ಮಹಿಳಾ ಕೋಟಾದಲ್ಲಿ ಸಚಿವೆಯಾಗಿರುವೆ, ಯಾರಿಂದಲೂ ಕಸಿದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Ravi Talawar
WhatsApp Group Join Now
Telegram Group Join Now
ಬೆಳಗಾವಿ,.01:  ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾದ ನಾನು ಮಹಿಳಾ ಕೋಟಾದಿಂದ ಸಚಿವೆಯಾಗಿರುವೆ ಹೊರತು, ಯಾರಿಂದಲೂ ಕಸಿದುಕೊಂಡಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಯಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ  ಪ್ರಚಾರ ಮಾಡುವ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.
ಕಾಂಗ್ರೆಸ್‌ನಲ್ಲಿ ಹಿರಿಯರಿದ್ದರೂ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಸಚಿವ ಸ್ಥಾನವನ್ನು ಕಸಿದುಕೊಂಡಿದ್ದಾರೆ ಎಂಬ ಸಂಸದೆ ಮಂಗಳಾ ಅಂಗಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಚಿವ ಸಂಪುಟ ರಚಿಸುವಾಗ ಮಹಿಳಾ ಕೋಟಾದಲ್ಲಿ ಅಂತ ಇರುತ್ತೆ. ಹಿಂದಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ರೂಪಾ ಶಶಿಧರ್ ಹಾಗೂ ನಾನು ಎರಡನೇ ಬಾರಿಗೆ ಆಯ್ಕೆಯಾದ ಶಾಸಕಿಯರು. ರೂಪಾ ತಂದೆ ಮುನಿಯಪ್ಪನವರು ಸಚಿವರಾದ ಕಾರಣ, ನನಗೆ ಮಹಿಳಾ ಕೋಟಾದಡಿ ಸಚಿವೆಯಾಗುವ ಅದೃಷ್ಟ ಒಲಿಯಿತು. ಆದರೆ ಮಂಗಲಾ ಅಂಗಡಿಗೆ ಇಂಥ ಸೂಕ್ಷ್ಮವಾದ ವಿಚಾರಗಳು ತಿಳಿದಿಲ್ಲ. ಏಕೆಂದರೆ ಅವರು ತುಂಬಾ ಮುಗ್ದರು, ಯಾರೋ ಬರೆದುಕೊಟ್ಟ ಹೇಳಿಕೆಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದರು.
ಮಂಗಳಾ ಅಂಗಡಿ ಅವರು ವಯಸ್ಸಿನಲ್ಲಿ ನನಗಿಂತ ದೊಡ್ಡವರಾದರೂ ರಾಜಕೀಯ ಅನುಭವ ಕಡಿಮೆ. ಉಪಚುನಾವಣೆಯಲ್ಲಿ ಕೆಲವೇ ಮತಗಳಿಂದ ಗೆದ್ದು ಬಂದವರು. ಅವರ ಬಗ್ಗೆ ನನಗೆ ಮರುಕವಿದೆ ಎಂದು ಸಚಿವರು ಹೇಳಿದರು. ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ಬಗ್ಗೆ ಮಾತನಾಡುವ ನರೇಂದ್ರ ಮೋದಿ, ಹಾಲಿ ಸಂಸದರಾಗಿದ್ದರೂ ಸುಮಲತಾ ಮತ್ತು ಮಂಗಳಾ ಅಂಗಡಿ ಅವರಿಗೆ ಏಕೆ ಟಿಕೆಟ್ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಕಳೆದ ಬಾರಿ ನಾವು ಪಂಚಮಸಾಲಿ ಸಮುದಾಯವನ್ನು 2ಎ ಕ್ಯಾಟಗೆರಿಗೆ ಸೇರಿಸಬೇಕು ಎಂದು ಹೋರಾಟ ಮಾಡಿದಾಗ, ಇದೇ ಜಗದೀಶ್ ಶೆಟ್ಟರ್ ಸಚಿವ  ಸಂಪುಟ ಸಭೆಯಲ್ಲಿ ಪಂಚಸಾಲಿ ಸಮುದಾಯಕ್ಕೆ 2ಎ ಕ್ಯಾಟಗೆರಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದರು.
ಗೋಕಾಕ್, ಅರಭಾವಿಯಲ್ಲಿ ಮುನ್ನಡೆ ಗಳಿಸುವ ವಿಶ್ವಾಸ: ಬೆಳಗಾವಿ ಲೋಕಸಭಾ ವ್ಯಾಪ್ತಿಯ ಗೋಕಾಕ್ ಹಾಗೂ ಅರಭಾವಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೂ ಕಾಂಗ್ರೆಸ್ ಅಭ್ಯರ್ಥಿಗೆ ಉತ್ತಮ ಸ್ಪಂದನೆ  ವ್ಯಕ್ತವಾಗುತ್ತಿದೆ. ಈ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ ಸಿಗುವ ವಿಶ್ವಾಸವಿದೆ. ಅತ್ಯಂತ ಅಚ್ಛರಿಯ ಫಲಿತಾಂಶ ಈ ಕ್ಷೇತ್ರಗಳಲ್ಲಿ ಬರಲಿದೆ ಎಂದರು.
ಬೆಳಗಾವಿ ಧ್ವನಿಯಾಗಿ ಮೃಣಾಲ್ ಕೆಲಸ ಮಾಡುತ್ತಾನೆ:  10 ವರ್ಷಗಳಿಂದ ಈ ಭಾಗದ ಸಂಸದರು ಮೋದಿ ಹೆಸರು ಹೇಳಿಕೊಂಡು ಗೆದ್ದಿದ್ದಾಯ್ತು. 20 ವರ್ಷಗಳಿಂದ ಒಬ್ಬರೇ ಸಂಸದರು (ದಿವಂಗತ ಸುರೇಶ್ ಅಂಗಡಿ) ಇದ್ದರೂ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳೇನು ಎಂದು ಪ್ರಶ್ನಿಸಿದ ಸಚಿವರು, ಬೆಳಗಾವಿ ಇತಿಹಾಸದಲ್ಲೆ ಅತಿದೊಡ್ಡ ಪ್ರವಾಹ ಉಂಟಾಯಿತು. ಅಂತ ವೇಳೆ ಮೋದಿ ಅವರ ಹತ್ತಿರ ಪ್ರವಾಹದ ಬಗ್ಗೆ ಚರ್ಚೆ ನಡೆಸಿದ್ರ? ಮೋದಿ ಹೆಸರು ಹೇಳಿಕೊಂಡು ವೋಟ್ ತೆಗೆದುಕೊಳ್ಳಲಿ ಬೇಡ ಅನ್ನಲ್ಲ, ಆದರೆ, ಜನರ ಸಂಕಷ್ಟಕ್ಕೆ ಸ್ಪಂದಿಸದ ಕಿವುಡರಾಗಿ, ಮೂಕರಾಗಿರುವ ಸಂಸದರು ನಮಗೆ ಬೇಕಾ? ಸ್ಥಳೀಯ ಸಮಸ್ಯೆಗೆಳಿಗೆ ಸ್ಪಂದಿಸುವ ವ್ಯಕ್ತಿ ಬೇಕು ಅಂತ ಜನ ಅಪೇಕ್ಷೆ ಪಡುತ್ತಾ ಇದ್ದಾರೆ ಎಂದು ಹೇಳಿದರು.
ಶೆಟ್ಟರ್‌ಗೆ ಬೆಳಗಾವಿ ಹೇಗೆ ಕರ್ಮಭೂಮಿ ಆಗುತ್ತೆ? 6 ಬಾರಿ ಹುಬ್ಬಳ್ಳಿಯಲ್ಲಿ ಗೆದ್ದು, ಇಲ್ಲಿ ಬಂದು ಬೆಳಗಾವಿ ನನ್ನ ಕರ್ಮಭೂಮಿ ಎಂದು ಹೇಳಿದರೆ ಯಾರು ನಂಬುತ್ತಾರೆ. ಮೊದಲು ಶೆಟ್ಟರ್ ಗೆ ತಮ್ಮ ಮನೆ ವಿಳಾಸ ಗೊತ್ತಿದ್ದೆಯೇ ಎಂದು ಪ್ರಶ್ನಿಸಿದರು.   ಮಂಗಳಾ ಅಂಗಡಿ ಅವರು ಪಕ್ಷ ಮೊದಲು, ಕುಟುಂಬ ಆಮೇಲೆ ಅಂತ ಹೇಳ್ತಾ ಇದ್ದಾರೆ. ಹಾಗಾದರೆ ಬೀಗರಿಗೆ ಏಕೆ ಟಿಕೆಟ್ ಕೊಡಿಸಿದರು? ಬೀಗರ ಕುಟುಂಬ ಬಿಟ್ಟು ಬೆಳಗಾವಿಯಲ್ಲಿ ಸ್ಪರ್ಧಿಸಲು ಬಿಜೆಪಿಯಲ್ಲಿ ಯಾರೂ ಇರಲಿಲ್ಲವೇ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು.
WhatsApp Group Join Now
Telegram Group Join Now
Share This Article