ಪೂಂಚ್​ನಲ್ಲಿ ಉಗ್ರರ ಪತ್ತೆ ಕಾರ್ಯಾಚರಣೆ ಚುರುಕು: ಶಂಕಿತರ ಬಂಧಿಸಿ ವಿಚಾರಣೆ, ಹೆಚ್ಚುವರಿ ಪಡೆ ರವಾನೆ

Ravi Talawar
WhatsApp Group Join Now
Telegram Group Join Now

ಪೂಂಚ್ : ಜಮ್ಮು- ಕಾಶ್ಮೀರದ ಪೂಂಚ್​ನಲ್ಲಿ ವಾಯುಸೇನಾ ವಾಹನದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಸಾವಿಗೀಡಾಗಿ, ನಾಲ್ವರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಭದ್ರತಾ ಪಡೆಗಳು ಮೂರು ದಿನಗಳಿಂದ ಉಗ್ರರ ಪತ್ತೆ ಕಾರ್ಯಾಚರಣೆ ಚುರುಕಿನಿಂದ ನಡೆಸುತ್ತಿವೆ. ಶಂಕಿತ ವ್ಯಕ್ತಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮೇ 4 ರಂದು ಸಂಜೆ ವಾಯುಪಡೆಯ ವಾಹನಗಳ ಮೇಲೆ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಐವರು ಯೋಧರು ತೀವ್ರವಾಗಿ ಗಾಯಗೊಂಡಿದ್ದರು. ಇದರಲ್ಲಿ ಒಬ್ಬರು ಮರುದಿನ ಹುತಾತ್ಮರಾಗಿದ್ದರು. ಪಕ್ಕದಲ್ಲೇ ಇದ್ದ ಅರಣ್ಯದಲ್ಲಿ ಉಗ್ರರು ತಲೆಮರೆಸಿಕೊಂಡಿದ್ದರು.

ಭಾರತೀಯ ಸೇನೆಯ ಪೊಲೀಸ್ ಪ್ಯಾರಾ ಮಿಲಿಟರಿ ಪಡೆಗಳೊಂದಿಗೆ ಪೂಂಚ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಗುಂಡು ನಿರೋಧಕ ವಾಹನಗಳು ಗಸ್ತು ತಿರುಗುತ್ತಿದ್ದು, ವಾಹನ ತಪಾಸಣೆಗಾಗಿ ಶ್ವಾನದಳ ನಿಯೋಜಿಸಲಾಗಿದೆ. ನಾಗರಿಕರ ಸುರಕ್ಷತೆಗಾಗಿ ಭಯೋತ್ಪಾದಕರ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಬು ಹಮ್ಜಾ ಸಂಘಟನೆಯಿಂದ ದಾಳಿ?: ಭಾರತೀಯ ವಾಯುಪಡೆ ವಾಹನದ ಮೇಲೆ ನಡೆದ ದಾಳಿಯ ಹಿಂದೆ ಲಷ್ಕರ್ ಎ ತೊಯ್ಬಾ (ಎಲ್​ಇಟಿ)ಉಗ್ರ ಸಂಘಟನೆಯ ವಿದೇಶಿ ಸಹ ಸಂಘಟನೆಯಾದ ಅಬು ಹಮ್ಜಾದ ಕೈವಾಡ ಇದೆ ಎಂದು ಶಂಕಿಸಲಾಗಿದೆ. ರಜೌರಿಯಲ್ಲಿ ಸರ್ಕಾರಿ ನೌಕರನಾಗಿರುವ ಮೊಹಮ್ಮದ್ ರಜಾಕ್ ದಾಳಿಯ ಮಾಸ್ಟರ್ ಮೈಂಡ್ ಎಂಬ ಸುಳಿವೂ ಸಿಕ್ಕಿದೆ.

ದಾಳಿಯ ಮಾಸ್ಟರ್​ಮೈಂಡ್​ ಎಂದು ಹೇಳಲಾಗುವ ಮೊಹಮ್ಮದ್ ರಜಾಕ್​​ ತಲೆಗೆಗೆ 10 ಲಕ್ಷ ರೂಪಾಯಿ ಇನಾಮು ಘೋಷಿಸಲಾಗಿದೆ. ಈತನ ಸುಳಿವು ನೀಡಿದವರಿಗೆ ಸರ್ಕಾರ ನಗದು ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ಪೂಂಚ್ ಮತ್ತು ರಾಜೌರಿ ಕಾಡಿನಲ್ಲಿ ದಾಳಿಕೋರರು ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸೇನೆ ಮತ್ತು ಪೊಲೀಸ್ ಪಡೆಗಳ ಹಿರಿಯ ಅಧಿಕಾರಿಗಳು ದಾಳಿ ಸ್ಥಳಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿದ್ದಾರೆ.

ಉಗ್ರರು ತಪ್ಪಿಸಿಕೊಳ್ಳದಂತೆ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿವೆ. ಜೊತೆಗೆ, ಕಾರ್ಯಾಚರಣೆಗೆ ನೆರವಾಗಲು ಹೆಚ್ಚುವರಿ ಪಡೆಗಳನ್ನು ಶನಿವಾರ ರಾತ್ರಿ ಪೂಂಚ್​ಗೆ ಕರೆತರಲಾಗಿದೆ.

ವಾಹನಗಳಿಗೆ ಹಾನಿ: ಎಕೆ ಅಸಾಲ್ಟ್ ರೈಫಲ್‌ಗಳನ್ನು ಹೊಂದಿದ್ದ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಸೇನಾ ಟ್ರಕ್‌ಗೆ ಹೆಚ್ಚಿನ ಹಾನಿಯಾಗಿದೆ. ದಾಳಿ ಬಳಿಕ ಹತ್ತಿರದ ಅರಣ್ಯಪ್ರದೇಶದೊಳಗೆ ಉಗ್ರರು ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article