ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ

Ravi Talawar
WhatsApp Group Join Now
Telegram Group Join Now

ಬೆಂಗಳೂರು,ಏಪ್ರಿಲ್ 17:  ಕೊಪ್ಪಳ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಆಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು.

ಕೊಪ್ಪಳ ಬಿಜೆಪಿ ಟಿಕೆಟ್ ವಂಚಿತ ಹಾಲಿ ಸಂಸದ ಕರಡಿ ಸಂಗಣ್ಣ ನಿನ್ನೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ದಾಸರಹಳ್ಳಿ ಕೃಷ್ಣಮೂರ್ತಿ, ನಿವೃತ್ತ ಐಎಎಸ್ ಅಧಿಕಾರಿ ಎ.ಎಸ್. ಪುಟ್ಟಸ್ವಾಮಿ, ಪತ್ರಕರ್ತೆ ಸ್ವಾತಿ ಚಂದ್ರಶೇಖರ್ ಮತ್ತಿತರರು ಕೂಡ ಕಾಂಗ್ರೆಸ್ ಸೇರಿದರು. ಈ ವೇಳೆ ಸಚಿವ ಶಿವರಾಜ್ ತಂಗಡಗಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಉಪಸ್ಥಿತರಿದ್ದರು.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಕರಡಿ ಸಂಗಣ್ಣ, ”ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಲು ಮೂಲ ಕಾರಣ ಲಕ್ಷ್ಮಣ ಸವದಿ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಸೇರ್ಪಡೆ ಆಗಿದ್ದೇನೆ. ರಾಜಶೇಖರ್ ಹಿಟ್ನಾಳ್​ ಅವರನ್ನು ಗೆಲ್ಲಿಸುತ್ತೇವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ನಿಜವಾಗಿಯೂ ಇದು ಸಂಭ್ರಮದ ದಿನ” ಎಂದರು.

”14 ವರ್ಷಗಳ ಹಿಂದೆ ಲಕ್ಷ್ಮಣ್ ಸವದಿಯವರು ಹೋರಾಟ ಮಾಡುತ್ತಿದ್ದಾಗ ನಿನಗೆ ಅಭಿವೃದ್ಧಿ ಬೇಕಾ ಹೋರಾಟ ಬೇಕಾ ಅಂದ್ರು. ಆಗ ನಾನು ಬಿಜೆಪಿ ಪಕ್ಷ ಸೇರ್ಪಡೆಯಾದೆ. ಇದು ಕಾಕತಾಳೀಯ, ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಕೊಪ್ಪಳದಲ್ಲಿ ನಮ್ಮ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ್ ಗೆಲ್ಲಿಸಿಕೊಂಡು ಬರಬೇಕು ಎಂದು ನಾವೆಲ್ಲರೂ ಚಾಲೆಂಜ್ ತೆಗೆದುಕೊಂಡಿದ್ದೇವೆ. ವ್ಯಕ್ತಿಗತ ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ. ಎರಡು ಜಿಲ್ಲೆಯ ಅಭಿವೃದ್ಧಿಗೆ ಸಿಎಂ, ಡಿಸಿಎಂ ಬೆಂಬಲ ನೀಡುತ್ತಾರೆ ಅಂತ ನಂಬಿದ್ದೇನೆ. ತಾಗ್ಯ,ಬಲಿದಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಹೀಗಾಗಿ, ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ” ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ”ಬಿಜೆಪಿಯಲ್ಲಿ ಎರಡು ಬಣವಿದೆ. ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ಎಲ್‌. ಸಂತೋಷ್ ಬಣ. ಆದರೆ ಬಿ.ಎಸ್. ಯಡಿಯೂರಪ್ಪ ಅವರು ಒಪ್ಪದವರಿಗೆ ಲೋಕಸಭೆ ಟಿಕೆಟ್ ತಪ್ಪಿಸಲಾಗಿದೆ” ಎಂದು ಹೇಳಿದರು.

WhatsApp Group Join Now
Telegram Group Join Now
Share This Article