This is the title of the web page

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ: ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸಲು ಬೊಮ್ಮಾಯಿ ಸೂಚನೆ

0 91

ಬೆಂಗಳೂರು, ಜುಲೈ 7- ಬೆಳಗಾವಿ ಜಿಲ್ಲೆಯ ಸೈನಿಕ ಶಾಲೆಯ ಕಾಮಗಾರಿಯು ಆಗಸ್ಟ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ಈ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ರಕ್ಷಣಾ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 2022-23ನೇ ಸಾಲಿಗೆ 6 ನೇ ತರಗತಿಯಿಂದ ಶಾಲೆಯನ್ನು ಪ್ರಾರಂಭಿಸಲು ಅನುಮತಿ ದೊರೆತಿದ್ದು, ಪ್ರಸ್ತುತ 82 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿಸಲಾಗಿದೆ. ಸೆಪ್ಟೆಂಬರ್ ನಲ್ಲಿ ಶಾಲೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಈ ವಸತಿ ಶಾಲೆಗೆ ಹುದ್ದೆಗಳ ಸೃಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಪ್ರಸ್ತುತ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಬ್ಬಂದಿಯನ್ನು ನಿಯೋಜನೆ ಮೇರೆಗೆ ನೇಮಕ ಮಾಡಲಾಗಿದೆ. ವೃಂದ ಮತ್ತು ನೇಮಕಾತಿ ನಿಯಮಗಳನ್ನೂ ಸಿದ್ಧಪಡಿಸಲಾಗಿದ್ದು, ಇದಕ್ಕೆ ಸರ್ಕಾರದ ಅನುಮೋದನೆ ದೊರಕಿದ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು.

ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಶಾಸಕರು, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ.ಎನ್. ಮಂಜುಳಾ, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ಹಿಂದುಳಿದ ವರ್ಗಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್ ಮತ್ತು ಇತರರು ಭಾಗವಹಿಸಿದ್ದರು.

You might also like
Leave a comment