ಇಂಡಿ: ಮಕ್ಕಳ ಶಿಕ್ಷಣ ಹಕ್ಕು ಮೊಟಕುಗೊಳಿಸಿ, ಅವರ ಮದುವೆ ಮಾಡುವುದು ಬಾಲ್ಯ ವಿವಾಹ ಕಾಯ್ದೆಯ ಪ್ರಕಾರ ಅಪರಾಧವಾಗಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿ, ಆರೋಗ್ಯಕ್ಕೆ ಹಾನಿಕಾರಕವಾದ ಬಾಲ್ಯವಿವಾಹ ತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಸಂವಿಧಾನದ ಅನುಚ್ಛೇದ ೨೧ ಎ ಪ್ರಕಾರ ೦೬ ರಿಂದ ೧೪ ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಮೂಲಭೂತ ಹಕ್ಕು ಆಗಿರುತ್ತದೆ. ಮಕ್ಕಳನ್ನು ಶಾಲೆ ಬಿಡಿಸಿ ಮದುವೆ ಮಾಡುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತದೆ.
ಪೋಷಕರು ಮಕ್ಕಳಿಗೆ ಶಾಲೆ ಬಿಡಿಸಿ ಮದುವೆ ಮಾಡುವ ಆಲೋಚನೆ ಮಾಡಬಾರದು ಎಂದು ಅಭಿಪ್ರಾಯಪಟ್ಟರು.
ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ, ಮಕ್ಕಳ ಮದುವೆ ಮಾಡುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆಟವಾಡುವ, ಓದುವ ವಯಸ್ಸಿನಲ್ಲಿ ಸಂಸಾರ, ಕುಟುಂಬ ನಿರ್ವಹಣೆಗೆ ತಳ್ಳುವುದು ಸರಿಯಾದ ಕ್ರಮವಲ್ಲ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಎಸ್ ಅರಬ, ಬಾಲ್ಯ ವಿವಾಹಕ್ಕೆ ಬಡತನ, ಅನಕ್ಷರತೆ, ಮೌಢ್ಯ ಕಾರಣವಾಗಿದ್ದು, ಈ ಮೂರನ್ನು ನಿರ್ಮೂಲನೆ ಮಾಡಿದಾಗ ಮಾತ್ರ ಈ ಪದ್ಧತಿ ಹೋಗಲಿದೆ. ಗ್ರಾಮೀಣ ಭಾಗದಲ್ಲಿ ಇದರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಶಿಕ್ಷಕಿ ಎಸ್ ಪಿ ಪೂಜಾರಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.