ಇಂಡಿ: ಇಂದು ಬೆಳಿಗ್ಗೆ ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಇಂಡಿ ಪಟ್ಟಣದ ವಿವಿಧ ಬಡಾವಣೆಗಳಿಗೆ ಭೇಟಿ ಮಾಡಿ ಅಲ್ಲಿರುವ ಗಣೇಶ ಉತ್ಸವ ಸಮಿತಿಯ ಪದಾಧಿಕಾರಿಗಳ ಜೊತೆ ಸಮಾಲೋಚಿಸುತ್ತಾ, ಪಿಓಪಿ ಗಣೇಶ ಮೂರ್ತಿಗಳ ಬದಲಾಗಿ ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ,ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ವಿನಂತಿ ಮಾಡಿಕೊಂಡರು ಹಾಗೂ ಗಣೇಶ ಹಬ್ಬ ಆಚರಿಸಲು ಪುರಸಭೆಯಿಂದ ಲಭ್ಯವಿರುವ ಅವಕಾಶಗಳ ಕುರಿತು ಅವರೊಂದಿಗೆ ಚರ್ಚಿಸಿ, ಸುವ್ಯವಸ್ಥಿತ ಹಬ್ಬ ಆಚರಣೆಗೆ ಸಹಕಾರ ಕೋರಿದರು.
ಹಾಗೆಯೇ ಸಾಮೂಹಿಕವಾಗಿ ಗಣೇಶ ವಿಸರ್ಜನೆ ಮಾಡುವ ಸ್ಥಳಕ್ಕೆ ಭೇಟಿ ನೀಡಿ,ಅಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಮೆಗಾ ಮಾರ್ಕೆಟ್ ಕಾಮಗಾರಿಯನ್ನು ಪರಿಶೀಲಿಸಿದರು.ಬಿ ಎಸ್ ಎನ್ ಎಲ್ ಕಚೇರಿ ಸಮೀಪದ ಸೇವಾ ಕೇಂದ್ರಕ್ಕೆ ಭೇಟಿ ಮಾಡಿ, ಸಾರ್ವಜನಿಕರೊಂದಿಗೆ ಅಲ್ಲಿನ ಕುಂದುಕೊರತೆಗಳ ಬಗ್ಗೆ ಚರ್ಚಿಸಿದರು.
ಪಟ್ಟಣದ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ಮಾಡಿ, ಅಲ್ಲಿರುವ ವಿವಿಧ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿ,
ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳುವ ಬಸ್ ಗಳನ್ನು ಪಕ್ಕದ ಹಳೆಯ ಡಿಪೋ ಸ್ಥಳದಲ್ಲಿ ನಿಲ್ಲಿಸಿ,ಅಲ್ಲಿಂದ ಹೋಗಿಬರುವ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಡೀ ಬಸ್ ನಿಲ್ದಾಣದ ಸ್ವಚ್ಛತೆಯ ಜೊತೆಗೆ ನಿಲ್ದಾಣದಲ್ಲಿ ಇರುವ ಶೌಚಾಲಯಗಳ ಸ್ವಚ್ಚತೆಗೆ ಪ್ರತಿನಿತ್ಯ ಆದ್ಯ ಗಮನ ನೀಡಬೇಕೆಂದು ಡಿಪೋ ಮ್ಯಾನೇಜರ್ ಎಸ್ ಬಿ ಬಿರಾದಾರ ಅವರಿಗೆ ಕಟ್ಟುನಿಟ್ಟಾಗಿ ತಾಕೀತು ಮಾಡಿದರು.
ಸಂಚಾರ ದಟ್ಟಣೆ ತಡೆಗಟ್ಟಲು ಬಸವೇಶ್ವರ ವೃತ್ತದಲ್ಲಿ ಇರುವ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಪುನರ್ ಆರಂಭಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿಗಳಾದ ಮಹಾಂತೇಶ ಹಂಗರಗಿ,ಆರೋಗ್ಯಾಧಿಕಾರಿ ಎಲ್ ಎಸ್ ಸೋಮನಾಯಕ,
ಪೊಲೀಸ್ ಇಲಾಖೆಯ ಸಿಪಿಆಯ್ ರತನಕುಮಾರ ಜೀರಗಾಳ,ಸಾರಿಗೆ ಇಲಾಖೆಯ ಡಿಪೋ ಮ್ಯಾನೇಜರ್ ಎಸ್ ಬಿ ಬಿರಾದಾರ ಹಾಜರಿದ್ದರು.