ಗಡುವು ಮುಗಿದರೂ ಬಾರದ ಪ್ರಜ್ವಲ್‌ ರೇವಣ್ಣ: ಲೈಂಗಿಕ ದೌರ್ಜನ್ಯ ನಿಜವೆಂದ ಮಹಿಳಾ ಅಧಿಕಾರಿಗಳು!

Ravi Talawar
WhatsApp Group Join Now
Telegram Group Join Now

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು, ಇಬ್ಬರು ಸರಕಾರಿ ಅಧಿಕಾರಿಗಳೂ ಸೇರಿ ಈವರೆಗೆ 9 ಮಂದಿ ಸಂತ್ರಸ್ತೆಯರನ್ನು ಗುರುತಿಸಿ ವಿಚಾರಣೆ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಪ್ರಜ್ವಲ್‌ರ ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ಆಧರಿಸಿ ಸಂತ್ರಸ್ತೆಯರನ್ನು ಪತ್ತೆ ಮಾಡಿ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯರ ಪೈಕಿ ಇಬ್ಬರು ಸರಕಾರಿ ಅಧಿಕಾರಿಗಳು ಸಹ ವಿಚಾರಣೆಗೆ ಹಾಜರಾಗಿ, ಪ್ರಜ್ವಲ್‌ರ ಲೈಂಗಿಕ ದೌರ್ಜನ್ಯದ ಸಂಬಂಧ ಹೇಳಿಕೆ ಕೊಟ್ಟಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ವಿಚಾರಣೆ ವೇಳೆ ಸಂತ್ರಸ್ತೆಯರು ಪ್ರಜ್ವಲ್‌ಗೆ ಹೇಗೆ ಪರಿಚಿತರಾದರು ಎಂಬ ಬಗ್ಗೆ ತಿಳಿಸಿದ್ದಾರೆ. ಸಂತ್ರಸ್ತೆಯರ ಹೇಳಿಕೆ ಮಾತ್ರ ದಾಖಲಿಸಿಕೊಂಡಿದ್ದು, ಯಾವುದೇ ಮರುಪ್ರಶ್ನೆ ಮಾಡಿಲ್ಲ. ಮೂರು ವರ್ಷಗಳ ಅವಧಿಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸಂತ್ರಸ್ತೆಯರು ಹೇಳಿದ್ದಾರೆ. ಸಂತ್ರಸ್ತೆಯರ ಹೇಳಿಕೆ ಆಧರಿಸಿ, ಸ್ಥಳ ಮಹಜರು ನಡೆಸಲು ನಿರ್ಧರಿಸಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಪಕ್ಷದ ಕೆಲ ಕಾರ್ಯಕರ್ತೆಯರು ವೈಯಕ್ತಿಕ ಕೆಲಸ ಕಾರ್ಯಗಳಿಗೆ ಪ್ರಜ್ವಲ್‌ರನ್ನು ಭೇಟಿ ಮಾಡಿದ್ದು, ಅವರ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ. ಕೆಲ ಮಹಿಳೆಯರಿಗೆ ಪ್ರಜ್ವಲ್‌ ಅವರು ಕಾಮಗಾರಿಗಳ ಗುತ್ತಿಗೆ ಕೊಡಿಸುವುದಾಗಿ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿರುವುದು ವಿಚಾರಣೆ ವೇಳೆ ಬಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯರನ್ನು ಸಂಪರ್ಕಿಸಲು ಹಾಗೂ ಅವರ ಹೇಳಿಕೆ ಪಡೆಯಲು ಪ್ರತ್ಯೇಕ ತಂಡ ರಚಿಸಲಾಗಿದೆ. ತಂಡದ ಅಧಿಕಾರಿಗಳು, ಸಂತ್ರಸ್ತೆಯರು ಇರುವ ಸ್ಥಳಗಳಿಗೆ ಹೋಗಿ ಧೈರ್ಯ ತುಂಬಿ ಮನವೊಲಿಸುತ್ತಿದ್ದಾರೆ. ಈಗಾಗಲೇ ದಾಖಲಾಗಿರುವ ಪ್ರಕರಣಗಳ ಜತೆಗೆ ಉಳಿದ ಸಂತ್ರಸ್ತರ ದೂರುಗಳನ್ನು ದಾಖಲಿಸಬೇಕು ಅಥವಾ ಪ್ರತ್ಯೇಕ ದೂರು ದಾಖಲಿಸಬೇಕೆ ಎಂಬ ಬಗ್ಗೆ ಕಾನೂನು ತಜ್ಞರ ಸಲಹೆ ಕೋರಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜ್ವಲ್‌, ನಿಯಮಿತವಾಗಿ ರಾತ್ರಿ ವೇಳೆ ತಮಗೆ ಕರೆ ಮಾಡುತ್ತಿದ್ದರು. ಮಾತನಾಡುವಂತೆ ಪ್ರಚೋದಿಸುತ್ತಿದ್ದರು. ಒಮ್ಮೊಮ್ಮೆ ವಿಡಿಯೋ ಕರೆ ಮಾಡಿ ನಗ್ನರಾಗುವಂತೆ ಪೀಡಿಸುತ್ತಿದ್ದರು. ಅವರು ಹೇಳಿದಂತೆ ನಡೆದುಕೊಂಡೆವು. ಪ್ರಜ್ವಲ್‌, ವರ್ಗಾವಣೆ ಹಾಗೂ ಇಲಾಖೆ ವಿಚಾರ ಮಾತನಾಡುವ ನೆಪದಲ್ಲಿವಕರೆಸಿಕೊಂಡು ಬೆದರಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ತಮ್ಮ ಮೇಲೆ ಅತ್ಯಾಚಾರ ನಡೆದಿರುವುದು ನಿಜ ಎಂದು ಸಂತ್ರಸ್ತ ಮಹಿಳಾ ಅಧಿಕಾರಿಗಳು ಸ್ವ-ಇಚ್ಛಾ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ

ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್‌ ಪದೇ ಪದೆ ವಾಸ್ತವ್ಯ ಬದಲಿಸುತ್ತಿದ್ದು, ಅವರ ಪತ್ತೆಯು ಎಸ್‌ಐಟಿಗೆ ದೊಡ್ಡ ಸವಾಲಾಗಿದೆ. ಎಸ್‌ಐಟಿ ನೋಟಿಸ್‌ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಪ್ರಜ್ವಲ್‌, ಫೇಸ್‌ಬುಕ್‌ ಮೂಲಕ ಏಳು ದಿನಗಳ ಕಾಲ ಕಾಲಾವಕಾಶ ಕೋರಿದ್ದರು. ಈ ಸಂಬಂಧ ಎಸ್‌ಐಟಿ ಅಧಿಕಾರಿಗಳಿಗೆ ಪತ್ರ ಬರೆದಿದ್ದ ಪ್ರಜ್ವಲ್‌ ಪರ ವಕೀಲ ಅರುಣ್‌, ತಮ್ಮ ಕಕ್ಷಿದಾರರು ವಿದೇಶ ಪ್ರವಾಸದಲ್ಲಿದ್ದು, ಏಳು ದಿನಗಳ ಕಾಲಾವಕಾಶ ನೀಡುವಂತೆ ಕೋರಿದ್ದರು. ಆದರೆ, ಈ ಗಡುವು ಮುಗಿದರೂ ಪ್ರಜ್ವಲ್‌ ಎಸ್‌ಐಟಿ ವಿಚಾರಣೆಗೆ ಬಂದಿಲ್ಲ.

WhatsApp Group Join Now
Telegram Group Join Now
Share This Article