“ಕೋಲಾರ ಕಾಂಗ್ರೆಸ್ ಭಿನ್ನಮತ ಸ್ಫೋಟ” ಐವರು ‘ಕೈ’ ಶಾಸಕರ ರಾಜೀನಾಮೆ ಪ್ರಹಸನ; ಸಭಾಪತಿ ಕಚೇರಿಯಲ್ಲಿ ಹೈಡ್ರಾಮಾ!

Ravi Talawar
WhatsApp Group Join Now
Telegram Group Join Now

ಬೆಂಗಳೂರು, ಮಾರ್ಚ್​ 27: ಲೋಕಸಭೆ ಚುನಾವಣೆಗೆ ಕೋಲಾರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಉಂಟಾಗಿರುವ ಭಿನ್ನಮತ ಇದೀಗ ಸ್ಫೋಟಗೊಂಡಿದೆ. ಸಚಿವ ಕೆಹೆಚ್​​ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಕಾಂಗ್ರೆಸ್​​ನ ಪರಿಷತ್​ ಸದಸ್ಯರೂ ಸೇರಿದಂತೆ ಐವರು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಸಿಎಂ ಸಿದ್ದರಾಮಯ್ಯ  ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಹಾಗೂ ಇತರರು ವಿಧಾನಪರಿಷತ್​​ ಸಭಾಪತಿ ಕಚೇರಿಗೆ ತೆರಳಿ ಸಭಾಪತಿ ಬಸವರಾಜ ಹೊರಟ್ಟಿಗೆ ರಾಜೀನಾಮೆ ನೀಡಲು ಬುಧವಾರ ಮಧ್ಯಾಹ್ನ ಮುಂದಾದರು. ಈ ವೇಳೆ ನಾಟಕೀಯ ಬೆಳವಣಿಗೆಗಳು ನಡೆದವು.

ವಿಧಾನಪರಿಷತ್​​ ಸಭಾಪತಿ ಕಚೇರಿಯ ಹೊರಭಾಗದಲ್ಲಿ ಮಾತನಾಡಿದ ನಜೀರ್ ಅಹ್ಮದ್, ರಾಜೀನಾಮೆ ಕೊಡುವುದು ನಮ್ಮ ಹಕ್ಕು. ನಾವು ರಾಜೀನಾಮೆ ಕೊಡಬೇಕೆಂದೇ ಇಲ್ಲಿಗೆ ಬಂದಿದ್ದೆವು. ಆದರೆ, ರಾಜೀನಾಮೆ ಸ್ವೀಕರಿಸುವುದು ಬಿಟ್ಟು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬರುವವರೆಗೂ ಕಾಯಿರಿ ಎಂದಿದ್ದಾರೆ ಎಂದರು. ನಾನು ಯಾವಾಗ ಬೇಕಾದರೂ ರಾಜೀನಾಮೆ ನೀಡಬಹುದು. ಸಂಜೆ ಸಿಎಂ, ಡಿಸಿಎಂ ಜೊತೆಗೆ ನಾವು ಚರ್ಚೆ ಮಾಡುತ್ತೇವೆ ಎಂದ ನಜೀರ್ ಅಹ್ಮದ್, ಮುನಿಯಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾನು ಸಚಿವನಾಗಿದ್ದಾಗ ಮುನಿಯಪ್ಪ ಬ್ಯಾಗ್​ ಹಿಡಿದುಕೊಂಡು ಬರುತ್ತಿದ್ದ. ಕೆಎಚ್ ಮುನಿಯಪ್ಪ ಒಬ್ಬ ಪುಟಗೋಸಿ. ಮುನಿಯಪ್ಪ ಪುಟಗೋಸಿ ಬ್ಯಾಗ್​ ಹಿಡಿದುಕೊಂಡು ನನ್ ಹಿಂದೆ ಬರುತ್ತಿದ್ದ. ಆಗಲೇ ನಾನು ಸಚಿವನಾಗಿದ್ದೆ ಎಂದ ಅಹ್ಮದ್, ಕ್ಷೇತ್ರದಲ್ಲಿ ಗೆಲ್ಲುವಂತಹ ಅಭ್ಯರ್ಥಿಗೆ ಟಿಕೆಟ್​ ಕೊಡಬೇಕೆಂದು ಆಗ್ರಹಿಸಿದರು.

ಇನ್ನು ಶಾಸಕರ, ಪರಿಷತ್ ಸದಸ್ಯರ ರಾಜೀನಾಮೆ ವಿಚಾರವಾಗಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್​ ಪ್ರತಿಕ್ರಿಯಿಸಿದ್ದು, ಅವರನ್ನು ಸಮಾಧಾನ ಮಾಡಿ ಎಂದು ಸಿಎಂ, ಡಿಸಿಎಂ ನನಗೆ ಸೂಚಿಸಿದ್ದಾರೆ. ಅವರ ಜೊತೆ ಮಾತನಾಡಿ ನಾವು ತೀರ್ಮಾನ ಮಾಡುತ್ತೇವೆ. ಕೋಲಾರ ಕಾಂಗ್ರೆಸ್​ ಅಭ್ಯರ್ಥಿ ಆಯ್ಕೆ ಇನ್ನು ಅಂತಿಮ ಆಗಿಲ್ಲ. ನಾಳೆ ಅಥವಾ ನಾಡಿದ್ದು ಅಭ್ಯರ್ಥಿ ಘೋಷಣೆ ಆಗುವ ಸಾಧ್ಯತೆ ಇದೆ ಎಂದರು.

ರಾಜೀನಾಮೆಗೆ ಮುಂದಾದ ಶಾಸಕರು ಯಾರೆಲ್ಲ? ಕೊತ್ತೂರು ಮಂಜುನಾಥ್, ಕೋಲಾರ ಶಾಸಕ, ಕೆವೈ ನಂಜೇಗೌಡ, ಮಾಲೂರು ಶಾಸಕ, ಎಂಸಿ ಸುಧಾಕರ್, ಸಚಿವ, ಅನಿಲ್ ಕುಮಾರ್, ಪರಿಷತ್ ಸದಸ್ಯ, ನಜೀರ್ ಅಹ್ಮದ್, ಪರಿಷತ್ ಸದಸ್ಯ

ಪರಿಷತ್ ಸ್ಥಾನಕ್ಕೆ ನಜೀರ್ ಅಹ್ಮದ್, ಅನಿಲ್ ಕುಮಾರ್ ಇನ್ನೂ ರಾಜೀನಾಮೆ ಕೊಟ್ಟಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ರಾಜೀನಾಮೆ ಕೊಡದೇ ನಾವು ಕಸಿದುಕೊಳ್ಳುವುದಕ್ಕೆ ಬರುವುದಿಲ್ಲ. ಅವರು ರಾಜೀನಾಮೆ ಕೊಟ್ಟರೆ ನಾವು ಸ್ವೀಕಾರ ಮಾಡುತ್ತೇವೆ. ಅವರಿಗೆ ಒತ್ತಾಯ ಮಾಡಿ ನಾನು ರಾಜೀನಾಮೆ ಪಡೆಯಲು ಆಗಲ್ಲ ಎಂದರು.

ಕೋಲಾರದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಪ್ರತಿಕ್ರಿಯಿಸಿದ್ದು, ಯಾರೂ ರಾಜೀನಾಮೆ ನೀಡಿಲ್ಲ ಎಂದಿದ್ದಾರೆ. ಎಲ್ಲ ಶಾಸಕರ ಸಭೆ ನಡೆಸಿ ಆಭ್ಯರ್ಥಿಯನ್ನು ಗೆಲ್ಲಿಸುವಂತೆ ತಿಳಿಸಿದ್ದಾರೆ. ಅದಕ್ಕೆ ಎಲ್ಲರು ಸಮ್ಮತಿ ನೀಡಿದ್ದಾರೆ. ಕೆಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಸಿಗಲಿದೆ ಎಂದು ಕೋಲಾರದ ಪತ್ರಕರ್ತರ ಭವನದಲ್ಲಿ ಅವರು ಹೇಳಿದ್ದಾರೆ.

 

WhatsApp Group Join Now
Telegram Group Join Now
Share This Article