ಕಾಂಗ್ರೆಸ್ ಗೆದ್ದರೆ ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ಹೆಚ್ಚಳ: ರಾಹುಲ್ ಗಾಂಧಿ ಭರವಸೆ

Ravi Talawar
WhatsApp Group Join Now
Telegram Group Join Now

ರತ್ಲಾಮ್06: ಜಾತಿ ಆಧಾರಿತ ಮೀಸಲಾತಿಗೆ ಸುಪ್ರೀಂ ಕೋರ್ಟ್ ಆದೇಶಿಸಿದ ಶೇ. 50ರಷ್ಟು ಮಿತಿಯನ್ನು ಕಾಂಗ್ರೆಸ್ ತೆಗೆದುಹಾಕುತ್ತದೆ. ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ಜನರಿಗೆ ಮೀಸಲಾತಿ ಕೋಟಾ ಪ್ರಯೋಜನಗಳನ್ನು ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಭರವಸೆ ನೀಡಿದ್ದಾರೆ.

ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಈ ಚುನಾವಣೆಯಲ್ಲಿ ಸಂವಿಧಾನವನ್ನು ಉಳಿಸಲು ಹೋರಾಡಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಮತ್ತು ಆರೆಸ್ಸೆಸ್ ಸಂವಿಧಾನವನ್ನು ಮುಗಿಸಲು ಬಯಸುತ್ತದೆ. ಇದನ್ನು ಬದಲಾಯಿಸಲು ಬಯಸುತ್ತದೆ. ಆದರೆ, ಕಾಂಗ್ರೆಸ್ ಮತ್ತು ಇಂಡಿಯಾ ಬಣವು ಸಂವಿಧಾನವನ್ನು ಉಳಿಸಲು ಪ್ರಯತ್ನಿಸುತ್ತಿದೆ. ಈ ಸಂವಿಧಾನವು ನಿಮಗೆ ಜಲ (ನೀರು), ಅರಣ್ಯ, ಜಮೀನಿನ ಮೇಲೆ ಹಕ್ಕುಗಳನ್ನು ನೀಡಿದೆ. ನರೇಂದ್ರ ಮೋದಿ ಆ ಹಕ್ಕುಗಳನ್ನು ತೆಗೆದುಹಾಕಲು ಬಯಸಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ನಾಯಕರು ಘೋಷಿಸಿದ್ದರು. ಅದಕ್ಕಾಗಿಯೇ ಅವರು ‘400 ಸೀಟು’ ಪಡೆಯುವುದಾಗಿ ಘೋಷಣೆ ಮಾಡಿದರು. ಆದರೆ 400 ಅನ್ನು ಮರೆತುಬಿಡಿ ಅವರಿಗೆ 150 ಸೀಟುಗಳು ಸಿಗುವುದೂ ಕಷ್ಟವಿದೆ. ಅವರು ಮೀಸಲಾತಿಯನ್ನು ತೆಗೆದುಹಾಕುತ್ತೇವೆ ಎಂದು ಹೇಳುತ್ತಾರೆ. ನಾನು ಈ ಹಂತದಿಂದಲೇ ನಿಮಗೆ ಹೇಳಲು ಬಯಸುತ್ತೇನೆ, ನಾವು ಶೇ. 50ರ ಮಿತಿಯನ್ನು ಮೀರಿ ಮೀಸಲಾತಿಯನ್ನು ಹೆಚ್ಚಿಸುತ್ತೇವೆ. ಬಡವರು, ಹಿಂದುಳಿದವರು, ದಲಿತರು, ಆದಿವಾಸಿಗಳಿಗೆ ಅಗತ್ಯವಿರುವಷ್ಟು ಮೀಸಲಾತಿ ನೀಡುತ್ತೇವೆ’’ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ಲೋಕಸಭೆ ಚುನಾವಣೆಯ ಪ್ರಚಾರ ಮತ್ತು ಎನ್‌ಡಿಎ ಮತ್ತು ಇಂಡಿಯಾ ಬಣದ ನಡುವೆ ಮೀಸಲಾತಿ ಕುರಿತು ಬಿಸಿಯಾದ ಚರ್ಚೆಯ ನಡುವೆ ರಾಹುಲ್ ಗಾಂಧಿ ಈ ಹೇಳಿಕೆಗಳನ್ನು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮುಸ್ಲಿಮರಿಗೆ ಅನುಕೂಲವಾಗುವಂತೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ಆರೋಪಿಸಿದೆ. ಆದರೆ, ಆ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ. ಗುಜರಾತ್ ಬನಸ್ಕಾಂತದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಧರ್ಮದ ಹೆಸರಿನಲ್ಲಿ ಮೀಸಲಾತಿಯನ್ನು ಎಂದಿಗೂ ದುರುಪಯೋಗಪಡಿಸಿಕೊಳ್ಳುವುದಿಲ್ಲ ಮತ್ತು ಸಂವಿಧಾನದೊಂದಿಗೆ ಆಟವಾಡುವುದಿಲ್ಲ ಎಂದು ಘೋಷಿಸುವಂತೆ ನಾನು ಕಾಂಗ್ರೆಸ್ ಮತ್ತು ಅವರ ಪಕ್ಷ ಮತ್ತು ಅದರ ಬೆಂಬಲಿಗರಿಗೆ ಸವಾಲು ಹಾಕುತ್ತೇನೆ ಎಂದಿದ್ದರು.

WhatsApp Group Join Now
Telegram Group Join Now
Share This Article