ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ: ಕೆಎಂಎಫ್‌ ಹೊಸ ದಾಖಲೆ

Ravi Talawar
WhatsApp Group Join Now
Telegram Group Join Now

ಬೆಂಗಳೂರು27: ತಾಪಮಾನ ಹೆಚ್ಚಳದಿಂದ ಬಸವಳಿದ ಜನ ಹಾಲು, ಮೊಸರು, ಐಸ್‌ ಕ್ರೀಮ್ ಬಳಕೆಯನ್ನು ಹೆಚ್ಚಳ ಮಾಡಿದ್ದು, ಇದರ ಪರಿಣಾಮ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಹಾಲು, ಮೊಸರು ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ.

ಕೆಎಂಎಫ್ ಒಂದೇ ದಿನ 51 ಲಕ್ಷ ಲೀಟರ್ ನಂದಿನಿ ಹಾಲು ಮತ್ತು 16.5 ಲಕ್ಷ ಲೀಟರ್ ಮೊಸರನ್ನು ಮಾರಾಟ ಮಾಡುವ ಮೂಲಕ ತನ್ನದೇ ದಾಖಲೆಯನ್ನು ಮುರಿದಿದೆ. ಇದರ ಜೊತೆಗೆ ಐಸ್ ಕ್ರೀಮ್ ಮಾರಾಟದಲ್ಲಿ ಕೂಡ ಭಾರೀ ಏರಿಕೆಯಾಗಿರುವುದು ಕಂಡು ಬಂದಿದೆ.

ಏಪ್ರಿಲ್ ಸಮಯದಲ್ಲಿ ಏಪ್ರಿಲ್ 9 ಮತ್ತು 15 ರ ನಡುವೆ – ಯುಗಾದಿ, ರಾಮ ನವಮಿ ಮತ್ತು ಈದ್-ಉಲ್-ಫಿತರ್‌ನಂತಹ ಹಬ್ಬಗಳು ಒಂದರ ನಂತರ ಒಂದರಂತೆ ಬಂದಿದ್ದು, ಹಾಲು ಮೊಸರಿನ ಮಾರಾಟ ಹೆಚ್ಚಳಕ್ಕೆ ಇದೂ ಒಂದು ಕಾರಣವಾಗಿದೆ ಎಂದು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಹೇಳಿದ್ದಾರೆ.

ಈ ಬಾರಿ ಮೊಸರು ತಯಾರಿಕೆಯಲ್ಲಿ ಸುಧಾರಣೆಗಳನ್ನು ಮಾಡಿದ್ದೇವೆ. ಇದರಿಂದ ಮೊಸರು ಮಾರಾಟದಲ್ಲಿ ಭಾರಿ ಹೆಚ್ಚಳವಾಗುತ್ತಿರುವುದು ಕಂಡು ಬಂದಿದೆ. ದಿನಕ್ಕೆ ಎರಡು ಬಾರಿ ಉತ್ಪನ್ನಗಳನ್ನು ಪೂರೈಸುತ್ತಿದ್ದೇವೆ. ಕೆಲವು ಪ್ರದೇಶಗಳಲ್ಲಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಬಾರಿ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹೆಚ್ಚುತ್ತಿರುವ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ಪೂರೈಕೆ-ಸರಪಳಿಯಲ್ಲಿ ಸುಧಾರಣೆಗಳನ್ನು ಮಾಡಲಾಗಿದೆ. ರಾಜ್ಯದಲ್ಲಿ ಕೋಲ್ಡ್ ಸ್ಟೋರೇಜ್‌ಗಳ ಕಾರ್ಯನಿರ್ವಹಣೆ ಮತ್ತು ನಿರ್ವಹಣೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಈ ಮೊದಲು ನಂದಿನಿ ಹಾಲು ಮಾರಾಟ 44 ಲಕ್ಷ ಲೀಟರ್ ದಾಟಿರಲಿಲ್ಲ. ಆದರೆ, ಈ ವರ್ಷ ಒಂದೇ ದಿನ 48 ಲಕ್ಷ ಲೀಟರ್ ಮಾರಾಟವಾಗಿದೆ. ಮೊಸರು ಮತ್ತು ಮಜ್ಜಿಗೆ ಕೂಡ ಇದೇ ರೀತಿ ಮಾರಾಟವಾಗುತ್ತಿದೆ.. ದಿನಕ್ಕೆ 8 ರಿಂದ 8.5 ಲಕ್ಷ ಲೀಟರ್‌ಗಳ ನಡುವೆ ಮಾರಾಟವಾಗುತ್ತಿತ್ತು. ಈ ಬಾರಿ ಅದು ದ್ವಿಗುಣವಾಗಿದೆ.ಮೊಸರು ಮಾರಾಟದಲ್ಲಿ ಎರಡು ಮೈಲಿಗಲ್ಲುಗಳನ್ನು ಮುಟ್ಟಿದ್ದೇವೆ. ಮೊದಲ ವಾರದಲ್ಲಿ 11.5 ಲಕ್ಷ ಲೀಟರ್ ಮಾರಾಟವಾಗಿತ್ತು. ನಂತರ ಐದು ದಿನಗಳಲ್ಲಿ, ಇದು 16.5 ಲಕ್ಷ ಲೀಟರ್‌ಗೆ ಏರಿಕೆಯಾಯಿತು. ಜನರ ನಂದಿನಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆಂದು ಜಗದೀಶ್ ಹೇಳಿದ್ದಾರೆ.

ನಂದಿನಿ ಐಸ್‌ಕ್ರೀಂ ಮಾರಾಟದಲ್ಲಿ ಕೂಡ ಭಾರಿ ಹೆಚ್ಚಳವಾಗಿದೆ. ಈ ವರ್ಷ ಐಸ್‌ಕ್ರೀಮ್ ಮಾರಾಟದಲ್ಲಿ ಶೇ.40 ಹೆಚ್ಚಳ ಕಂಡು ಬಂದಿದೆ. ಫೆಬ್ರವರಿಯಲ್ಲೇ ರಾಜ್ಯದಲ್ಲಿ ತಾಪಮಾನ ಹೆಚ್ಚಿದ್ದ ಕಾರಣ, ಹೆಚ್ಚುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪೂರೈಕೆಗೆ ಸಿದ್ಧರಾಗಿದ್ದೆವು. ಮಾರಾಟ ಹೆಚ್ಚಳದೊಂದಿಗೆ ಈ ವರ್ಷದ ತ್ರೈಮಾಸಿಕದಲ್ಲಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೇವೆ. ಶೀಘ್ರದಲ್ಲೇ ಬೇಸಿಗೆಯ ವಿಶೇಷ ಪಾನೀಯಗಳನ್ನು ಮಾರುಕಟ್ಟೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article