ಕೆಪಿಎಸ್‌ಸಿ ಕರ್ಮಕಾಂಡ: ನೇಮಕಾತಿ ಆಯ್ಕೆ ಪಟ್ಟಿಯೇ ನಾಪತ್ತೆ

Hasiru Kranti
WhatsApp Group Join Now
Telegram Group Join Now

ಬೆಂಗಳೂರು, ಮಾ., ೩೦: ಒಂದಿಲ್ಲಾ ಒಂದು ವಿವಾದಗಳಿಂದ ಸುದ್ದಿಯಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಈಗ ನೇಮಕಾತಿ ಆಯ್ಕೆ ಪಟ್ಟಿಯ ಗೌಪ್ಯ ಕಡತವೇ ನಾಪತ್ತೆಯಾಗಿದ್ದು ವರದಿಯಾಗಿದೆ.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಕಿರಿಯ ಎಂಜಿನಿಯರ್‌ಗಳ ಆಯ್ಕೆ ಪಟ್ಟಿ ಒಳಗೊಂಡ ಗೌಪ್ಯ ಕಡತ ನಾಪತ್ತೆಯಾಗಿದ್ದು ಕೆಪಿಎಸ್‌ಸಿ ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯಕ್ಷಮತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

೨೦೧೬ ರಲ್ಲಿ ಕೊಳಗೇರಿ ಮಂಡಳಿ ಕಿರಿಯ ಇಂಜಿನಿಯರ್ ನೇಮಕಾತಿ ಪರೀಕ್ಷೆ ನಡೆದಿತ್ತು. ೨೦೧೮ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಚ್.ಡಿ. ವಿವೇಕಾನಂದ ಅವರು ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ್ದ ಹೈಕೋರ್ಟ್ ಅರ್ಜಿದಾರರ ಪ್ರಕರಣವನ್ನು ಪರಿಗಣಿಸುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿತ್ತು ನಂತರ ಕರ್ನಾಟಕ ಹೈಕೋರ್ಟ್ ನಿರ್ದೇಶನ ಪ್ರಕಾರ ಕೆಪಿಎಸ್‌ಸಿ ಗೌಪ್ಯ ಶಾಖೆ-೩ ರಲ್ಲಿ ಆಯ್ಕೆ ಪಟ್ಟಿ ಕಡತವನ್ನು ಸಿದ್ಧಪಡಿಸಲಾಗಿತ್ತು.

ಕಳೆದ ಜನವರಿ ೨೨ ರಂದು ಬೆಂಗಳೂರಿನ ಉದ್ಯೋಗ ಸೌಧದಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯವರ ಆಪ್ತ ಶಾಖೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಿರಿಯ ಎಂಜಿನಿಯರ್ ನೇಮಕಾತಿಯ ಆಯ್ಕೆ ಪಟ್ಟಿಯನ್ನು ಸ್ವೀಕರಿಸಿತ್ತು. ಆ ಬಳಿಕ ಕಡತ ನಾಪತ್ತೆಯಾಗದೆ. ಕೆಪಿಎಸ್‌ಸಿಯ ಎಲ್ಲಾ ಶಾಖೆಗಳಲ್ಲಿ ಕಡತಕ್ಕಾಗಿ ಶೋಧ ನಡೆಸಲಾಗಿದೆ. ನಂತರ ಕಡತ ಪತ್ತೆಯಾದಲ್ಲಿ ಕೂಡಲೇ ಶಾಖೇ-೨ಕ್ಕೆ ಹಿಂದುರುಗಿಸುವಂತೆ ಜ್ಞಾಪನ ಸಹ ಹೊರಡಿಸಿತ್ತು. ಸುಮಾರು ಒಂದು ತಿಂಗಳುಗಳ ಕಾಲ ಅಧಿಕಾರಿಗಳು ಮತ್ತು ಸಿಬ್ಬಂದಿ ಶೋಧ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಪ್ರತಿ ವಿಭಾಗಕ್ಕೂ ಭೇಟಿ ನೀಡಿ ಪತ್ತೆ ಹಚ್ಚಿ ವರದಿ ಸಲ್ಲಿಸಲು ಅಧಿಕಾರಿಗಳು/ಸಿಬ್ಬಂದಿಗಳ ತಂಡವನ್ನು ರಚಿಸಿತ್ತು. ಆದರೆ ಎಲ್ಲಿಯೂ ಕಡತ ಸಿಗದೆ ಇದ್ದಾಗ ಕಳೆದ ಮಾರ್ಚ್ ೧೩ ರಂದು ನಡೆದ ಕೆಪಿಎಸ್‌ಸಿಯ ೩೬ ನೇ ಸಭೆಯಲ್ಲಿ, ಪ್ರಕರಣ ದಾಖಲಿಸುವ ನಿರ್ಧಾರ ಕೈಗೊಂಡಿದ್ದಾರೆ. ಕಡತ ನಾಪತ್ತೆ ಬಗ್ಗೆ ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article