ಬೆಳಗಾವಿ: ನಗರದ ಎಂಎಸ್ ಪಿಸಿ (ಮಹಿಳಾ ಸಪ್ಲಿಮೆಂಟರಿ ಪ್ರೊಡಕ್ಷನ್ ಸೆಂಟರ್) ಕೇಂದ್ರಕ್ಕೆ ಗುರುವಾರ ದಿ. 22ರಂದು ಹಠಾತ್ ಭೇಟಿ ನೀಡಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಅಲ್ಲಿನ ಕಳಪೆ ಆಹಾರ ಮತ್ತು ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಅಂಗನವಾಡಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡುವ ನಗರದ ಹಲಗಾದಲ್ಲಿರುವ ಎಂಎಸ್ ಪಿಸಿ ಕೇಂದ್ರಕ್ಕೆ ಸಚಿವೆ ಹೆಬ್ಬಾಳಕರ್ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಆಹಾರ ಸಂಗ್ರಹಿಸಿರುವುದು ಮತ್ತು ಅಲ್ಲಿನ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನಗೊಂಡರು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಅಂಗನವಾಡಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡುವ ಮೂಲಕ ಉದ್ದೇಶಕ್ಕೆ ಇಲ್ಲಿನ ವ್ಯವಸ್ಥೆ ವಿರುದ್ಧವಾಗಿದೆ. ನಾನು ಈ ಇಲಾಖೆಯ ಸಚಿವೆಯಾಗಿ ಈ ವ್ಯವಸ್ಥೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ರಾಜ್ಯದ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಠಿಕ ಆಹಾರ ಸಿಗಬೇಕು ಎಂಬುದು ಯೋಜನೆಯ ಮೂಲ ಉದ್ದೇಶ, ಅದು ಸಫಲವಾಗಬೇಕು. ಯಾರದ್ದೋ ನಿರ್ಲಕ್ಷ್ಯದಿಂದ ಇಡೀ ಯೋಜನೆ ವಿಫಲವಾಗಬಾರದು ಮತ್ತು ಫಲಾನುಭವಿಗಳಿಗೆ ಅನ್ಯಾಯ ಆಗಬಾರದು. ಹಾಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಎಲ್ಲ ಎಂಎಸ್ ಪಿಸಿ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸುತ್ತೇನೆ ನಡೆಸುತ್ತೇವೆ. ಎಲ್ಲೆಲ್ಲಿ ಅವ್ಯವಸ್ಥೆ ಉಂಟಾಗಿದೆ, ಅದಕ್ಕೆ ಕಾರಣ ತಿಳಿದು ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರಲು ಕ್ರಮ ಕೈಗೊಳ್ಳುತ್ತೇನೆ. ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.