ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂಸ್ಕೃತಿ ನಮ್ಮದು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ 

Ravi Talawar
WhatsApp Group Join Now
Telegram Group Join Now
ಬೆಳಗಾವಿ,ಏಪ್ರಿಲ್ 12: 20 ವರ್ಷ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿ ಸಂಸದರು ಕೇಂದ್ರ ಸರಕಾರದಿಂದ ಎಷ್ಟು ಕೆಲಸ ತಂದಿದ್ದಾರೆ? ಕ್ಷೇತ್ರದ ಯಾವ ಯಾವ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದ್ದಾರೆ.
ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಗುರುವಾರ ಸಂಜೆ ಲೋಕಸಭಾ ಚುನಾವಣೆ ಪ್ರಚಾರ ನಡೆಸಿದ ಅವರು, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 10 ತಿಂಗಳಲ್ಲಿ ಸಾವಿರ ಕೋಟಿ ರೂ. ಕೆಲಸಗಳಾಗಿವೆ. ಅಲ್ಲಿ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರನ್ನು ಆಯ್ಕೆ ಮಾಡಿದಲ್ಲಿ ಗ್ರಾಮೀಣ ಕ್ಷೇತ್ರದ ಮಾದರಿಯಲ್ಲೇ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಾಗುವುದು ಎಂದು ತಿಳಿಸಿದರು.
2014ರಲ್ಲಿ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದೆ. ಈಗ ನನ್ನ ಮಗ ಇಲ್ಲಿ ಸ್ಪರ್ಧಿಸುತ್ತಿದ್ದಾನೆ. ಈ ಬಾರಿ ಪ್ರಚಾರಾರ್ಥ ಎಲ್ಲೇ ಹೋದರೂ ಜನರು ಅತ್ಯಂತ ಪ್ರೀತಿ ತೋರಿಸುತ್ತಿದ್ದಾರೆ. ಯುವಕನಾಗಿರುವ, ಇದೇ ಕ್ಷೇತ್ರದ ಮಗನನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಬದ್ದತೆ ಹೊಂದಿರುವ ಪಕ್ಷ. ಎಲ್ಲರನ್ನೂ ಸಮಾನವಾಗಿ ನೋಡುವ ಪಕ್ಷ ಕಾಂಗ್ರೆಸ್. ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಯಾರನ್ನೂ ದ್ವೇಷದಿಂದ ನೋಡುವ ಸಂಸ್ಕೃತಿ ನಮ್ಮದಲ್ಲ. ಯಾರಿಗೂ ಕಷ್ಟಕೊಡುವವರು ನಾವಲ್ಲ, ಕಷ್ಟದಲ್ಲಿದ್ದವರನ್ನು ಪಾರು ಮಾಡುವ ಸಂಸ್ಕೃತಿ ನಮ್ಮದು ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಮಾತನಾಡಿ, ಈ ಚುನಾವಣೆ ಸ್ವಾಭಿಮಾನದ ಚುನಾವಣೆ. ಏನೇ ಹೇಳಿದರೂ ಹೊರಗಿನವರಿಗೆ ನಮ್ಮ ಊರಿನ ಮೇಲೆ ಪ್ರೀತಿ ಬರಲು ಸಾಧ್ಯವೇ ಇಲ್ಲ. ಇಲ್ಲಿಯ ಸಮಸ್ಯೆಗಳೂ ಅವರಿಗೆ ಗೊತ್ತಿರುವುದಿಲ್ಲ. ಅಲ್ಲೇ ಏನೂ ಕೆಲಸ ಮಾಡದವರು ಇಲ್ಲಿ ಬಂದು ಏನು ಕೆಲಸ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.
 ಬೆಳಗಾವಿ ದಕ್ಷಿಣ ಕ್ಷೇತ್ರ ಸೇರಿದಂತೆ ನಾನು ಇಡೀ ಕ್ಷೇತ್ರದಲ್ಲಿ ಕಳೆದ 10 ವರ್ಷದಿಂದ ಓಡಾಡುತ್ತಿದ್ದೇನೆ. ಸ್ಥಳೀಯನಾಗಿದ್ದರಿಂದ ಇಲ್ಲಿನ ಜನರು ನನಗೆ ಚಿರಪರಿಚಿತರು. ಕ್ಷೇತ್ರದ ಸಮಸ್ಯೆ ಮತ್ತು ಅಭಿವೃದ್ಧಿ ಕುರಿತು ನನಗೆ ಸ್ಪಷ್ಟವಾದ ಕಲ್ಪನೆ ಇದೆ. ಹಾಗಾಗಿ ನನ್ನನ್ನು ಆಯ್ಕೆ ಮಾಡಿದಲ್ಲಿ ಮುಂದಿನ 5 ವರ್ಷ ಅವಿಶ್ರಾಂತವಾಗಿ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದರು.
WhatsApp Group Join Now
Telegram Group Join Now
Share This Article