ಮತದಾನ ಪ್ರಮಾಣ ಹೆಚ್ಚಳಕ್ಕೆ ‘ಫ್ಲೆಕ್ಸ್’ ಅಳವಡಿಕೆ: ಚುನಾವಣೆಗೆ ಮೆರುಗು ತಂದ ‘ಸ್ವೀಪ್’ ಚಟುವಟಿಕೆ

Ravi Talawar
WhatsApp Group Join Now
Telegram Group Join Now
ಬಳ್ಳಾರಿ,ಏ.06 ಮತದಾನ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಚುನಾವಣೆಯಲ್ಲಿ ಭಾಗವಹಿಸಲು ಜನರನ್ನು ಉತ್ತೇಜಿಸಲು ಮತದಾನ ಪ್ರಚಾರಗಳು ಮುಖ್ಯವಾಗಿದೆ.  ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಬಳ್ಳಾರಿ ಜಿಲ್ಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ (ಸಿಸ್ಟಮ್ಯಾಟಿಕ್ ವೋಟರ್ ಎಜುಕೇಷನ್ ಅಂಡ್ ಎಲೊಕ್ಟ್ರೋಲ್ ಪಾರ್ಟಿಸಿಪೇಷನ್) ಸಮಿತಿ ನಾನಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಜಿಲ್ಲೆಯ ಐದು ತಾಲೂಕುಗಳಲ್ಲಿನ ಪ್ರತಿಯೊಂದು ಗ್ರಾಮಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ಚುನಾವಣಾ ಜಾಗೃತಿ ಮೂಡಿಸುವ ಬ್ಯಾನರ್‍ಗಳನ್ನು ಹಾಕಲಾಗಿದೆ. ಈ ಮೂಲಕ ಕಡ್ಡಾಯ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು, ಗ್ರಾಮ ಪಂಚಾಯತ್‍ಗಳ ಪ್ರಮುಖ ವೃತ್ತಗಳು, ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣೆಯ ವಿಭಿನ್ನ ಮಾದರಿಯ ಫ್ಲೆಕ್ಸ್‍ಗಳು ಜನರ ಗಮನ ಸೆಳೆಯುತ್ತಿವೆ.
‘ನಮ್ಮ ರಾಷ್ಟ್ರವನ್ನು ಮುನ್ನೆಡಸಲು ಒಂದಾಗೋಣ- ಮತ ಚಲಾಯಿಸೋಣ’, ‘ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸೋಣ, ದೇಶವನ್ನು ಅಭಿವೃದ್ಧಿಯತ್ತ ಸಾಗಿಸೋಣ’, ‘ನನ್ನ ಮತ ನನ್ನ ಹಕ್ಕು’, ‘ಈಗ ನೀವು ಓಟರ್ ಹೆಲ್ಪ್‍ಲೈನ್ ಆಪ್‍ನ್ನು ಬಳಸಿ ಮತದಾರರ ಚೀಟಿಯನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು’, ‘ನೀವು ಎಂಸಿಸಿ ಯ ಉಲ್ಲಂಘನೆಗಳನ್ನು ವರದಿ ಮಾಡಬಹುದು ಮತ್ತು ಲೈವ್ ಘಟನೆಗಳನ್ನು ಸೆರೆಹಿಡಿಯಬಹುದು’, ಹೀಗೆ ವಿವಿಧ ರೀತಿಯ ಆಕರ್ಷಕ ಬರಹ ಇರುವ ಫ್ಲೆಕ್ಸ್‍ಗಳು ನಗರದ ವಿವಿಧೆಡೆ ರಾರಾಜಿಸುತ್ತಿವೆ.
ಚುನಾವಣಾ ಆಯೋಗವು ಲೋಕಸಭೆ ಸಾರ್ವತ್ರಿಕ ಚುನಾವಣೆಯ ದಿನಾಂಕ ಘೋಷಿಸಿದ ಕ್ಷಣದಿಂದ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯು ಮತದಾನ ಜಾಗೃತಿ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದೆ. ಅದರಲ್ಲೂ ಕಡಿಮೆ ಮತದಾನವಾದ ಮತಗಟ್ಟೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಕಾಳಜಿವಹಿಸಿ ಮತದಾರರಿಗೆ ಮತದಾನದ ಮಹತ್ವ ತಿಳಿಸುವ ಕಾರ್ಯಕ್ಕೆ ಮುಂದಾಗಿದೆ.
ಮತದಾರರನ್ನು ಮತದಾನಕ್ಕೆ ಪ್ರೇರೇಪಿಸಲು ವಿವಿಧೆಡೆ ಮತದಾನ ಜಾಗೃತಿಗಳಲ್ಲಿ ‘ನಾನು ಹೆಮ್ಮೆಯ ಮತದಾರ’ ಎಂಬ ಸೆಲ್ಫಿ ಸ್ಥಳಗಳನ್ನು ನಿರ್ಮಿಸಲಾಗುತ್ತಿದೆ. ಕಡಿಮೆ ಮತದಾನ ಆಗಿರುವ ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಚುನಾವಣಾ ಸಿಬ್ಬಂದಿ ಭೇಟಿ ನೀಡುತ್ತಿದ್ದಾರೆ. ಮನೆಗೆ ಮನೆಗೆ ತೆರಳಿ ಮೇ 07 ರಂದು ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
ಅಲ್ಲದೇ, ಮತ ನೀಡುವುದಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಮಿಷಕ್ಕೆ ಒಳಗಾಗಿ ಮೋಸ ಹೋಗದಂತೆ ಮತದಾರರಿಗೆ ಈ ಮೂಲಕ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ.
‘ಯಾವುದೇ ಆಮಿಷ, ಒತ್ತಡಕ್ಕೆ ಒಳಗಾಗದೇ ಸ್ವಯಂ ಇಚ್ಛೆಯಿಂದ ನಿರ್ಧಾರ ಕೈಗೊಂಡು ಮತದಾನ ಮಾಡಬೇಕು. ಯಾರಾದರೂ ಆಮಿಷಕ್ಕೆ ಒಳಪಡಿಸಲು ಪ್ರಯತ್ನಿಸಿದರೆ ಅಂತಹ ವಿಚಾರಗಳ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಅಧಿಕಾರಿಗಳ ತಂಡಗಳು ಮನವಿ ಮಾಡುತ್ತಿದೆ.
ಚುನಾವಣೆಯಲ್ಲಿ ಅಕ್ರಮ ಕಂಡಲ್ಲಿ ಚಿತ್ರೀಕರಿಸಿ ದೂರು ದಾಖಲಿಸಬಹುದಾದ ‘ಸಿವಿಜಿಲ್’  ಆಪ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುತ್ತಿದೆ. ಇದಕ್ಕಾಗಿ ‘ನೀವು ಎಂಸಿಸಿ ಯ ಉಲ್ಲಂಘನೆಗಳನ್ನು ವರದಿ ಮಾಡಬಹುದು ಮತ್ತು ಲೈವ್ ಘಟನೆಗಳನ್ನು ಸೆರೆಹಿಡಿಯಬಹುದು’ ಎಂಬ ಬರಹದ ಫ್ಲೆಕ್ಸ್‍ಗಳನ್ನು ಅಧಿಕವಾಗಿ ಆಳವಡಿಸಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯಲ್ಲಿ ಮತದಾನ ಜಾಗೃತಿಯ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆಗೆ ಸ್ವೀಪ್ ಸಮಿತಿ ಉದ್ದೇಶಿಸಿದೆ. ನರೇಗಾ ಕಾಮಗಾರಿ ಸ್ಥಳಗಳಲ್ಲಿ ಮತದಾನ ಜಾಗೃತಿ, ಸೈಕಲ್ ಜಾಥಾ, ವಾಕಾಥಾನ್, ಸ್ಪೀಕಥಾನ್, ವಿಶೇಷ ಚೇತನರಿಂದ ಬೈಕ್ ರ್ಯಾಲಿ, ಭಾಷಣ ಸ್ಪರ್ಧೆ ಸೇರಿದಂತೆ ಇತರೆ ಚಟುವಟಿಕೆಗಳನ್ನು ಜಿಲ್ಲೆಯ ಐದು ತಾಲೂಕುಗಳಲ್ಲಿ ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ.
ವಲಸೆಯಿಂದ ಮತದಾನ ಪ್ರಮಾಣ ಕಡಿಮೆಯಾಗದಂತೆ ಕ್ರಮವಹಿಸಲಾಗಿದೆ. ಜಿಲ್ಲಾ ಪಂಚಾಯತ್ ವತಿಯಿಂದ ಜೀವನ ನಿರ್ವಹಣೆಗೆ ಉದ್ಯೋಗ ಅರಸಿ ವಲಸೆ ಹೋಗುವವರನ್ನು ತಪ್ಪಿಸಲು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯು ಒಂದು ಅತ್ಯಂತ ಮಹತ್ವಪೂರ್ಣ ಕಾರ್ಯವಾಗಿದ್ದು, ಪ್ರತಿಯೊಬ್ಬ ನಾಗರಿಕರು ಮೇ 07 ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ತಪ್ಪದೇ ಭಾಗವಹಿಸಬೇಕು’ ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಕೋರಿದ್ದಾರೆ.

WhatsApp Group Join Now
Telegram Group Join Now
Share This Article