‘ಪಿತ್ರಾರ್ಜಿತ ತೆರಿಗೆ’ ವಿವಾದದಿಂದ ಕಾಂಗ್ರೆಸ್‌ ಅಂತರ: ನನ್ನ ಮಾತು ತಿರುಚಿದ್ದು ದುರದೃಷ್ಟಕರ ಎಂದ ಪಿತ್ರೋಡಾ

Ravi Talawar
WhatsApp Group Join Now
Telegram Group Join Now

ನವದೆಹಲಿ,24: ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ನೀಡಿರುವ ‘ಪಿತ್ರಾರ್ಜಿತ ತೆರಿಗೆ’ ಕುರಿತ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ಅಂತರ ಕಾಯ್ದುಕೊಂಡಿದೆ. ಇದೇ ವೇಳೆ, ಪಿತ್ರೋಡಾ ಹೇಳಿಕೆ ಕುರಿತು ಜನರಲ್ಲಿ ಭಾವೋದ್ರೇಕಗೊಳಿಸುವುದು, ಈ ಮೂಲಕ ಗಮನ ಬೇರೆಡೆ ಸೆಳೆಯಲು ಪ್ರಧಾನಿ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ.

ಲೋಕಸಭೆ ಚುನಾವಣೆಯ ಹೊತ್ತಲ್ಲಿ ಸಂಪತ್ತಿನ ಮರುಹಂಚಿಕೆಯ ಬಗ್ಗೆ ಅಮೆರಿಕದಲ್ಲಿ ಈಗಾಗಲೇ ಜಾರಿಯಲ್ಲಿರುವ ಪಿತ್ರಾರ್ಜಿತ ತೆರಿಗೆ ಕಾನೂನಿನ ಬಗ್ಗೆ ಸ್ಯಾಮ್ ಪಿತ್ರೋಡಾ ಉಲ್ಲೇಖಿಸಿದ್ದರು. ಈ ಹೇಳಿಕೆ ಹೊಸ ಚರ್ಚೆಗೆ ಗ್ರಾಸವಾಗಿದೆ. ಇದನ್ನೇ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಅವರಿಂದ ಹಿಡಿದು ಬಿಜೆಪಿ ನಾಯಕರು ಕಾಂಗ್ರೆಸ್​ ಮೇಲೆ ಮುಗಿಬಿದ್ದಿದ್ದಾರೆ.

ಇದರ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್​ ಮಾಡಿ, ಪಿತ್ರೋಡಾ ಹೇಳಿಕೆಯು ಕಾಂಗ್ರೆಸ್​ ಪಕ್ಷದ ನಿಲುವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ‘ಪಿತ್ರೋಡಾ ವಿಶ್ವದಾದ್ಯಂತ ಅನೇಕರಿಗೆ ಮಾರ್ಗದರ್ಶಕರಾಗಿದ್ದಾರೆ. ಭಾರತದ ಅಭಿವೃದ್ಧಿಗೆ ನಿರಂತರ ಕೊಡುಗೆಗಳನ್ನು ಅವರು ನೀಡಿದ್ದಾರೆ. ಪಿತ್ರೋಡಾ ಬಲವಾಗಿ ಭಾವಿಸುವ ವಿಷಯಗಳ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಖಂಡಿತವಾಗಿ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ತನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಚರ್ಚಿಸಲು, ವ್ಯಕ್ತಪಡಿಸಲು ಮತ್ತು ಸಂವಾದ ಮಾಡಲು ಸ್ವಾತಂತ್ರ್ಯವಿದೆ’ ಎಂದು ತಿಳಿಸಿದ್ದಾರೆ.

‘ಪಿತ್ರೋಡಾ ಅಭಿಪ್ರಾಯಗಳು ಯಾವಾಗಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅನ್ನು ಪ್ರತಿಬಿಂಬಿಸುತ್ತವೆ ಎಂದು ಇದರ ಅರ್ಥವಲ್ಲ’ ಎಂದೂ ಅವರು ಹೇಳಿದ್ದಾರೆ.

 ಮತ್ತೊಂದೆಡೆ, ತಮ್ಮ ಹೇಳಿಕೆಯ ಬಗ್ಗೆ ಪಿತ್ರೋಡಾ ಸಹ ಸ್ಪಷ್ಟನೆ ನೀಡಿದ್ದಾರೆ. ”ಅಮೆರಿಕದಲ್ಲಿನ ಪಿತ್ರಾರ್ಜಿತ ತೆರಿಗೆಯ ಬಗ್ಗೆ ಒಬ್ಬ ವ್ಯಕ್ತಿಯಾಗಿ ನಾನು ಹೇಳಿದ್ದನ್ನು ‘ಗೋದಿ’ ಮಾಧ್ಯಮಗಳು ತಿರುಚಿರುವುದು ದುರದೃಷ್ಟಕರ. ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಪ್ರಧಾನಿ ಹರಡುತ್ತಿರುವ ಸುಳ್ಳುಗಳಿಂದ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗಿದೆ. ಮಂಗಲ ಸೂತ್ರ ಮತ್ತು ಚಿನ್ನ ಕಸಿದುಕೊಳ್ಳುವಿಕೆಯ ಕುರಿತಾದ ಮೋದಿ ಹೇಳಿಕೆಗಳು ಅವಾಸ್ತವದಿಂದ ಕೂಡಿವೆ” ಎಂದು ಪೋಸ್ಟ್​ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article