠ 12 ತಾಸು ವಿದ್ಯುತ್ ಪೂರೈಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಪ್ರಕಾಶ ಮಾದರ, ಸುರೇಶ ಸಣ್ಣಕ್ಕಿ ಉಪಸ್ಥಿತರಿದ್ದರು.