* ಸಣ್ಣ- ಮಧ್ಯಮ ಹಾಗೂ ಸೂಕ್ಷ್ಮ ಕೈಗಾರಿಕೆಗಳ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ
*ಬಿಜೆಪಿ ಸರ್ಕಾರ ಎಸ್ಕಾಂಗಳಿಗೆ 11 ಸಾವಿರ ಕೋಟಿ ಬಾಕಿ ಉಳಿಸಿ ಹೋಗಿದೆ
ಬೆಂಗಳೂರು, ಜೂನ್ 23 : ಸಣ್ಣ-ಮಧ್ಯಮ ಹಾಗೂ ಸೂಕ್ಷ್ಮ ಕೈಗಾರಿಕೆಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂಧನ, ಕೈಗಾರಿಕೆ ಹಾಗೂ ಕಾಸಿಯಾ ಜೊತೆಗೆ ಪ್ರತ್ಯೇಕವಾಗಿ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ ಅವರ ನೇತೃತ್ವದ ನಿಯೋಗದ ಜತೆಗೆ ಚರ್ಚಿಸಿದ ಬಳಿಕ ಈ ವಿಷಯ ತಿಳಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಕೆ.ಇ. ಆರ್.ಸಿ ವಿದ್ಯುತ್ ಬೆಲೆ ಏರಿಸಿದೆ. ರಾಜಕೀಯ ಉದ್ದೇಶಕ್ಕೆ ಬಿಜೆಪಿ ತನ್ನ ತಪ್ಪನ್ನು ನಮ್ಮ ಸರ್ಕಾರದ ಮೇಲೆ ಹೇರುತ್ತಿದೆ ಎನ್ನುವ ಸತ್ಯ ನಿಮಗೂ ಗೊತ್ತಿದೆ ಎಂದು ಮುಖ್ಯ ಮಂತ್ರಿ ಗಳು ಸ್ಪಷ್ಟಪಡಿಸಿದರು.
ಹಿಂದಿನ ಸರ್ಕಾರ 11000 ಕೋಟಿ ರೂ.ಗಳ ಮೊತ್ತವನ್ನು ಎಸ್ಕಾಂ ಗಳಿಗೆ ಬಾಕಿ ಉಳಿಸಿದೆ. ಅವರು ಉಳಿಸಿ ಹೋದ ಹೊರೆಯನ್ನು ನಾವು ಭರಿಸಬೇಕಿದೆ. ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತಿನಿಂದ ಆಗಿರುವ ಅನಾಹುತಗಳನ್ನು ನಾವು ಸರಿಪಡಿಸಬೇಕಿದೆ ಎಂದು ಹೇಳಿದರು.
ವಿದ್ಯುತ್ ದರ ಏರಿಸಿದ ಕೆ.ಇ.ಆರ್.ಸಿ ಶಿಫಾರಸ್ಸನ್ನು ಮರುಪರಿಶೀಲಿಸುವಂತೆ ಮನವಿ ಮಾಡಲು ನಿಮಗೆ ಅವಕಾಶ ಇದೆ. ನೀವೊಮ್ಮೆ ನಿಮಗಾಗುತ್ತಿರುವ ಸಮಸ್ಯೆಗಳ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಬಹುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ನಿಯೋಗಕ್ಕೆ ಸೂಚಿಸಿದರು.
ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ , ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.