ಮಹಿಳೆಯರ ಮಾಂಗಲ್ಯ, ಸಂಪತ್ತಿನ ಮೇಲೆ ಕಾಂಗ್ರೆಸ್​ ಕಣ್ಣು: ಪ್ರಧಾನಿ ಮೋದಿ ಆರೋಪ

Ravi Talawar
WhatsApp Group Join Now
Telegram Group Join Now

ಟಾಂಕ್​ ,23: ಕಾಂಗ್ರೆಸ್​ ಮತ್ತು ಅದರ ಮಿತ್ರಕೂಟವಾದ I.N.D.I.A ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರ ಮಂಗಳಸೂತ್ರ, ಕೂಡಿಟ್ಟ ಹಣ, ಸಂಪತ್ತನ್ನು ಕಿತ್ತುಕೊಂಡು, ಅವರ ಪ್ರೀತಿಪಾತ್ರರಿಗೆ ನೀಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಆಪಾದಿಸಿದ್ದಾರೆ.

ರಾಜಸ್ಥಾನದ ಟಾಂಕ್​ನಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದಿನ ಮಾತನ್ನೇ ಈಗಲೂ ಹೇಳಲು ಬಯಸುತ್ತೇನೆ. ಕಳೆದ ಸಭೆಯಲ್ಲಿ ನಾನಾಡಿದ 90 ಸೆಕೆಂಡುಗಳ ಭಾಷಣವನ್ನು ಕೇಳಿ ಕಾಂಗ್ರೆಸ್​ ಮತ್ತು ಅದರ ಕೂಟಕ್ಕೆ ಭಯ ಹುಟ್ಟಿಸಿದೆ. ಸತ್ಯವನ್ನು ಹೇಳಿದ್ದಕ್ಕೆ ವಿಪಕ್ಷಗಳ ತತ್ತರಿಸಿ ಹೋಗಿವೆ ಎಂದರು.

ಕಾಂಗ್ರೆಸ್​ನ ಸತ್ಯದ ಮನಸ್ಥಿತಿಯನ್ನು ದೇಶದ ಮುಂದೆ ಇಟ್ಟಿದ್ದೇನೆ. ಆಸ್ತಿಯನ್ನು ಕಸಿದುಕೊಂಡು, ಅದನ್ನು ‘ವಿಶೇಷ ಜನರಿಗೆ’ ಹಂಚಲು ಸಂಚು ರೂಪಿಸಿದೆ. ಇದನ್ನು ನಾನು ಮೊನ್ನೆಯ ಭಾಷಣದಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ದೇಶದ ಮುಂದೆ ಕೆಲವು ಸತ್ಯಗಳನ್ನು ಮಂಡಿಸಿದ್ದೆ. ಇದು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ. ಕಾಂಗ್ರೆಸ್​ನ ಮತ ಬ್ಯಾಂಕ್ ಮತ್ತು ತುಷ್ಟೀಕರಣದ ರಾಜಕೀಯವನ್ನು ಬಹಿರಂಗಪಡಿಸಿದ್ದೇನೆ. ಆದರೆ, ವಿಪಕ್ಷಗಳ ಸತ್ಯಕ್ಕೆ ಏಕೆ ಹೆದರುತ್ತಿವೆ ಪ್ರಧಾನಿ ಪ್ರಶ್ನಿಸಿದರು.

2014ರಿಂದ ನನಗೆ ದೇಶದ ಸೇವೆ ಸಲ್ಲಿಸಲು ಅವಕಾಶ ನೀಡಿದ್ದೀರಿ. ಯಾರೂ ಊಹಿಸದಂತಹ ನಿರ್ಧಾರಗಳನ್ನು ದೇಶ ತೆಗೆದುಕೊಂಡಿದೆ. ಆದರೆ, 2014ರ ನಂತರವೂ ದೆಹಲಿಯಲ್ಲಿ ಕಾಂಗ್ರೆಸ್ ಸರಕಾರ ಇದ್ದಿದ್ದರೆ ಇಂದಿನ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಒಮ್ಮೆ ಯೋಚಿಸಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದಿಗೂ ನಮ್ಮ ಸೈನಿಕರ ಮೇಲೆ ಕಲ್ಲು ತೂರಾಟ ನಡೆಯುತ್ತಿತ್ತು. ನಮ್ಮ ಸೈನಿಕರಿಗೆ ಒನ್ ರ್‍ಯಾಂಕ್ ಒನ್ ಪೆನ್ಷನ್ ಜಾರಿಯಾಗುತ್ತಿರಲಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್​ನಿಂದ ಓಲೈಕೆ ರಾಜಕಾರಣ: ಕಾಂಗ್ರೆಸ್​​​​ನ ಚಿಂತನೆಯು ಯಾವಾಗಲೂ ಓಲೈಕೆ ಮತ್ತು ವೋಟ್ ಬ್ಯಾಂಕ್ ರಾಜಕೀಯವಾಗಿದೆ. 2004ರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಆಂಧ್ರಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಕೆಲಸ ಕೈಗೆತ್ತಿಕೊಂಡಿತು. ಇದನ್ನು ಜಾರಿಗೆ ತರಲು ಕಾಂಗ್ರೆಸ್ ಸಂಪೂರ್ಣ ಪ್ರಯತ್ನ ನಡೆಸಿತ್ತು. 2004 ಮತ್ತು 2010 ರ ನಡುವೆ, ನಾಲ್ಕು ಬಾರಿ ಮುಸ್ಲಿಂ ಮೀಸಲಾತಿಯನ್ನು ಜಾರಿಗೆ ತರಲು ಪ್ರಯತ್ನಿಸಿತು. ಆದರೆ, ಕಾನೂನು ತೊಡಕುಗಳು ಮತ್ತು ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆಯಿಂದಾಗಿ ಆ ಯೋಜನೆ ಪೂರ್ಣವಾಗಲಿಲ್ಲ ಎಂದರು.

ಕಾಂಗ್ರೆಸ್​ನ ಈ ಯತ್ನ ಸಂವಿಧಾನಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿತ್ತು. ಬಾಬಾ ಸಾಹೇಬರು ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರಿಗೆ ನೀಡಿದ ಮೀಸಲಾತಿ ಹಕ್ಕನ್ನು ಕಾಂಗ್ರೆಸ್ ಮತ್ತು ಆಗಿನ ಯುಪಿಎ ಕೂಟ ಮುಸ್ಲಿಮರಿಗೆ ನೀಡಲು ಬಯಸಿತ್ತು. ಕಾಂಗ್ರೆಸ್‌ನ ನಡೆಸುವ ಇಂತಹ ಪಿತೂರಿಗಳ ನಡುವೆ ಮೋದಿ ನಿಮಗೊಂದು ಗ್ಯಾರಂಟಿ ನೀಡುತ್ತಿದ್ದಾರೆ. ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಇರುವ ಮೀಸಲಾತಿಯನ್ನು ಎಂದಿಗೂ ಕೊನೆಗೊಳಿಸುವುದಿಲ್ಲ. ಧರ್ಮದ ಹೆಸರಿನಲ್ಲಿ ದೇಶ ವಿಭಜಿಸಲು ಬಿಡುವುದಿಲ್ಲ ಎಂಬುದು ನನ್ನ ಗ್ಯಾರಂಟಿ ಎಂದರು.

WhatsApp Group Join Now
Telegram Group Join Now
Share This Article